ಬ್ಲ್ಯಾಕ್‌ ಆಯ್ತು ಈಗ ಅದಕ್ಕಿಂತಲೂ ಅಪಾಯಕಾರಿಯಾಗಿರುವ ವೈಟ್‌ ಫಂಗಸ್‌ ದೇಶದಲ್ಲಿ ಪತ್ತೆ, ನಾಲ್ವರಲ್ಲಿ ಸೋಂಕು!

ಹೈಲೈಟ್ಸ್‌:

  • ಬ್ಲ್ಯಾಕ್‌ ಫಂಗಸ್‌ ಬೆನ್ನಲ್ಲೇ ಇದೀಗ ವೈಟ್‌ ಫಂಗಸ್‌ ದೇಶದಲ್ಲಿ ಪತ್ತೆ
  • ಬ್ಲ್ಯಾಕ್‌ ಫಂಗಸ್‌ಗಿಂತಲೂ ಹೆಚ್ಚು ಮಾರಣಾಂತಿಕ ಈ ಶಿಲೀಂಧ್ರ ಸೋಂಕು
  • ನಾಲ್ವರಲ್ಲಿ ಕೋವಿಡ್‌ ಸೋಂಕಿನ ಎಲ್ಲ ರೀತಿಯ ಲಕ್ಷಣ ಕಾಣಿಸಿಕೊಂಡಿದೆ

ಹೊಸದಿಲ್ಲಿ: ಕೋವಿಡ್‌ ಸೋಂಕಿತರು ಮತ್ತು ಚೇತರಿಕೆ ಕಂಡವರಲ್ಲಿ ಬ್ಲ್ಯಾಕ್‌ ಫಂಗಸ್‌ (ಮ್ಯುಕರ್‌ಮೈಕೊಸಿಸ್‌) ಹರಡುತ್ತಿರುವ ಆತಂಕದ ನಡುವೆಯೇ, ಅದಕ್ಕಿಂತಲೂ ಅಪಾಯಕಾರಿಯಾಗಿರುವ ವೈಟ್‌ ಫಂಗಸ್‌‘ ಪತ್ತೆಯಾಗಿರುವುದು ಮತ್ತಷ್ಟು ಕಳವಳ ಮೂಡಿಸಿದೆ.

ಬ್ಲ್ಯಾಕ್‌ ಫಂಗಸ್‌ಗಿಂತಲೂ ಹೆಚ್ಚು ಮಾರಣಾಂತಿಕ ಎನ್ನಲಾಗುತ್ತಿರುವ ಈ ಶಿಲೀಂಧ್ರ ಸೋಂಕು ಸದ್ಯ ಮಹಾರಾಷ್ಟ್ರ, ಗುಜರಾತ್‌ ಮತ್ತು ಬಿಹಾರದಲ್ಲಿ ಕಾಣಿಸಿಕೊಂಡಿದೆ. ಪಟನಾದಲ್ಲಿ ಒಬ್ಬ ವೈದ್ಯ ಸೇರಿದಂತೆ ನಾಲ್ವರಲ್ಲಿ ವೈಟ್‌ ಫಂಗಸ್‌ ಸೋಂಕು ಕಾಣಿಸಿಕೊಂಡು ಅವರು ಗಂಭೀರ ಸ್ಥಿತಿಗೆ ತಲುಪಿದ್ದಾರೆ.

ನಾಲ್ವರಲ್ಲೂ ಕೋವಿಡ್‌ ಸೋಂಕಿನ ಎಲ್ಲ ರೀತಿಯ ಲಕ್ಷಣ ಕಾಣಿಸಿಕೊಂಡಿದ್ದವು. ಆದರೆ ಪರೀಕ್ಷೆಗೆ ಒಳಪಡಿಸಿದಾಗ ಎಲ್ಲ ವರದಿಗಳಲ್ಲೂ ನೆಗೆಟಿವ್‌ ಎಂದು ಬಂದಿತ್ತು. ಕೊನೆಗೆ ಅನುಮಾನಗೊಂಡು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸಿದಾಗ, ಇದು ಅಪರೂಪವಾಗಿ ತಗುಲುವ ವೈಟ್‌ ಫಂಗಸ್‌ ಎಂದು ತಿಳಿದುಬಂದಿತು ಎಂದು ಪಟನಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್‌.ಎನ್‌. ಸಿಂಗ್‌ ಹೇಳಿದ್ದಾರೆ.

ಸಿಟಿ ಸ್ಕ್ಯಾ‌ನ್‌ನಲ್ಲಿ ಮಾತ್ರ ಪತ್ತೆ

ರಕ್ತ, ಗಂಟಲು ದ್ರವ, ಮೂತ್ರ ಹಾಗೂ ಇತರ ಮಾದರಿಗಳ ಸಂಗ್ರಹದ ಮೂಲಕ ಸೋಂಕಿತರ ಪರೀಕ್ಷೆ ನಡೆಸಿದರೆ ವರದಿಗಳಲ್ಲಿ ಕೊರೊನಾ ಸೋಂಕು ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತದೆ. ಆದರೆ ಸಿಟಿ ಸ್ಕ್ಯಾ‌ನ್‌ ಮೂಲಕ ಮಾತ್ರ ಸೋಂಕಿತನ ಶ್ವಾಸಕೋಶಕ್ಕೆ ವೈಟ್‌ ಫಂಗಸ್‌ ಹೊಕ್ಕಿರುವುದು ಖಾತ್ರಿಪಡುತ್ತದೆ.

ಅಧಿಸೂಚಿತ ಸಾಂಕ್ರಾಮಿಕ
ಬ್ಲ್ಯಾಕ್‌ ಫಂಗಸ್‌ ಸೋಂಕನ್ನು ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯಿದೆ ಅಡಿಯಲ್ಲಿ ಎಲ್ಲ ರಾಜ್ಯಗಳು ‘ಅಧಿಸೂಚಿತ ಸಾಂಕ್ರಾಮಿಕ ರೋಗ’ ಎಂದು ಸೂಚಿಸಿ, ಆರೋಗ್ಯ ಸೇವೆಗಳನ್ನು ಸನ್ನದ್ಧವಾಗಿರಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ಸೂಚಿಸಿದೆ. ತೆಲಂಗಾಣ, ತಮಿಳುನಾಡು ಸರಕಾರಗಳು ಈಗಾಗಲೇ ಕಪ್ಪು ಶಿಲೀಂಧ್ರ ಸೋಂಕನ್ನು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿವೆ. ಇದರ ಬೆನ್ನಿಗೇ ವೈಟ್‌ ಫಂಗಸ್‌ ಪ್ರಸರಣದ ಆತಂಕ ಶುರುವಾಗಿದೆ.

ದಾರಿ ತಪ್ಪಿಸುವ ಬಿಳಿ ಫಂಗಸ್‌!
”ವೈಟ್‌ ಫಂಗಸ್‌’ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ,” ಎಂದು ಪಟನಾದ ಪಟನಾ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಸ್‌.ಎನ್‌. ಸಿಂಗ್‌ ಹೇಳಿದ್ದಾರೆ. ”ಸದ್ಯ ಫಂಗಸ್‌ ಬೆಳವಣಿಗೆ ನಿರೋಧಕ ಔಷಧಗಳನ್ನು ಮಾತ್ರ ನೀಡಿ ಚಿಕಿತ್ಸೆ ನಡೆಸಲಾಗುತ್ತಿದೆ. ನಿಖರವಾಗಿ ಚಿಕಿತ್ಸಾ ಕ್ರಮಗಳು ಮುಂದಿನ ದಿನಗಳಲ್ಲಿ ಹಿರಿಯ ಆರೋಗ್ಯ ತಜ್ಞರು, ವಿಜ್ಞಾನಿಗಳಿಂದ ತಿಳಿದುಬರಬೇಕಿದೆ,” ಎಂದು ಸಿಂಗ್‌ ಹೇಳಿದ್ದಾರೆ.

ಗುಳ್ಳೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ
ಸಾಮಾನ್ಯವಾಗಿ ಕೋವಿಡ್‌ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳೇ ‘ವೈಟ್‌ ಫಂಗಸ್‌’ ಸೋಂಕಿತರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ವೈದ್ಯರಿಗೂ ಆರಂಭದಲ್ಲಿಇದನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ. ಚರ್ಮದ ಅಲರ್ಜಿ ಈ ಸೋಂಕಿನ ಪ್ರಮುಖ ಲಕ್ಷಣವಾಗಿದೆ.

– ಚರ್ಮದ ಮೇಲೆ ನೋವಿಲ್ಲದ, ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೋಂಕಿಗೆ ತುತ್ತಾದ 1-2 ವಾರದ ಬಳಿಕ ಗುಳ್ಳೆಗಳು ಏಳುತ್ತವೆ.

– ಶ್ವಾಸಕೋಶ ಸೋಂಕಿಗೆ ತುತ್ತಾಗಿದ್ದರೆ ಕಫ, ಉಸಿರಾಟದ ಸಮಸ್ಯೆ, ಎದೆ ನೋವು ಕಾಣಿಸಿಕೊಳ್ಳುತ್ತದೆ

– ಸಂದುಗಳಲ್ಲಿಯೂ ಸೋಂಕು ಕಾಣಿಸಿಕೊಂಡಿದ್ದರೆ ಅತೀವ ನೋವಿನ ಅನುಭವವಾಗುತ್ತದೆ. ಸಾಮಾನ್ಯವಾಗಿ ಸಂದುಗಳಲ್ಲಿ ನೋವು ಕಾಣಿಸಿಕೊಂಡರೆ ಮೊದಲು ಸಂಧಿ ವಾತಕ್ಕೆ ಚಿಕಿತ್ಸೆ ನೀಡುತ್ತಾರೆ. ಉಲ್ಬಣಿಸಿದ ಬಳಿಕ ಸೋಂಕು ಪತ್ತೆಯಾಗಲು ಇದು ಸಹ ಕಾರಣವಾಗಿದೆ

ಬಿಳಿ ಫಂಗಸ್‌ ಮುನ್ನೆಚ್ಚರಿಕೆ ಅಗತ್ಯ ಯಾರಿಗೆ?

– ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿಇಲ್ಲದವರು

– ಈಗ ತಾನೇ ಕೊರೊನಾದಿಂದ ಚೇತರಿಸಿಕೊಂಡವರು

– ಕೊರೊನಾ ಸೋಂಕು ಗಂಭೀರತೆ ನಿಗ್ರಹಕ್ಕೆ ಸ್ಟಿರಾಯ್ಡ್‌$್ಸ ಚಿಕಿತ್ಸೆ ಪಡೆದವರು

– ಸೋಂಕಿನಿಂದ ಅನಾರೋಗ್ಯ ಪೀಡಿತರಾಗಿ ಆಮ್ಲಜನಕದ ಪೂರೈಕೆಯಲ್ಲಿರುವವರು

– ರೋಗನಿರೋಧಕತೆ ಕಡಿಮೆ ಇರುವವರು

– ಗರ್ಭಿಣಿಯರು, ಸಣ್ಣ ಮಕ್ಕಳು

ಹೊಸ ಸೋಂಕಿನ ಪ್ರಸರಣ ಹೇಗೆ?

– ನೇರ ಸಂಪರ್ಕ

– ಗಾಳಿಯ ಮೂಲಕ (ಮೂಗು)

– ಬಾಯಿಯ ಮೂಲಕ (ಆಹಾರ, ಚುಂಬನ ಇತ್ಯಾದಿ)

– ಸ್ವಚ್ಛವಿಲ್ಲದ ವಸ್ತುಗಳನ್ನು ಮುಟ್ಟುವ ಮೂಲಕ (ಟೇಬಲ್‌, ಕಿಟಕಿಗಳು ಇತ್ಯಾದಿ)

– ಮಣ್ಣನ್ನು ಮುಟ್ಟಿದ ಬಳಿಕ ಸರಿಯಾಗಿ ಕೈಗಳನ್ನು ತೊಳೆದುಕೊಳ್ಳದಿದ್ದರೆ

– ಎಂಜಲಿನ ಮೂಲಕ

ಯಾವ ಅಂಗಗಳಿಗೆ ಮಾರಕ?

ಶ್ವಾಸಕೋಶ, ಮೆದುಳು, ಮೂತ್ರಪಿಂಡ, ಗುಪ್ತಾಂಗ, ಚರ್ಮ, ಬಾಯಿ, ಉಗುರು

ಏನಿದು ಬ್ಲ್ಯಾಕ್‌ ಮತ್ತು ವೈಟ್‌ ಫಂಗಸ್‌?

ಬ್ಲ್ಯಾಕ್‌ ಮತ್ತು ವೈಟ್‌ ಫಂಗಸ್‌ ಇವರೆಡೂ ಶಿಲೀಂಧ್ರ ಸೋಂಕು. ಈ ಶಿಲೀಂಧ್ರಗಳು ಮಣ್ಣು ಮತ್ತು ಗಾಳಿಯಲ್ಲಿ ಸಾಮಾನ್ಯವಾಗಿ ಇರುತ್ತವೆ. ಮೂಗು ಅಥವಾ ಬಾಯಿ ಮೂಲಕ ಶಿಲೀಂಧ್ರ ಕಣಗಳು ದೇಹ ಪ್ರವೇಶಿಸಿದಾಗ ಸಮಸ್ಯೆ ಎದುರಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ, ಮಧುಮೇಹಿಗಳು, ಕ್ಯಾನ್ಸರ್‌ ಪೀಡಿತರದಲ್ಲಿಇದು ಅಪಾಯವನ್ನುಂಟು ಮಾಡುತ್ತದೆ. ಬ್ಲ್ಯಾಕ್‌ ಫಂಗಸ್‌ ಸಾಮಾನ್ಯವಾಗಿ ಕಣ್ಣು ಹಾಗೂ ಶ್ವಾಸಕೋಶಕ್ಕೆ ಹಾನಿ ಉಂಟಾದರೆ, ವೈಟ್‌ ಫಂಗಸ್‌ ಶ್ವಾಸಕೋಶದ ಜತೆಗೆ ಮೂತ್ರಪಿಂಡ, ಮೆದುಳಿಗೂ ಘಾಸಿ ಮಾಡುತ್ತದೆ. ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣವೇ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *