ದಾಖಲೆಗಳನ್ನ ನೋಡ್ದೆ ಸಹಿ ಹಾಕ್ತಿರೇನ್ರೀ: ಸಚಿವ ಪ್ರಹ್ಲಾದ್ ಜೋಶಿ ಗರಂ
ಧಾರವಾಡ: ಆನಲೈನ್ ಮೂಲಕ ಧಾರವಾಡ ಜಿಲ್ಲಾ ಪಂಚಾಯ್ತಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶರನ್ನ ತರಾಟೆಗೆ ತೆಗೆದುಕೊಂಡರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಬೇರೆಯವರ ಹೆಸರಿನಲ್ಲಿ ಹಣ ಜಮಾ ಮಾಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ವಿಷಯದ ಮೇಲೆ ನಡೆದ ಚರ್ಚೆಯಲ್ಲಿ ಸತೀಶ ಅವರನ್ನು ಕೇಂದ್ರ ಸಚಿವ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ತೀವ್ರ ತರಾಟೆಗೆ ತೆಗೆದುಕೊಂಡರು.
ನನ್ನ ಬಳಿ ಹಣ ದುರ್ಬಳಕೆಯಾದ ಬಗ್ಗೆ ದಾಖಲೆಗಳಿವೆ. ಈ ದಾಖಲೆಗಳಿಗೆ ನೀವು ನೋಡದೇ ಸಹಿ ಹಾಕಿದ್ದೀರಾ..? ಒಬ್ಬ ಅಧಿಕಾರಿಯಾಗಿ ಇದೇ ನಾ ನೀವು ಮಾಡುವ ಕೆಲಸ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಸಮಜಾಯಿಷಿ ನೀಡಲು ಹೋದ ಸತೀಶ, ಪ್ರಗತಿ ವರದಿಯಲ್ಲಿ ಪದ ಬಳಕೆ ತಪ್ಪಾಗಿದೆ ಎಂದಿದ್ದಕ್ಕೆ ಮತ್ತಷ್ಟು ಗರಂ ಆದ ಸಚಿವ ಪ್ರಲ್ಹಾದ ಜೋಶಿ ಒಬ್ಬ ಅಧಿಕಾರಿಯಾಗಿ ನೀವು ಈ ರೀತಿ ಪ್ರತಿಕ್ರಿಯೆ ಮಾಡಬಾರದು. ಅಕ್ರಮ ಎಸಗಿರುವ ವ್ಯಕ್ತಿಯ ಮೇಲೆ ದೂರು ದಾಖಲಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಮಟ್ಟದಲ್ಲಿ ಒಂದು ತನಿಖೆ ಮಾಡಿ ವರದಿ ನೀಡಬೇಕು. ತಪ್ಪಿತಸ್ಥರ ಮೇಲೆ ಎಸಿಬಿಯಲ್ಲಿ ದೂರು ದಾಖಲಿಸುವಂತೆ ಸಚಿವರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಸೂಚನೆ ನೀಡಿದರಲ್ಲದೇ, ತಕ್ಷಣವೇ ಕ್ರಮಕ್ಕೆ ಮುಂದಾಗಬೇಕೆಂದರು.