ಕೊರೊನಾ-ಲಾಕ್ಡೌನ್ ಎಫೆಕ್ಟ್ : ಭತ್ತ ಕೇಳೋರೇ ಇಲ್ಲ..!
ಶಿವಮೊಗ್ಗ, ಮೇ 22: ‘ಒಂದೆಡೆ ಸರ್ಕಾರ ಖರೀದಿಸುತ್ತಿಲ್ಲ… ಮತ್ತೊಂದೆಡೆ ವ್ಯಾಪಾರಿಗಳು ಕೇಳುತ್ತಿಲ್ಲ… ಕೊರೊನಾ-ಲಾಕ್ಡೌನ್ ಕಾರಣದಿಂದ ಹೊರ ರಾಜ್ಯಗಳಿಗೆ ಸಾಗಾಣೆಯಾಗುತ್ತಿಲ್ಲ… ಈ ನಡುವೆ ಬೆಳೆ ನಷ್ಟದ ಆತಂಕ ಸೃಷ್ಟಿಸಿರುವ, ಅಕಾಲಿಕ ಮಳೆ..!’
ಇದು, ಬೇಸಿಗೆಯಲ್ಲಿ ಭತ್ತ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರು, ಪ್ರಸ್ತುತ ಎದುರಿಸುತ್ತಿರುವ ಸಂಕಷ್ಟದ ಪ್ರಮುಖಾಂಶಗಳು. ಹೌದು. ಜನರ ಹೊಟ್ಟೆ ತುಂಬಿಸುವ ಅನ್ನದ ಮೂಲವಾದ ಭತ್ತದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಖರೀದಿ ಮಾಡುವವರೇ ಇಲ್ಲವಾಗಿದ್ದಾರೆ!
ಇದರಿಂದ ಭತ್ತ ಬೆಳೆದ ಬಹುತೇಕ ಬಡ-ಮಧ್ಯಮ ವರ್ಗದ ರೈತರ ಸ್ಥಿತಿ ಅಯೋಮಯವಾಗಿದ್ದು, ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಈ ನಡುವೆ ಬೀಳುತ್ತಿರುವ ಅಕಾಲಿಕ ಮಳೆಯಿಂದ ಬೆಳೆ ಹಾಳಾಗುವ ಭೀತಿ ಎದುರಾಗಿದೆ. ಇದು ಭತ್ತ ಬೆಳೆಗಾರರನ್ನು ಮತ್ತಷ್ಟು ಚಿಂತಾಕ್ರಾಂತರನ್ನಾಗಿಸಿದೆ. ಬಾಣಲೆಯಿಂದ ಬೆಂಕಿಗೆ ಬಿದ್ದ ಅನುಭವ ಉಂಟು ಮಾಡಿದೆ.
ಫಸಲು ಹೆಚ್ಚಳ: ಕಳೆದ ವರ್ಷ ಉತ್ತಮ ಮುಂಗಾರು ಮಳೆಯಿಂದ ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಆಣೆಕಟ್ಟುಗಳು ತುಂಬಿದ್ದವು. ಈ ಕಾರಣದಿಂದ ನೀರಾವರಿ ವ್ಯವಸ್ಥೆಯಿರುವೆಡೆ ದೊಡ್ಡ ಪ್ರಮಾಣದಲ್ಲಿ ರೈತರು ಭತ್ತ ಬೆಳೆದಿದ್ದಾರೆ. ಕೃಷಿ ಇಲಾಖೆಯ ಮೂಲಗಳು ಹೇಳುವ ಅನುಸಾರ, ಶಿವಮೊಗ್ಗ ಜಿಲ್ಲೆಯೊಂದರಲ್ಲಿ ಸರಿಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯಲಾಗಿದೆ ಎಂದು ತಿಳಿಸುತ್ತವೆ.
ಕುಸಿತ: ‘ಸಕರ್ಾರವು ಕ್ವಿಟಾಲ್ ಬತ್ತಕ್ಕೆ 1850 ರೂ. ಬೆಂಬಲ ಬೆಲೆ ನಿಗದಿಗೊಳಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಭತ್ತಕ್ಕೆ 1200 ರಿಂದ 1300 ರೂ. ಬೆಲೆಯಿದೆ. ಐದಾರು ತಿಂಗಳ ಕಾಲ ಕಷ್ಟಪಟ್ಟು ಬೆಳೆದ ಬೆಳೆಗೆ, ಅತ್ಯಲ್ಪ ಮೊತ್ತ ದೊರಕುತ್ತಿದೆ. ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡ ಹಿಂದಿರುಗುವುದಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರಾಜ್ಯ ಗೌರಾವಧ್ಯಕ್ಷ ಹೆಚ್.ಆರ್.ಬಸವರಾಜಪ್ಪರವರು ಹೇಳುತ್ತಾರೆ.
‘ಈಗಾಗಲೇ ಭತ್ತ ಕಟಾವು ಕಾರ್ಯ ಆರಂಭವಾಗಿದ್ದು, ಖರೀದಿದಾರರೇ ಇಲ್ಲವಾಗಿದ್ದಾರೆ. ಲಾಕ್ಡೌನ್ ಮತ್ತೀತರ ಕಾರಣದಿಂದ ಮುಕ್ಕಾಲುಪಾಲು ರೈಸ್’ಮಿಲ್ ಗಳು ಸ್ಥಗಿತಗೊಂಡಿವೆ. ಇದರಿಂದ ರೈಸ್’ಮಿಲ್ ಗಳಿಂದಲೂ ಖರೀದಿಯಾಗುತ್ತಿಲ್ಲ. ಕೊರೊನಾ-ಲಾಕ್ಡೌನ್ ಕಾರಣದಿಂದ, ಖಾಸಗಿ ವ್ಯಕ್ತಿಗಳು ಖರೀದಿಗೆ ಮುಂದೆ ಬರುತ್ತಿಲ್ಲ. ಹೊರ ರಾಜ್ಯಗಳಿಗೆ ಸಾಗಾಣೆ ಆಗುತ್ತಿಲ್ಲ.
ಮತ್ತೊಂದೆಡೆ, ಅಕಾಲಿಕ ಮಳೆಯಿಂದ ಬೆಳೆ ಹಾಳಾಗುತ್ತಿದೆ. ಕಟಾವು ಮಾಡಿದ ಭತ್ತ ದಾಸ್ತಾನು ಮಾಡಿಕೊಳ್ಳಲು ವ್ಯವಸ್ಥೆಯಿಲ್ಲದ ರೈತರ ಪಾಡು ಹೇಳತೀರದಾಗಿದೆ. ತಕ್ಷಣವೇ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು’ ಎಂದು ಶುಕ್ರವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಹೆಚ್.ಆರ್.ಬಸವರಾಜಪ್ಪರವರು ತಿಳಿಸಿದ್ದಾರೆ.