ಸಮುದ್ರದೊಳಗೆ ನುಗ್ಗಿದ ಯುಎಫ್‌ಒ: ನಿಗೂಢ ವಸ್ತುವಿನ ಹಾರಾಟದ ವಿಡಿಯೋ ಚಿತ್ರೀಕರಿಸಿದ ಅಮೆರಿಕ ನೌಕಾಪಡೆ

ಹೈಲೈಟ್ಸ್‌:

  • ಅಮೆರಿಕದ ನೌಕಾಪಡೆ 2019ರ ಜುಲೈನಲ್ಲಿ ಸೆರೆಹಿಡಿದಿದ್ದ ದೃಶ್ಯ
  • ವಿಡಿಯೋ ಹಂಚಿಕೊಂಡಿರುವ ಚಿತ್ರ ನಿರ್ದೇಶಕ ಜೆರೆಮಿ ಕಾರ್ಬೆಲ್
  • ಆಕಾಶದಲ್ಲಿ ಹಾರಾಡುತ್ತಾ, ಏಕಾಏಕಿ ನೀರಿನೊಳಗೆ ನುಗ್ಗಿದ್ದ ಯುಎಫ್‌ಒ
  • ಸಬ್‌ಮೆರಿನ್‌ನಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದ ವಸ್ತು

ವಾಷಿಂಗ್ಟನ್: ಅಮೆರಿಕದ ನೌಕಾಪಡೆ ಹಡಗಿನ ಸಮೀಪ ವಸ್ತುವೊಂದು ಹಾರುವ ವಿಡಿಯೋ ವೈರಲ್ ಆಗಿದೆ. ಒಮ್ಮೆ ಅತಿ ವೇಗವಾಗಿ, ಕೆಲವೊಮ್ಮೆ ನಿಧಾನಗೊಂಡು ಹಾರುವ ಈ ಯುಎಫ್‌ಒ (ಗುರುತಿಸಲಾಗದ ಹಾರುವ ತಟ್ಟೆ ರೀತಿಯ ವಸ್ತು) ಕಂಡುಬಂದಿದ್ದು, ಸಮುದ್ರದೊಳಗೆ ನುಗ್ಗಿ ಸಂಪೂರ್ಣವಾಗಿ ಮಾಯವಾಗುವುದು ದೃಶ್ಯದಲ್ಲಿ ಸೆರೆಯಾಗಿದೆ.

ಸ್ಯಾನ್ ಡಿಯಾಗೊದ ಕರಾವಳಿಯ ಒಮಾಹದಲ್ಲಿನ ಯುದ್ಧ ಮಾಹಿತಿ ಕೇಂದ್ರದಲ್ಲಿ (ಸಿಐಸಿ) ಈ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಇದು 2019ರ ಜುಲೈ ತಿಂಗಳಲ್ಲಿ ತೆಗೆದ ವಿಡಿಯೋವಾಗಿದ್ದು, ಚಿತ್ರ ನಿರ್ದೇಶಕ ಮತ್ತು ಯುಎಫ್‌ಒಗಳ ಕುರಿತು ಅಧ್ಯಯನ ಮಾಡುತ್ತಿರುವ ಜೆರೆಮಿ ಕಾರ್ಬೆಲ್ ಅವರು ಮೇ 14ರಂದು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಂಚಿಕೊಂಡ ಬಳಿಕ ವೈರಲ್ ಆಗಿದೆ.

ಅಮೆರಿಕ ನೌಕಾಪಡೆಯು ಗೋಳಾಕಾರದ ಯುಎಫ್‌ಒಗಳು ಮತ್ತು ವಿವಿಧ ಗಾತ್ರದ ವಾಹನಗಳ ಫೋಟೊ ಹಾಗೂ ವಿಡಿಯೋಗಳನ್ನು ಸೆರೆಹಿಡಿದಿದೆ. ಆ ದೃಶ್ಯಗಳಲ್ಲಿ ಕೆಲವೊಂದು ಇಲ್ಲಿವೆ’ ಎಂದು ಕಾರ್ಬೆಲ್ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಈ ಯುಎಫ್‌ಒ ನೀರು ಹಾಗೂ ಗಾಳಿ ಎರಡಲ್ಲಿಯೂ ಚಲಿಸಬಲ್ಲ ವಾಹನದಂತೆ ಕಾಣಿಸುತ್ತದೆ ಎಂದಿದ್ದಾರೆ.

‘ಈ ದೃಶ್ಯವನ್ನು ಸ್ಯಾನ್ ಡಿಯಾಗೊದ ಯುಎಸ್ಎಸ್ ಒಮಾಹದಲ್ಲಿನ ಸಿಐಸಿಯಲ್ಲಿ 2019ರ ಜುಲೈ 15ರಂದು ಚಿತ್ರೀಕರಿಸಲಾಗಿದೆ. ಯುಎಪಿಯೊಂದು ಯಾವುದೋ ಗುರಿಯೊಂದಿಗೆ ನೀರನ್ನು ಪ್ರವೇಶಿಸಿದೆ. ಇದು ನೀರಿಗೆ ಪ್ರವೇಶಿಸಿದ ಬೆನ್ನಲ್ಲೇ ವಾಯುಪಡೆಯ ಸಬ್‌ಮೆರಿನ್ ಒಂದು ಆ ಸ್ಥಳದಲ್ಲಿ ಪರಿಶೀಲನೆ ನಡೆಸಿತ್ತು. ಆದರೆ ಯಾವುದೇ ವಸ್ತು ಅಥವಾ ಅವಶೇಷಗಳು ಪತ್ತೆಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ಈ ಯುಎಫ್‌ಒ ಕನಿಷ್ಠ 6 ಅಡಿ ವ್ಯಾಸದಷ್ಟು ಗಾತ್ರ ಹೊಂದಿದ್ದು, ನೀರಿನೊಳಗೆ ಪ್ರವೇಶಿಸುವ ಮುನ್ನ ಗಂಟೆಗೆ 46 ಮೈಲು ವೇಗದಿಂದ 158 ಮೈಲು ವೇಗದವರೆಗೆ ಚಲಿಸಿತ್ತು ಎಂದು ಕಾರ್ಬೆಲ್ ತಿಳಿಸಿದ್ದಾರೆ.

2004 ಮತ್ತು 2005ರಲ್ಲಿ ಅಮೆರಿಕ ನೌಕಾಪಡೆ ಪೈಲಟ್‌ಗಳು ಚಿತ್ರೀಕರಿಸಿದ್ದ ಯುಎಫ್‌ಒಗಳ ಮೂರು ಸಣ್ಣ ವಿಡಿಯೋಗಳನ್ನು ಅಮೆರಿಕ ಸರ್ಕಾರ ಕಳೆದ ವರ್ಷ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಅನ್ಯಗ್ರಹ ಜೀವಿಗಳು ಆಗಾಗ ಭೂಮಿಗೆ ಬರುತ್ತಿರುತ್ತವೆ ಎಂಬ ವಾದದ ನಡುವೆ ಈ ವಿಡಿಯೋ ಕುತೂಹಲ ಹೆಚ್ಚಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *