ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸಿದರೂ ಬ್ಲ್ಯಾಕ್ ಫಂಗಸ್ ಬರುತ್ತೆ: AIIMS ವೈದ್ಯರ ಎಚ್ಚರಿಕೆ

ನವದೆಹಲಿ: ಕೊರೋನಾ 2ನೇ ಅಲೆ ಸೃಷ್ಟಿಸುವ ಕರಾಳತೆಯ ಮಧ್ಯೆಯೇ ಭಾರತೀಯರನ್ನು ಬ್ಲ್ಯಾಕ್​​ ಫಂಗಸ್​ (mucormycosis) ಕಾಡುತ್ತಿದೆ. ಸೋಂಕಿನಿಂದ ಗುಣಮುಖರಾದವರಲ್ಲಿ ಹೆಚ್ಚಾಗಿ ಈ ಕಪ್ಪು ಶಿಲೀಂದ್ರಿ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೀಡು ಮಾಡಿದೆ. ಈ ಸಂಬಂಧ ಏಮ್ಸ್​​​ನ ನ್ಯೂರೋಸರ್ಜನ್​​​ ವೈದ್ಯರು ನೀಡಿರುವ ಹೇಳಿಕೆ ಪ್ರಕಾರ ಸತತ 2ರಿಂದ 3 ವಾರಗಳ ಕಾಲ ಒಂದೇ ಮಾಸ್ಕನ್ನು ಧರಿಸುವುದರಿಂದಲೂ ಬ್ಲ್ಯಾಕ್​​ ಫಂಗಸ್​​ ಬರುತ್ತದೆಯಂತೆ. ಸತತವಾಗಿ ಒಂದೇ ಮಾಸ್ಕನ್ನು ಧರಿಸುವುದರಿಂದ ಫಂಗಸ್​​ ಬೆಳೆಯುತ್ತಿದೆ ಎಂದು ಡಾ. ಸರಾಟ್​​​ ಚಂದ್ರ ತಿಳಿಸಿದ್ದಾರೆ.

ಬ್ಲ್ಯಾಕ್​​ ಫಂಗಸ್​ ಹೊಸ ಕಾಯಿಲೆ ಅಲ್ಲ. ಆದರೆ ಕೊರೋನಾ ಸಾಂಕ್ರಾಮಿಕವಾಗಿರುವ ಸಂದರ್ಭದಲ್ಲಿ ಫಂಗಸ್​​​ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಪರೂಪ. ಇದಕ್ಕೆ ಅಸ್ವಚ್ಛವಾದ ಮಾಸ್ಕ್​​ ಕಾರಣವಿರಬೇಕು ಎಂದು ವೈದ್ಯರು ವಿಶ್ಲೇಷಿಸಿದ್ದಾರೆ. ಸತತವಾಗಿ ಒಂದೇ ಮಾಸ್ಕ್​​ ಧರಿಸುವುದರಿಂದ ಫಂಗಸ್​​ ಸುಲಭವಾಗಿ ಬೆಳೆಯುತ್ತಿದೆ. ಹೀಗಾಗಿಯೇ ಸೋಂಕಿತರಲ್ಲಿ ಬ್ಲ್ಯಾಕ್​ ಫಂಗಸ್​ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅನಿಯಂತ್ರಿತ ಮಧುಮೇಹ, ಅತಿಯಾದ ಸ್ಟಿರಾಯಿಡ್​​ ಬಳಕೆ, ಮೆಡಿಕಲ್​ ಆಕ್ಸಿಜನ್​​ ಪಡೆದವರು ಸೋಂಕಿತರಾದ 6 ತಿಂಗಳುಗಳ ಒಳಗೆ ಬ್ಲ್ಯಾಕ್​​ ಫಂಗಸ್​ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ಏಮ್ಸ್​​ ವೈದ್ಯರು ತಿಳಿಸಿದರು.

ಇನ್ನು ಆಕ್ಸಿಜನ್​ ಸಿಲಿಂಡರ್​ನಿಂದ ಕೋಲ್ಡ್​​ ಆಕ್ಸಿಜನನ್ನು ನೇರವಾಗಿ ನೀಡುವುದು ಅತ್ಯಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಹಿಂದೆಂದೂ ಪ್ಯಾಂಡಮಿಕ್​ನೊಂದಿಗೆ ಫಂಗಸ್​ ಸಮಸ್ಯೆ ಬೆಸೆದುಕೊಂಡಿರಲಿಲ್ಲ. ಆದರೆ ಈಗ ಕೊರೋನಾ 2ನೇ ಅಲೆಯ ಸಮಯದಲ್ಲಿ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಜನರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದೆ. ಇದಕ್ಕೆ ಸತತವಾಗಿ ಒಂದೇ ಮಾಸ್ಕನ್ನು 2-3 ವಾರಗಳ ಕಾಲ ಬಳಸುತ್ತಿರುವುದು ಕಾರಣವಿರಬಹುದು ಎಂದು ಏಮ್ಸ್​​ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಯಾರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳಬಹುದು?

  • ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು
  • ಅತಿ ಹೆಚ್ಚು ಸ್ಟಿರಾಯಿಡ್ಸ್​ ಬಳಸುವವರರು
  • ಕ್ಯಾನ್ಸರ್​ ಚಿಕಿತ್ಸೆ ಪಡೆಯುತ್ತಿರುವವರು
  • ದೀರ್ಘ ಕಾಲದ ಆರೋಗ್ಯ ಸಮಸ್ಯೆ ಇರುವವರು
  • ಅತಿಯಾದ ಶೀತ, ಥಂಡಿ ಸಮಸ್ಯೆ ಎದುರಿಸುತ್ತಿರುವವರು
  • ಉಸಿರಾಟದ ಸಮಸ್ಯೆಯಿಂದ ಮೆಡಿಕಲ್​ ಆಕ್ಸಿಜನ್​ ಸಹಾಯ ಪಡೆದವರು
  • ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಪಡೆದವರು

ಮೇಲಿನ ಲಕ್ಷಣಗಳಿರುವವರಿಗೆ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಬ್ಲ್ಯಾಕ್​ ಫಂಗಸ್​ ಬಂದಿದೆಯಾ ಎಂದು ಪರೀಕ್ಷಿಸುವುದು ಹೇಗೆ?

  • ಮೂಗಿನಲ್ಲಿ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು, ಮೂಗಿನಲ್ಲಿ ಕಿರಿಕಿರಿ
  • ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಕಣ್ಣು ಕೆಂಪಾಗುವುದು
  • ದೃಷ್ಟಿ ಮಂಜಾಗುವುದು, ರೆಪ್ಪೆ ತೆರೆಯಲು/ಮುಚ್ಚಲು ಕಷ್ಟವಾಗುವುದು, ಕಣ್ಣು ಕಾಣದಿರುವುದು
  • ಮುಖ ಮರಗಟ್ಟುವಿಕೆ, ಜುಮ್​​ ಎನಿಸುವ ಅನುಭವ
  • ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು
  • ಮುಖದಲ್ಲಿ ಊತ, ಮುಖ ಕಪ್ಪುಗಟ್ಟುವಿಕೆ , ಮುಖದಲ್ಲಿ ನೋವು
  • ಹಲ್ಲು ಉದುರುವುದು, ಬಾಯಿಯಲ್ಲಿ ಕಪ್ಪು ಬಣ್ಣ, ಊತ ಕಾಣಿಸಿಕೊಳ್ಳುವುದು

ಮೇಲಿನ ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಕಾಣಬೇಕು. ಹೈ ಶುಗರ್​ ಇರುವವರು, ಅನಾರೋಗ್ಯ ಪೀಡಿತರು ಈ ಲಕ್ಷಣಗಳ ಬಗ್ಗೆ ಗಮನ ಹರಿಸಬೇಕು. ಸ್ವಯಂ ನಿಗಾ ವಹಿಸಬೇಕು. ಸಣ್ಣ ನಿರ್ಲಕ್ಷ್ಯವೂ ಮುಂದೆ ದೊಡ್ಡ ಅಪಾಯ ತಂದೊಡ್ಡಬಹುದು.

ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಾಗ ಏನು ಮಾಡಬೇಕು?

  • ಬ್ಲ್ಯಾಕ್​ ಫಂಗಸ್​​ ಲಕ್ಷಣಗಳು ಕಂಡು ಬಂದೊಡನೆ ENT ವೈದ್ಯರನ್ನು ಸಂಪರ್ಕಿಸಿ
  • ENT ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಪಡೆಯಬೇಕು
  • ರಕ್ತದಲ್ಲಿ ಮಧುಮೇಹ ಪ್ರಮಾಣವನ್ನು ಸದಾ ಪರೀಕ್ಷಿಸುತ್ತಿರಬೇಕು, ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಬೇಕು
  • ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೇ ಚಿಕಿತ್ಸೆ ಪಡೆಯಬೇಕು, ನಿರ್ಲಕ್ಷ್ಯ ಮಾಡಬಾರದು
  • ವೈದ್ಯರನ್ನು ಕೇಳದೆ ಸ್ಟಿರಾಯಿಡ್​​, ಆ್ಯಂಟಿ ವೈರಲ್​ ಔಷಧಗಳನ್ನು ತೆಗೆದುಕೊಳ್ಳಬಾರದು
  • ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬೇಕು.

ಅನಗತ್ಯವಾಗಿ ವೈದ್ಯರನ್ನು ಕೇಳದೆ ಔಷಧಗಳನ್ನು ತೆಗೆದುಕೊಳ್ಳುವುದು ಪ್ರಾಣಕ್ಕೆ ಕುತ್ತು ತರಬಹುದು. ಅತಿಯಾದ ಹೆದರಿಕೆಯಿಂದ ಅಗತ್ಯವಿಲ್ಲದಿದ್ದರೂ ಸಿಟಿ ಸ್ಕ್ಯಾನ್​, ಎಂಆರ್​ಐ ಮಾಡಿಸಬಾರದು. ಭಯಕ್ಕಿಂತ ಹೆಚ್ಚಾಗಿ ಎಚ್ಚರಿಕೆಯಿಂದ ಇದ್ದರೆ ಬ್ಲ್ಯಾಕ್​ ಫಂಗಸ್​ನಿಂದ ಬಚಾವ್​ ಆಗಬಹುದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *