ಆಕ್ಸಿಜನ್ ಬಸ್ ಸಾರ್ವಜನಿಕ ಸೇವೆಗೆ ಸಮರ್ಪಣೆ
ಬೆಂಗಳೂರು, ಮೇ.೨1: ಮಾದನಾಯಕನಹಳ್ಳಿ ನಗರ ಸಭೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ೪ ಆಕ್ಸಿಜನ್ ಬೆಡ್ ಗಳನ್ನೊಳಗೊಂಡ ಬಸ್ ನ್ನು ಕರ್ನಾಟಕ ಗೂಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಸಂಘ,ಮಾದನಾಯಕನಹಳ್ಳಿ ನಗರಸಭೆಗೆ ಹಸ್ತಾಂತರಿಸಿದೆ.
ಈ ಬಸ್ ನಲ್ಲಿ ಆಕ್ಸಿಜನ್ ಸೌಲಭ್ಯವುಳ್ಳ ೪ ಬೆಡ್ ಗಳಿವೆ.ಹೆಚ್ಚುವರಿಯಾಗಿ ೪೪ ಸಿಲಿಂಡರ್ ಗಳು ಇರುತ್ತವೆ.ಇದಕ್ಕೆ ಬೇಕಾದ ವೈದ್ಯಕೀಯ ಸಿಬ್ಬಂದಿಯನ್ನು ತಾಲ್ಲೂಕು ವೈದ್ಯಾಧಿಕಾರಿ ಒದಗಿಸಲಿದ್ದಾರೆ.
ಮಾದನಾಯಕನಹಳ್ಳಿ ನಗರಸಭೆ ಮುಂಭಾಗ ಕರ್ನಾಟಕ ಗೂಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಸಂಘ ನವೀಕರಿಸಿದ ಆಕ್ಸಿಜನ್ ಯುಕ್ತ ಬಸ್ ನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು.ಯಲಹಂಕ ಮಂಡಲ ಬಿಜೆಪಿ ಅಧ್ಯಕ್ಷ ಹನುಮಯ್ಯ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಬಸ್ ನ್ನು ನಗರಸಭೆ ಆಯುಕ್ತ ಹನುಮಂತೇಗೌಡ ಅವರಿಗೆ ಹಸ್ತಾಂತರಿಸಿದರು.
ಮಾದನಾಯಕನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಬಿ ಎಸ್ ಮಂಜುನಾಥ್, ಪದಾಧಿಕಾರಿಗಳಾದ ಜಿಜೆ ಮೂರ್ತಿ, ವೆಂಕಟೇಶ್, ಆಕಾಶ್ ಗೌಡ ಅಂಚೇಪಾಳ್ಯ, ಅಧಿಕಾರಿಗಳಾದ ಶಂಕರ್, ರಮೇಶ್ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಆಯುಕ್ತ ಹನುಮಂತೇಗೌಡ, ಮಾದನಾಯಕನಹಳ್ಳಿ ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೋವಿಡ್ ಸೋಂಕಿತ ರೋಗಿಗೆ ಆಸ್ಪತ್ರೆಗಳಲ್ಲಿ
ಐಸಿಯು ಬೆಡ್ ಸಿಗದಿದ್ದಾಗ ತಕ್ಷಣಕ್ಕೆ ಈ ಬಸ್ ನಲ್ಲಿರು ಸೌಲಭ್ಯವನ್ನು ನೀಡಲಾಗುವುದು.ನಂತರ,ಅವರಿಗೆ ಆಸ್ಪತ್ರೆಯಲ್ಲಿ ಬೆಡ್ ಕಲ್ಪಿಸುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ರಮೇಶ್ ಅವರು ಬಸ್ ಗೆ ಬೇಕಾದ ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ಮಾಡಲಿದ್ದಾರೆ.ನಗರಸಭೆ ವ್ಯಾಪ್ತಿಯ ಜನ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಆಯುಕ್ತರು ಕೋರಿದ್ದಾರೆ.