‘ಲಸಿಕೆ ಸಿಗುತ್ತದೆ ಎಂದು ಜನರಿಗೆ ಸುಳ್ಳು ಭರವಸೆ ನೀಡುವ ಬದಲು ವಾಸ್ತವಾಂಶ ಒಪ್ಪಿಕೊಳ್ಳಿ’; ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಹೈಲೈಟ್ಸ್‌:

  • ಕೋವಿಡ್‌ ವ್ಯಾಕ್ಸಿನ್‌ ಕೊರತೆಗೆ ಲಸಿಕಾ ನೀತಿ ವೈಫಲ್ಯ ಕಾರಣವಲ್ಲವೇ?
  • ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ಮತ್ತೆ ತರಾಟೆ
  • ಲಸಿಕೆ ಸಿಗುತ್ತದೆ ಎಂದು ಜನರಿಗೆ ತಪ್ಪು ಭರವಸೆ ನೀಡಬೇಡಿ.
  • ಈ ಬಗ್ಗೆ ವಾಸ್ತವಾಂಶ ತಿಳಿಸಲು ಶ್ವೇತಪತ್ರ ಹೊರಡಿಸುವಂತೆ ಆದೇಶ

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಕೋವಿಡ್‌-19 ಲಸಿಕೆ ಕೊರತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಲಸಿಕಾ ನೀತಿ ವೈಫಲ್ಯ ಕಾರಣ ಎಂದು ಹೈಕೋರ್ಟ್‌ ಖಾರವಾಗಿ ಪ್ರಶ್ನಿಸಿದೆ. ಜನತೆಗೆ ಲಸಿಕೆ ಲಭ್ಯತೆ ಬಗ್ಗೆ ವಾಸ್ತವಾಂಶ ತಿಳಿಸಲು ಶ್ವೇತಪತ್ರ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಗುರುವಾರ ಆದೇಶಿಸಿದೆ.

ಕೋವಿಡ್‌ ನಿಯಂತ್ರಣ ಕುರಿತಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕುರಿತು ಮುಖ್ಯ ನ್ಯಾ. ಎ.ಎಸ್‌. ಓಕ್‌ ಮತ್ತು ನ್ಯಾ. ಅರವಿಂದ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ‘ರಾಜ್ಯದಲ್ಲಿ ಮೊದಲನೇ ಡೋಸ್‌ ಕೊವ್ಯಾಕ್ಸಿನ್‌ ಲಸಿಕೆ ಪಡೆದಿರುವ ಅರ್ಧದಷ್ಟು ಜನ ಇದೀಗ ಎರಡನೇ ಡೋಸ್‌ನಿಂದ ವಂಚಿತರಾಗುವ ಸ್ಥಿತಿಯಲ್ಲಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರ’ ಎಂದು ನ್ಯಾಯಪೀಠ ಹೇಳಿತು.

‘ಮುಖ್ಯವಾಗಿ 60 ವರ್ಷ ಮೀರಿದವರು ಎರಡನೇ ಡೋಸ್‌ ಲಸಿಕೆಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಹಾಗಾಗಿ, ಸರಕಾರ ಈ ಬಗ್ಗೆ ಆದ್ಯತೆಯ ನೀತಿಯನ್ನು ರೂಪಿಸಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿತು. ‘ಸದ್ಯ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೊದಲನೇ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಉಳಿದವರಿಗೆ ಯಾವಾಗ ಲಸಿಕೆ ನೀಡುತ್ತೀರಾ? ಅದಕ್ಕೆ ಸರಕಾರದ ನೀಲನಕ್ಷೆ ಇದೆಯೇ?’ ಎಂದು ಕೋರ್ಟ್‌ ಪ್ರಶ್ನಿಸಿತು. ಅದಕ್ಕೆ ಅಡ್ವೊಕೇಟ್‌ ಜನರಲ್‌ ಉತ್ತರಿಸಿ ‘ಸರಕಾರ ಲಸಿಕೆ ಖರೀದಿಗೆ ತೀವ್ರ ಪ್ರಯತ್ನ ನಡೆಸುತ್ತಿದೆ. ಸದ್ಯ ಯಾವುದೇ ನೀತಿ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಸರಕಾರದ ನಿರ್ಲಕ್ಷ್ಯ, ಅಸಡ್ಡೆಯಿಂದಾಗಿ ಜನ ಸಾಯ್ತಾ ಇದ್ದಾರೆ; ಸತೀಶ್ ಜಾರಕಿಹೊಳಿ ವಾಗ್ದಾಳಿ

ಸತ್ಯ ಒಪ್ಪಿಕೊಳ್ಳಿ
‘ರಾಜ್ಯದಲ್ಲಿ ಲಸಿಕೆ ಕೊರತೆ ಇದೆ. ಸದ್ಯ ಎಲ್ಲರಿಗೂ ಲಸಿಕೆ ನೀಡಲಾಗದು. ಜನರು ಅನಗತ್ಯವಾಗಿ ಲಸಿಕೆ ಕೇಂದ್ರಗಳಿಗೆ ಬರಬೇಡಿ ಎಂಬ ಸತ್ಯಾಂಶವನ್ನು ಜನರ ಮುಂದೆ ಹೇಳಿ. ಆ ಕುರಿತು ತಪ್ಪು ಹೇಳಿಕೆ ನೀಡುವ ಬದಲು ವಾಸ್ತವಾಂಶ ಒಳಗೊಂಡ ಶ್ವೇತಪತ್ರ ಹೊರಡಿಸಿ’ ಎಂದು ನ್ಯಾಯಪೀಠ ಸರಕಾರಕ್ಕೆ ಸೂಚಿಸಿತು. ಮೇ 16ರವರೆಗಿನ ಅಂಕಿ ಅಂಶಗಳಂತೆ ಸುಮಾರು 58 ಲಕ್ಷದ 34 ಸಾವಿರ ಫಲಾನುಭವಿಗಳಿಗೆ ಎರಡನೇ ಡೋಸ್‌ ಲಸಿಕೆ ನೀಡಬೇಕಾಗುತ್ತದೆ. ರಾಜ್ಯ ಸರಕಾರವೇ ನೀಡಿರುವ ಅಂಕಿಅಂಶಗಳಂತೆ 4.5 ಲಕ್ಷಕ್ಕೂ ಅಧಿಕ ಮಂದಿ ಕೊವ್ಯಾಕ್ಸಿನ್‌ ಪಡೆದಿರುವವರ ಅವಧಿ ಪೂರ್ಣಗೊಳ್ಳುತ್ತದೆ. ರಾಜ್ಯದಲ್ಲಿ ಸದ್ಯ 7.14 ಲಕ್ಷ ಕೋವಿಶೀಲ್ಡ್‌ ದಾಸ್ತಾನಿದೆ. ಕೇಂದ್ರ ಸರಕಾರ 9.17 ಲಕ್ಷ ಲಸಿಕೆಗಳನ್ನು ನೀಡಲಿದೆ. ಎರಡೂ ಲಸಿಕೆಗಳೂ ಕೊರತೆ ಇದ್ದು, ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ನ್ಯಾಯಪೀಠ ಸೂಚಿಸಿತು.

 

ಈಗಾಗಲೇ ಮೊದಲ ಡೋಸ್‌ ಲಸಿಕೆ ಪಡೆದಿರುವವರಿಗೆ ಎರಡನೇ ಡೋಸ್‌ ಲಸಿಕೆಯನ್ನು ನಿಗದಿತ ಅವಧಿಯಲ್ಲಿ ನೀಡುವುದು ಸರಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಮೊದಲ ಡೋಸ್‌ ಲಸಿಕೆ ವ್ಯರ್ಥವಾಗಲು ಬಿಡುವುದಿಲ್ಲ.
ಪ್ರಭುಲಿಂಗ ನಾವದಗಿ, ಅಡ್ವೊಕೇಟ್‌ ಜನರಲ್‌

ಕರ್ನಾಟಕದಲ್ಲಿ ಎರಡನೇ ಡೋಸ್‌ಗೆ ಲಸಿಕೆ ಕೊರತೆ, ಅದರಲ್ಲೂ ಕೊವ್ಯಾಕ್ಸಿನ್‌ ಕೊರತೆ ನೀಗಿಸಲು ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಐಶ್ವರ್ಯ ಭಾಟಿ, ಎಎಸ್‌ಜಿ

ಖಾಸಗಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ಲಸಿಕೆ ದರಕ್ಕೆ ಯಾವುದೇ ನಿಯಂತ್ರಣವಿಲ್ಲ. ಆಸ್ಪತ್ರೆಗಳು ಮನಬಂದಂತೆ ವಸೂಲಿ ಮಾಡುತ್ತಿವೆ. ಇದಕ್ಕೆ ಸರಕಾರ ನಿರ್ದಿಷ್ಟ ದರ ನಿಗದಿಪಡಿಸಬೇಕು.
ಜಿ.ಆರ್‌. ಮೋಹನ್‌, ವಕೀಲರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *