ರಾಜ್ಯದಲ್ಲಿ ಶೀಘ್ರ 2 ಸಾವಿರಕ್ಕೂ ಹೆಚ್ಚು ವೈದ್ಯರ ಕಾಯಂ ನೇಮಕ: ಡಿಸಿಎಂ

ಬೆಂಗಳೂರು, ಮೇ.22- ರಾಜ್ಯದಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರನ್ನು ಕಾಯಂ ಮಾಡುವುದು ಸೇರಿದಂತೆ ಶೀಘ್ರದಲ್ಲೇ 2,000ಕ್ಕೂ ಹೆಚ್ಚು ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ಹೊಸದಾಗಿ ನೇಮಕ ಮಾಡಿಕೊಳ್ಳುವ ವೈದ್ಯರನ್ನು ಕಾರ್ಯಸ್ಥಳಕ್ಕೆ ನಿಯೋಜಿಸುವ ಕೆಲಸವನ್ನು ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಈ ಪ್ರಕ್ರಿಯೆ ಅಂತಿಮವಾಗಲಿದೆ ಎಂದರು.

ಕೋವಿಡ್‌ ಪರಿಸ್ಥಿತಿಗೆ ಸಂಬಂಧಿಸಿದಂತೆ ಹಾಸನ ಜಿಲ್ಲಾಡಳಿತ, ಜನ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರೊಂದಿಗೆ ಮತಾನಡಿದರು.

ಗ್ರಾಮೀಣ ಪ್ರದೇಶದ ಎಲ್ಲ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಟ್ರಾಯಾಜಿಂಗ್‌ ಹೆಚ್ಚಿಸಬೇಕು. ಆರ್‌ಟಿಪಿಸಿಆರ್‌ ಮತ್ತು ರಾಟ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು.

ಮನೆಮನೆಗೂ ಹೋಗಿ ಪರೀಕ್ಷೆ ,ಸಮೀಕ್ಷೆ ನಡೆಸಿ ಸೋಂಕಿತರು ಪತ್ತೆಯಾದರೆ ಕೂಡಲೇ ಅವರನ್ನು ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಬೇಕು. ಸೋಂಕಿತರು ಹೋಮ್‌ ಐಸೋಲೇಷನ್‌ ಆಗುವಂತಿಲ್ಲ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದರು.

10 ಕೋಟಿ ಬಿಡುಗಡೆ

ಕೋವಿಡ್‌ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಹಾಸನ ಜಿಲ್ಲೆಗೆ ತಕ್ಷಣವೇ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್‌ಪಿಆರ್‌ಎಫ್) ಸೋಮವಾರ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದರು

ವಿಪತ್ತು ನಿಧಿಯಿಂದ ಎಲ್ಲ ಜಿಲ್ಲೆಗಳಿಗೆ 260 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಹಾಸನಕ್ಕೆ ಮೊದಲ ಹಂತದಲ್ಲೇ 10 ಕೋಟಿ‌ ರೂ. ಬಿಡುಗಡೆ ಮಾಡಲಾಗಿತ್ತು, ಈಗ ಎರಡನೇ ಹಂತದಲ್ಲಿ 10 ಕೋಟಿ ಕೊಡಲಾಗುವುದು” ಎಂದರು.

ಜಿಲ್ಲೆಯಲ್ಲಿ ಆಮ್ಲಜನಕ, ರೆಮಿಡಿಸಿವಿರ್‌, ಬ್ಲ್ಯಾಕ್‌ ಫಂಗಸ್‌ ಔಷಧಿ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಯಾವ ಔಷಧಿಯೂ ಕೊರತೆ ಆಗದಂತೆ ನೋಡಿಕೊಳ್ಳಲು ಅಗತ್ಯಬಿದ್ದರೆ ಇನ್ನಷ್ಟು ಹಣಕಾಸು ಸಂಪನ್ಮೂಲವನ್ನು ಸರಕಾರ ಒದಗಿಸಲಿದೆ. ಕೋವಿಡ್‌ ವೆಚ್ಚಕ್ಕೆ ನಿರ್ಬಂಧವಿಲ್ಲ, ಜಿಲ್ಲಾಡಳಿತಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ಎಷ್ಟು ಔಷಧಿಗೆ ಬೇಡಿಕೆ ಇಟ್ಟರೂ ಕೊಡಲು ಸರಕಾರ ಸಿದ್ಧವಿದೆ. ಒಂದು ವಾರಕ್ಕಾಗುವಷ್ಟು ಹೆಚ್ಚುವರಿ ಸ್ಟಾಕ್‌ ಇಟ್ಟುಕೊಳ್ಳಲು ಸೂಚಿಸಲಾಗಿದೆ ಎಂದರು ಡಿಸಿಎಂ.

ಕೂಡಲೇ 50 ವೆಂಟಿಲೇಟರ್‌:

ಜಿಲ್ಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ ಎಂಬ ಅಂಶವನ್ನು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸಭೆಯಿಂದಲೇ ನಾನು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರಿಗೆ ಮೊಬೈಲ್‌ ಕರೆ ಮಾಡಿ ಮಾತನಾಡಿದ್ದೇನೆ ಎಂದರು.

ತಕ್ಷಣವೇ 50 ವೆಂಟಿಲೇಟರ್‌ಗಳನ್ನು ಕಳಿಸಬೇಕು ಎಂದು ಸೂಚಿಸಿದ್ದೇನೆ. ಇದಕ್ಕೆ ಸ್ಪಂದಿಸಿದ ಅಖ್ತರ್‌ ಅವರು ಅಷ್ಟೂ ವೆಂಟಿಲೇಟರ್‌ಗಳನ್ನು ಇವತ್ತೇ ಹಾಸನಕ್ಕೆ ಕಳಿಸುವುದಾಗಿ ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ಇಷ್ಟೂ ವೆಂಟಿಲೇಟರ್‌ಗಳು ಹಾಸನ ಮೆಡಿಕಲ್‌ ಕಾಲೇಜ್‌ಗೆ ತಲುಪಲಿವೆ ಎಂದು ತಿಳಿಸಿದರು.

ಇದರ ಜತೆಗೆ ಜಿಲ್ಲೆಯ ತಮ್ಮಲ್ಲಿರುವ ಕೋವಿಡ್‌ ಬೆಡ್‌ಗಳನ್ನು ʼಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್‌ʼ ಪೋರ್ಟಲ್ʼಗೆ ಲಿಂಕ್‌ ಮಾಡಿಲ್ಲ. ಇದು ಕೂಡಲೇ ಆಗಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಹಾಸನ ಜಿಲ್ಲೆಯ ಪ್ರವಾಸ ಕೈಗೊಂಡಿದ್ದ ಡಿಸಿಎಂ ಅವರು, ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಚನ್ನರಾಯಪಟ್ಟಣದ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ ವೈದ್ಯರ ಜತೆ ಸಮಾಲೋಚನೆ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕರಾದ ಎಚ್.ಡಿ.ರೇವಣ್ಣ, ಶಿವಲಿಂಗೇಗೌಡ, ಪ್ರೀತಂ ಗೌಡ, ಬಾಲಕೃಷ್ಣ, ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಗಿರೀಶ್‌, ಎಸ್‌ಪಿ ಶ್ರೀನಿವಾಸ ಗೌಡ ಮುಂತಾದವರು ಡಿಸಿಎಂ ಜತೆಯಲ್ಲಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *