Basavaraj Bommai: ಜಿಲ್ಲಾ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ; ಗೃಹ ಸಚಿವ ಬಸವರಾಜ ಬೊಮ್ಮಾಯಿ
ಹಾವೇರಿ(ಮೇ 23): ಕೋವಿಡ್ ಮೂರನೇ ಅಲೆಗೂ ಮುನ್ನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲು ಮೂಲ ಸೌಕರ್ಯ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಗೃಹ, ಸಂಸದೀಯ ವ್ಯವಹಾರ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ(Home Minister Basavaraj Bommai) ಹೇಳಿದ್ದಾರೆ.
ಶನಿವಾರ ಶಿಗ್ಗಾಂವ ಬಂಕಾಪುರ ಸಾರ್ವಜನಿಕ ಆಸ್ಪತ್ರೆ , ಶಿಗ್ಗಾಂವ ಬಾಡ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ತಾಲೂಕು ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮೂರನೇ ಅಲೆ ಆರಂಭವಾಗುವ ಹೊತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 10 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗುವುದು ಎಂದರು.
ಭಾನುವಾರದಿಂದ ಬಂಕಾಪುರ ಆರೋಗ್ಯ ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಕೋವಿಡ್ ಆಸ್ಪತ್ರೆಯಾಗಿ ಬಳಸಲಾಗುವುದು. 30 ಹಾಸಿಗೆ ಈ ಆಸ್ಪತ್ರೆಯಲ್ಲಿ ಮೊದಲ ಹಂತದಲ್ಲಿ 10 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. ನಂತರ 10 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು. 10 ಆಕ್ಸಿಜನ್ ಕಾನ್ಸಂಟ್ರೇಟರ್ ಒದಗಿಸಲಾಗುವುದು, ಪೋರ್ಟೆಬಲ್ ಎಕ್ಸರೇ ಮಷಿನ್, ಜನರೇಟರ್ ಸಹ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಬಂಕಾಪುರ ಆಸ್ಪತ್ರೆಗಳಿಗೆ ಕೋವಿಡ್ ಸಂದರ್ಭದಲ್ಲಿ 30 ಹಾಸಿಗೆಗಳಿಗೆ ಪ್ರೆಸರೈಸ್ ಆಕ್ಸಿಜನ್ ಸಬರಾಜು ಬೆಡ್ಗಳ ವ್ಯವಸ್ಥೆ ನಿಟ್ಟಿನಲ್ಲಿ ಆಕ್ಸಿಜನ್ ಪೂರೈಕೆ ಪೈಪ್ಲೈನ್ ಮ್ಯಾನಿಫೋಲ್ಡ್ ಅಳವಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಸಕ್ರಿಯಗೊಳಿಸಲಾಗುವುದು. 30 ಹಾಸಿಗೆಗಳ ಪೈಕಿ ಕನಿಷ್ಠ 20ಆಕ್ಸಿನ್ ಬೆಡ್ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲು ಇರಿಸಲಾಗುವುದು ಎಂದರು.
ತಾಲೂಕಿನಲ್ಲಿ ಆರೋಗ್ಯ ಮೂಲ ಸೌಕರ್ಯ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ. ಎರಡು- ಮೂರು ದಿನದಲ್ಲಿ ಜಿಲ್ಲೆಗೆ 40 ಆಕ್ಸಿಜನ್ ಬೈಪ್ಯಾಕ್ ಪೂರೈಕೆಯಾಗಲಿದೆ. ವೆಂಟಿಲೇಟರ್ಗಳಿಗೆ ಪರ್ಯಾಯವಾಗಿ ಬೈಪ್ಯಾಕ್ ಬಳಸಿ ಕೋವಿಡ್ ಸೋಂಕಿತರ ಜೀವ ಉಳಿಸಬಹುದಾಗಿದೆ. ಜಿಲ್ಲಾ ಆಸ್ಪತ್ರೆಗೆ 10 ಹಾಗೂ ಎಲ್ಲಾ ತಾಲೂಕಾ ಆಸ್ಪತ್ರೆಗಳಿಗೆ ತಲಾ ಐದರಂತೆ ಹಂಚಿಕೆ ಮಾಡಲಾಗುವುದು. ಇದಲ್ಲದೆ ಬೊಮ್ಮಾಯಿ ಟ್ರಸ್ಟ್ನಿಂದ ಶಿಗ್ಗಾಂವ ಹಾಗೂ ಸವಣೂರ ಆಸ್ಪತ್ರೆಗೆ ತಲಾ ಎರಡರಂತೆ ವಿತರಿಸಲಾಗಿದೆ ಎಂದರು.
ಆರೈಕೆ ಕೇಂದ್ರಕ್ಕೆ ಸ್ಥಳಾಂತರ:ಹೋಂ ಐಸೋಲೇಷನ್ನಲ್ಲಿರುವ(Home Isolation) ಸೋಂಕಿತರ ಪೈಕಿ ಉಸಿರಾಟದ ಮಟ್ಟ 90ಕ್ಕಿಂತ ಕಡಿಮೆ ಇದ್ದವರನ್ನು ಕೋವಿಡ್ ಕೇರ್ ಸೆಂಟರ್ ಶಿಫ್ಟ್ ಮಾಡುವ ಕೆಲಸ ನಡೆದಿದೆ. ಮನೆಯಲ್ಲಿರುವವರು ಕೋವಿಡ್ ಉಲ್ಬಣವಾಗಿ ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಬರುವುದರಿಂದ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಮುಂಚಿತವಾಗಿ ಕೋವಿಡ್ ಕೇರ್ ಸೆಂಟರ್ಗೆ ದಾಖಲಾದರೆ ವೈದ್ಯಕೀಯ ನಿಗಾದಲ್ಲಿ ಚಿಕಿತ್ಸೆ ದೊರೆತು ಗುಣಮುಖರಾಗಲಿದ್ದಾರೆ. ಗ್ರಾಮೀಣ ಕೋವಿಡ್ ಟಾಸ್ಕ್ ಫೋರ್ಸ್ಗೆ ಜವಾಬ್ದಾರಿ ನೀಡಲಾಗಿದೆ. ಮನೆ ಮನೆಗೆ ಭೇಟಿ ನೀಡಿ ಹೋಂ ಐಸೋಲೇಷನ್ನಲ್ಲಿರುವವರನ್ನು ನಿಗಾವಹಿಸಿ ಕೋವಿಡ್ ಕೇರ್ ಸೆಂಟರ್ ದಾಖಲಿಸುವ ಕೆಲಸ ಮಾಡಲಿದ್ದಾರೆ ಎಂದರು.
ಒಂದು ಗ್ರಾಮದಲ್ಲಿ 10ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣಗಳು ಕಂಡುಬಂದರೆ ಸ್ಥಳೀಯವಾಗಿ ಲಾಕ್ಡೌನ್ನಂತಹ ಬಿಗಿ ಕ್ರಮಕೈಗೊಳ್ಳಲು ಪಂಚಾಯತ್ಗಳಿಗೆ ಅಧಿಕಾರ ನೀಡಲಾಗುವುದು. ವಿಡಿಯೋ ಸಂವಾದದ ಮೂಲಕ ಗ್ರಾಮೀಣ ಸ್ಥಿಗತಿಯನ್ನು ಅರಿಯಲು ಕ್ರಮವಹಿಸಲಾಗುವುದು ಎಂದರು.
ಜಿಲ್ಲಾ ಪ್ರವೇಶಕ್ಕೆ ನೆಗೆಟಿವ್ ವರದಿ ಕಡ್ಡಾಯ:(COVID Negative Report Mandatory to Enters District)
ಲಾಕ್ಡೌನ್ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ಬಿಗಿಕ್ರಮಕೈಗೊಳ್ಳಲು ಎಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊರ ಜಿಲ್ಲೆ, ಗಡಿ ಜಿಲ್ಲೆಗಳಿಂದ ಬರುವ ಜನರು ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಬರಬೇಕು. ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಿ ಒಳಗೆ ಬಿಡಲಾಗುವುದು. ಒಳದಾರಿಗಳಲ್ಲಿ ನುಸುಳುವವರ ಮೇಲೆ ನಿಗಾವಹಿಸಲು ಪೊಲೀಸ್ ನಿಯೋಜಿಸಲಾಗುವುದು. ಎಲ್ಲಾ ಗಡಿ ಭಾಗದಲ್ಲಿ ನಾಕಾಬಂದಿ ಹಾಕಲಾಗಿದೆ ಎಂದರು.
ಯೋಗ ಕ್ಷೇಮ ವಿಚಾರಣೆ:
ಶಿಗ್ಗಾಂವ ವಾಜಪೇಯಿ ವಸತಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾಗಿರುವ ರೋಗಿಗಳೊಂದಿಗೆ ಸಂವಾದ ನಡೆಸಿ ಯೋಗಕ್ಷೇಮ ವಿಚಾರಿಸಿದರು.