Haveri Coronavirus: ಜೂನ್ ಅಂತ್ಯಕ್ಕೆ ಕರ್ನಾಟಕದಲ್ಲಿ ಕೊರೋನಾ ಕಂಟ್ರೋಲ್; ಸಚಿವ ಡಾ. ಕೆ. ಸುಧಾಕರ್
ಹಾವೇರಿ: ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಎರಡನೆ ಅಲೆ ಜೂನ್ ಅಂತ್ಯದ ವೇಳೆಗೆ ಹತೋಟಿಗೆ ಬರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಕೆ. ಸುಧಾಕರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಜ್ಞರ ಪ್ರಕಾರ ಜೂನ್ ಅಂತ್ಯದಲ್ಲಿ ಎರಡನೆ ಅಲೆ ಬಹಳಷ್ಟು ಕಡಿಮೆ ಆಗಲಿದೆ ಎಂದು ವರದಿ ಕೊಟ್ಟಿದ್ದಾರೆ. ತಜ್ಞರು ಹೇಳಿದಂತೆಯೆ ಇಲ್ಲಿಯವರೆಗೆ ನಡೆದಿದೆ. ನಾವು ಕೂಡ ಜೂನ್ ಅಂತ್ಯದ ವೇಳೆಗೆ ಎರಡನೆ ಅಲೆ ಕಡಿಮೆ ಆಗುತ್ತದೆ ಅಂತ ನಂಬಿದ್ದೇವೆ. ಲಾಕ್ ಡೌನ್ ನಿಂದ ಚೈನ್ ಬ್ರೇಕ್ ಆಗುತ್ತದೆ ಎಂದಿದ್ದಾರೆ.
ಕಳೆದ ಹನ್ನೆರಡು ದಿನಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆ ಆಗಿದೆ. ಇನ್ನು ಹಳ್ಳಿಗಳಲ್ಲಿ ಸೋಂಕಿತರಿಗೆ ಹೋಂ ಐಸೋಲೇಷನ್ ಬದಲು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಚಿಕಿತ್ಸೆ ನೀಡಲು ನಿರ್ಧಾರ ಮಾಡುತ್ತಿದ್ದೇವೆ. ಹಳ್ಳಿಗಳಲ್ಲಿನ ಸೋಂಕಿತರಿಗೆ ಮೊದಲ ದಿನದಿಂದಲೇ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆ ನೀಡಿದರೆ ಸಾವಿನ ಪ್ರಮಾಣ ಕಡಿಮೆ ಆಗಲಿದೆ ಮತ್ತು ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾವೇರಿಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಸ್ಥಾಪನೆ: ಸಚಿವ ಬೊಮ್ಮಾಯಿ:
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಂದಿನ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಜನರೇಟರ್ ಗಳನ್ನು ಸ್ಥಾಪಿಸುವ ಮೂಲಕ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು. ಹಾವೇರಿಯಲ್ಲಿ 1500 ಕಿ.ಲೀ. ಆಕ್ಸಿಜನ್ ಜನರೇಟರ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಶಿಗ್ಗಾವಿ ಮತ್ತು ಹಾನಗಲ್ಲಿನಲ್ಲಿ 500 ಕಿ. ಲೀ. ಆಕ್ಸಿಜನ್ ಜನರೇಟರ್ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ. ಹಿರೇಕೆರೂರು ಪಟ್ಟಣದಲ್ಲಿ ಆಕ್ಸಿಜನ್ ಜನರೇಟರ್ ಗೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ ಎಂದರು.
ರಾಣೆಬೆನ್ನೂರಿನಲ್ಲಿ ಗ್ರಾಸಿಮ್ ಕಂಪನಿ ಹಾಗೂ ಸವಣೂರಿನಲ್ಲಿ ರುದ್ರ ಕಂಪನಿಗಳು ಸಿಎಸ್ಆರ್ ನಿಧಿ ಅಡಿ ಆಕ್ಸಿಜನ್ ಜನರೇಟರ್ ಗಳನ್ನು ಸ್ಥಾಪಿಸಲಿವೆ. ಹೀಗೆ ಜಿಲ್ಲೆಯಲ್ಲಿ ಆಕ್ಸಿಜನ್ ಅನ್ನು ಉತ್ಪಾದನೆ ಮಾಡಲಾಗುವುದು. ಮುಂದಿನ ಮೂರು – ನಾಲ್ಕು ತಿಂಗಳಲ್ಲಿ ಈ ಎಲ್ಲಾ ಆಕ್ಸಿಜನ್ ಘಟಕಗಳು ಕಾರ್ಯಾರಂಭ ಮಾಡುವಂತೆ ಕ್ರಮವಹಿಸಲಾಗುವುದು. ಅಕ್ಕಿಆಲೂರು ರಟ್ಟಿಹಳ್ಳಿ, ಬೊಮ್ಮನಹಳ್ಳಿ, ಗುತ್ತಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಆಕ್ಸಿಜನ್ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಹಾವೇರಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲ. ತಜ್ಞ ವೈದ್ಯರು ಹಾಗೂ ಫಿಜಿಸಿಯನ್ ಗಳ ಕೊರತೆ ಇದೆ. ವೆಂಟಿಲೇಟರ್ ಇದ್ದರೂ ಅದನ್ನು ಪ್ರಾರಂಭ ಮಾಡಲು ಟೆಕ್ನೀಷಿಯನ್ ಗಳಿಲ್ಲ. ಅದರ ಜತೆ ಬ್ಲ್ಯಾಕ್ ಫಂಗಸ್ ಸಮಸ್ಯೆಗಳ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜೊತೆ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಅವರು ತಿಳಿಸಿದರು.
ಹಾವೇರಿ ಜಿಲ್ಲಾಸ್ಪತ್ರೆಗೆ ಸಚಿವ ಸುಧಾಕರ ಸೇರಿದಂತೆ ಸಚಿವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಇದೇ ವೇಳೆ ಆಕ್ಸಿಜಿನ್ ಬಸ್ ಗಳಿಗೆ ಚಾಲನೆ ನೀಡಿಲಾಯಿತು. ಜಿಲ್ಲೆಯಲ್ಲಿ ಆಕ್ಸಿಜಿನ್ ಬೆಡ್ ಗಳಿಗೆ ಕೊರತೆ ಉಂಟಾಗುತ್ತಿರುವ ಹಿನ್ನಲೆ. ವಾಯವ್ಯ ಸಾರಿಗೆ ಬಸ್ ಗಳನ್ನ ಬಳಸಿಕೊಂಡು ಆಕ್ಸಿಜಿನ್ ವ್ಯವಸ್ಥೆ ಮಾಡಲಾಗಿದ್ದು, ತುರ್ತು ಅಗತ್ಯ ಪರಿಸ್ಥಿತಿಯಲ್ಲಿ ಅನುಕೂಲವಾಗಲಿದೆ.