‘ಬಿಜೆಪಿಯಲ್ಲಿ ಕಮಿಷನ್‌ ತೆಗೆದುಕೊಳ್ಳುವ ಮಂತ್ರಿಗಳು ಯಾರೂ ಇಲ್ಲ’; ಉಮೇಶ್ ಕತ್ತಿ

ಹೈಲೈಟ್ಸ್‌:

  • ಕಮೀಷನ್‌ ತೆಗೆದುಕೊಳ್ಳುವ ಮಂತ್ರಿಗಳು ಬಿಜೆಪಿಯಲ್ಲಿಲ್ಲ.
  • ಅಂತಹ ಮಾಹಿತಿ ತಮ್ಮಲ್ಲಿದ್ದರೆ ಕೋರ್ಟ್‌ ಮೊರೆ ಹೋಗಲಿ
  • ಅವರ ಕಾಲದಲ್ಲಿದ್ದ ಕಮೀಷನ್‌ ದಂಧೆ ಈಗ ನೆನಪಾಗಿರಬಹುದು
  • ಡಿ.ಕೆ.ಶಿವಕುಮಾರ್‌ಗೆ ಸಚಿವ ಉಮೇಶ ಕತ್ತಿ ತಿರುಗೇಟು

ಬಾಗಲಕೋಟೆ: ಕಮೀಷನ್‌ ತೆಗೆದುಕೊಳ್ಳುವ ಮಂತ್ರಿಗಳು ಬಿಜೆಪಿಯಲ್ಲಿಲ್ಲ, ಅಂತಹ ಮಾಹಿತಿ ತಮ್ಮಲ್ಲಿದ್ದರೆ ಕೋರ್ಟ್‌ ಮೊರೆ ಹೋಗಲಿ, ಇಲ್ಲವೇ ಪೊಲೀಸರಿಗೆ ದೂರು ನೀಡಲಿ ಎಂದು ಸಚಿವ ಉಮೇಶ ಕತ್ತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದರು.

ಕೋವಿಡ್‌ ನಿರ್ವಹಣೆಯಲ್ಲಿ ಬಿಜೆಪಿ ಸಚಿವರಿಂದ ಕಮೀಷನ್‌ ದಂಧೆ ನಡೆಯುತ್ತಿದೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡಿಕೆಶಿಯೂ ಮಂತ್ರಿ ಆಗಿದ್ದವರು. ಅವರ ಕಾಲದಲ್ಲಿ ಪಡೆಯುತ್ತಿರುವ ಕಮೀಷನ್‌ ದಂಧೆ ಈಗ ಅವರಿಗೆ ನೆನಪಾಗಿರಬಹುದು. ನಮ್ಮಲ್ಲಿ ಕಮೀಷನ್‌ ಪಡೆದುಕೊಳ್ಳುವ ಮಂತ್ರಿಗಳಾರೂ ಇಲ್ಲ, ಡಿಕೆಶಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಿ ಖಚಿತ ಮಾಹಿತಿಯೊಂದಿಗೆ ಮಾತನಾಡಿದರೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು.

ಲಾಕ್‌ ಮುಂದುವರಿಕೆ:
ಲಾಕ್‌ಡೌನ್‌ ಮುಂದುವರಿಯುವ ಸುಳಿವು ನೀಡಿದ ಸಚಿವರು, ರಾಜ್ಯದಲ್ಲಿ 3 ದಿನ ಕಂಪ್ಲೀಟ್‌ ಲಾಕ್‌ ಮಾಡಬೇಕೆಂಬ ವಿಚಾರವಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಪೂರ್ಣ ಲಾಕ್‌ ಘೋಷಣೆ ಆಗಬಹುದು. ಕೋವಿಡ್‌ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ಕೇಳುತ್ತಿರುವುದು ಗಮನಕ್ಕೆ ಬಂದಿದ್ದು ಅಂತಹ ಆಸ್ಪತ್ರೆಗಳನ್ನು ಸೀಜ್‌ ಮಾಡಲು ಮುಂದಾಗಿದ್ದೇವೆ. ರಬಕವಿ-ಬನಹಟ್ಟಿಯಲ್ಲಿ ಹೆಚ್ಚು ಹಣ ಪಡೆಯುತ್ತಿದ್ದ ಸಿಟಿಸ್ಕ್ಯಾನ್‌ ಸೀಜ್‌ ಮಾಡಲು ತಿಳಿಸಿದ್ದೇವೆ. ಎಷ್ಟು ಸಾಧ್ಯವಿದೆಯೋ ಅಷ್ಟು ಕ್ರಮಕ್ಕೆ ಮುಂದಾಗುತ್ತೇವೆ ಎಂದರು.

ಕೊರತೆಗೆ ಕಾಂಗ್ರೆಸ್‌ ಕಾರಣ:
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿದ್ದರಿಂದಲೇ ಸದ್ಯ ದೇಶದ ಜನತೆಗೆ ಲಸಿಕೆ ಕೊರತೆ ಎದುರಾಗಿದೆ. ಮೈಂಡ್‌ ಮೆಚ್ಯುರಿಟಿ ಆಗದ ರಾಹುಲ್‌ಗಾಂಧಿಗೆ ಪ್ರಧಾನಿಯನ್ನು ಟೀಕಿಸುವುದೇ ದೊಡ್ಡ ಕೆಲಸ ಆಗಿದೆ. ಭಾರತದಲ್ಲಿ ಮೋದಿ ಲಸಿಕೆ ತಂದರೆ ಕಾಂಗ್ರೆಸ್‌ನವರು ಬಿಜೆಪಿಯ ವ್ಯಾಕ್ಸಿನ್‌ ಎಂದು ಅಪಪ್ರಚಾರ ಮಾಡಿದರು. ಪ್ರಧಾನಿ ಮೋದಿ ಜುಲೈದಿಂದ ಅಕ್ಟೋಬರ್‌ ಒಳಗಾಗಿ ಎಲ್ಲರಿಗೂ ಲಸಿಕೆ ತಲುಪಿಸುವ ನಿರ್ಣಯ ಕೈಗೊಂಡಿದ್ದಾರೆ ಎಂದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *