Bellary Coronavirus: ಬಳ್ಳಾರಿ, ವಿಜಯನಗರದ ಪುರುಷರೇ ಎಚ್ಚರ: ಕೊರೋನಾಗೆ ಬಲಿಯಾದವರಲ್ಲಿ ಗಂಡಸರೇ ಹೆಚ್ಚು!
ಬಳ್ಳಾರಿ (ಮೇ 21): ಕೊರೋನಾ ಮಹಾಮಾರಿ ಇಡೀ ಜಗತ್ತನ್ನೆ ತಲ್ಲಣಗೊಳಿಸಿದೆ. ದಿನದಿಂದ ದಿನಕ್ಕೆ Covid-19 ಮಹಾಮಾರಿ ಸಾಕಷ್ಟು ಜನರನ್ನು ಬಲಿ ಪಡೆದುಕೊಳ್ಳುತ್ತಿದೆ. ಇದರ ಮಧ್ಯದಲ್ಲಿ ಗಣಿನಾಡು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಅತೀ ಹೆಚ್ಚು ಪುರುಷರೇ ಕೊರೊನಾ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಭಯ ಹುಟ್ಟಿಸುತ್ತಿದೆ. ಅವಿಭಜಿತ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿಗೆ ಕಡಿವಾಣ ಬೀಳುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುವುದರೊಂದಿಗೆ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೋನಾಗೆ ಇದುವರೆಗೂ ಅತಿ ಹೆಚ್ಚು ಪುರುಷರೇ ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಅವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿಗೆ ಮಹಿಳೆಯರಿಗಿಂತ ಗಂಡಸರು ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿದ್ದಾರೆ.
ಬಳ್ಳಾರಿ ಜಿಲ್ಲಾಡಳಿತ ನೀಡಿರುವ ಒಂದನೇ ಮತ್ತು ಎರಡನೇ ಅಲೆಗಳ ಸಾವಿನ ಅಂಕಿ ಅಂಶಗಳನ್ನ ಗಮನಿಸಿದಾಗ, ಲಿಂಗಾನುಸಾರವಾಗಿ ಪುರುಷರೆ ಹೆಚ್ಚು ಮೃತಪಟ್ಟಿದ್ದಾರೆ. ಈ ವರದಿಯನ್ನ ಜಿಲ್ಲಾಡಳಿತ ಈಗ ಸರ್ಕಾರಕ್ಕೆ ಸಲ್ಲಿಸಿದೆ. ಒಟ್ಟು ಎರಡು ಅಲೆಯಲ್ಲಿ 708 ಪುರುಷರು ಮೃತಪಟ್ಟಿದ್ದರೇ 392 ಮಹಿಳೆಯರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ಒಂದನೇ ಅಲೆಯಲ್ಲಿ 391, ಎರಡನೇ ಅಲೆಯಲ್ಲಿ 315 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ. ಅದೇ ರೀತಿ ಮಹಿಳೆಯರ ಸಾವಿನ ಪ್ರಮಾಣವನ್ನು ಗಮನಿಸಿದಾಗ ಕ್ರಮವಾಗಿ 206 ಮತ್ತು 186 ಮೃತಪಟ್ಟಿದ್ದಾರೆ. ಒಟ್ಟು ಈವರೆಗೆ 1145 ಸಾವಾಗಿದ್ದು, ಇದರಲ್ಲಿ 392ಮಹಿಳೆಯರಿದ್ದಾರೆ. ಶೇಕಡಾ ವಾರು ಡೆತ್ ನೋಡುತ್ತಾ ಹೋದರೆ ಪುರುಷರ ಸಾವಿನ ಡೆತ್ ರೇಟಿಂಗ್ ಹೆಚ್ಚಿಗೆ ಇದೆ. ಮೊದಲ ಅಲೆಯಲ್ಲಿ ಪುರುಷರ ಡೆತ್ ರೇಟ್ ಪ್ರಮಾಣ ಶೇ.65ರಷ್ಟಿದ್ದರೇ ಎರಡನೆ ಅಲೆಯಲ್ಲಿ ಶೇ.62ರಷ್ಟಿದೆ.
ಅದರಲ್ಲೂ ಮಹಿಳೆಯರಿಗಿಂತ ಪುರುಷರ ಸಾವಿನ ಪ್ರಮಾಣ ಜಾಸ್ತಿಯಿದ್ದು, ಆರೋಗ್ಯದ ಕಡೆಗೆ ಮಹಿಳೆಯರಿಗಿಂತ ಗಂಡಸರು ಹೆಚ್ಚಿನ ಜಾಗೃತಿ ವಹಿಸುವುದು ಅವಶ್ಯವಾಗಿದೆ. ಮುಖ್ಯವಾಗಿ ಎಲ್ಲರೂ ಜಾಗೃತ ವಾಗಿರುವುದು ಉತ್ತಮ. ಇಲ್ಲಿ ಮಹಿಳೆಯರಿಗಿಂತ ಪುರುಷರು ಯಾಕ ಜಾಸ್ತಿ ಕೊರೋನಕ್ಕೆ ಬಲಿ ಯಾಗಿದ್ದಾರೆ ಎಂದರೆ ಹೆಚ್ಚು ಗಂಡಸರು ಹೋರ ಓಡಾಡುತ್ತಾರೆ ಮನೆಯಲ್ಲಿ ಇರುವುದಿಲ್ಲ ಇದರಿಂದ ಕೊರೋನ ಸೋಂಕು ತಗಲಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೋಂಕಿನಲ್ಲಿ ಮತ್ತು ಸಾವಿನ ಸಂಖ್ಯೆಯಲ್ಲಿ ಪುರುಷರು ಬಹು ಪಾಲು ಹೊಂದಿದ್ದಾರೆ ಎನ್ನಲಾಗುತ್ತಿದೆ.
ಇಷ್ಟೆಲ್ಲ ಸಾವು ನೋವುಗಳು ಸಂಭವಿಸಿದರೂ ಮತ್ತು ಹೇಗಾದರೂ ಮಾಡಿ ಈ ಕೊರೋನಾ ಚೈನ್ ಲಿಂಕ್ ಕಡಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾಡಳಿತ ಹರಸಾಹಸ ಪಟ್ಟರೂ ಈ ಸೋಂಕಿಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ. ಹೀಗಾಗಿ ಈ ಕೊರೋನ ಈಗ ರಾಜ್ಯ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಕೊರೋನಾ ಮಹಾಮಾರಿ ಜತೆಗೆ ಸೋಂಕಿನಿಂದ ಗುಣಮುಖವಾದರಲ್ಲಿ ಬ್ಲಾಕ್ ಪಂಗಸ್ ಕಾಣಿಸಿಕೊಳ್ಳುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ 8 ಬ್ಲಾಕ್ ಪಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಗಣಿನಾಡಿನ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚುವಂತೆ ಮಾಡುತ್ತಿದೆ. ಇನ್ನೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಂಭೀರವಾಗಿರಲಿದೆ ಎಂಬ ಎಚ್ಚರಿಕೆಯನ್ನು ಹಲವು ವೈದ್ಯರು ನೀಡಿದ್ದಾರೆ.
ಹೀಗಾಗಿ ಅವಿಭಜಿತ ಜಿಲ್ಲೆಯ ಜನರು ಬಹಳ ಎಚ್ಚರಿಕೆಯಿಂದ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಕುಟುಂಬದ ಜವಾಬ್ದಾರಿ ನಿಭಾಯಿಸಲು ಕೆಲಸ ಮಾಡಲು ಸೇರಿದಂತೆ ನಾನಾ ಕಾರಣಗಳಿಗೆ ಹೆಚ್ಚಾಗಿ ಪುರುಷರೇ ಹೊರಗಡೆ ಬರುವುದರಿಂದ ಸೋಂಕು ಸಹಜವಾಗಿಯೇ ಹೆಚ್ಚಿನ ಮಟ್ಟದಲ್ಲಿ ಗಂಡು ಮಕ್ಕಳಲ್ಲಿ ಕಂಡು ಬಂದಿದೆ. ಅದರಲ್ಲೂ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನಾದರೂ ಗಣಿನಾಡು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜನತೆ ಕೊರೋನಾ ಮಹಾಮಾರಿಯ ಬಗ್ಗೆ ನಿರ್ಲಕ್ಷ್ಯ ತೋರದೆ ಜಾಗೃತವಾಗಿ ಜೀವನ ನಡೆಸುವುದು ಉತ್ತಮ.