ಕಾರವಾರದ ಪೊಲೀಸರನ್ನು ಕಾಡಿದ ಕೊರೋನಾ: ಲಸಿಕೆಯಿಂದ ಸೋಂಕಿನ ವಿರುದ್ಧ ಪ್ರಾಬಲ್ಯ ಮೆರೆದ ಖಾಕಿ ಪಡೆ

ಕಾರವಾರ: ಕೊರೋನಾ ಪಾಸಿಟಿವಿಟಿ ಹೆಚ್ಚಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪೊಲೀಸ್​​ ಇಲಾಖೆಯನ್ನು ಕಾಡುತ್ತಿದೆ. ಈವರೆಗೆ ಜಿಲ್ಲೆಯ 251 ಪೊಲೀಸರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ.ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಖಚಿತಪಡಿಸಿದ್ದು, ಈಗಾಗಲೇ 188 ಪೊಲೀಸರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸದ್ಯ 63 ಪೊಲೀಸರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನಿತ್ಯ ಸೋಂಕಿತರ ಪ್ರಮಾಣ ಹೆಚ್ಚುತ್ತಿರೋದ್ರಿಂದ ಪೋಲಿಸರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೇವಲ ಪೋಲಿಸರಷ್ಟೇ ಅಲ್ಲದೆ ಇವರನ್ನ ನಂಬಿದ ಕುಟುಂಬ ಸದಸ್ಯರಲ್ಲೂ ಆತಂಕ ಮನೆ ಮನೆ ಮಾಡಿದ್ದು ಭಯದಲ್ಲೆ ದಿನ‌ದೂಡುತ್ತಿದ್ದಾರೆ.

 ಎರಡನೇ ಅಲೆಗೆ ಬೆಚ್ಚಿ ಬಿದ್ದ ಖಾಕಿ

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೊರೋನಾ ಕಡಿವಾಣಕ್ಕೆ ರಸ್ತೆಗಿಳಿದು ದುಡಿಯುತ್ತಿರುವ ಪೊಲೀಸರನ್ನೂ ಕೊರೋನಾ ಬಿಟ್ಟಿಲ್ಲ. ಲಾಕ್ ಡೌನ್ ಘೋಷಣೆಯಾದ ನಂತರ ಪೊಲೀಸರ ಕೆಲಸ ಹೆಚ್ಚಾಗಿದ್ದು, ಇದಾದ ನಂತರವೇ ಹೆಚ್ಚು ಪ್ರಕರಣ ಕಾಣಿಸಿಕೊಂಡಿದೆ ಎನ್ನಲಾಗಿದೆ.ಇನ್ನು ಜಿಲ್ಲೆಯಲ್ಲಿ 1803 ಪೊಲೀಸರಿದ್ದು, ಈಗಾಗಲೇ 1555 ಜನರು ಎರಡನೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಅನಾರೋಗ್ಯಕ್ಕೊಳಗಾದವರು, ಗರ್ಭಿಣಿಯರು ಓಳಗೊಂಡಂತೆ ವಿವಿಧ ಕಾರಣದಿಂದ 48 ಜನರು ಇನ್ನು ಲಸಿಕೆಯನ್ನ ಪಡೆದಿಲ್ಲ. ಇನ್ನು ಮೊದಲ ಹಂತದಲ್ಲಿ ಲಸಿಕೆಯನ್ನ 179 ಪೊಲೀಸರು ಪಡೆದಿದ್ದು, ಎರಡನೇ ಹಂತದ ಲಸಿಕೆಯನ್ನ ಪಡೆಯಬೇಕಾಗಿದೆ ಎಲ್ಲಾ ಪೊಲೀಸರು ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆ ನೀಡಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.

ಮನೆಯಲ್ಲೇ ಗುಣಮುಖರಾಗುತ್ತಿರುವ ಖಾಕಿ ಪಡೆ

ಪೋಲಿಸರು ಎಷ್ಟೆ ಕಾಳಜಿ ವಹಿಸಿದ್ರು ಸೋಂಕು ವಕ್ಕರಿಸಿದೆ. ಕರ್ತವ್ಯ ಮುಗಿಸಿ‌ಮನೆಗೆ ಹೋಗಿ ಸಾಕಷ್ಟು ಸುರಕ್ಷಿತ ಕ್ರಮ ಕೈಗೊಂಡ್ರು ಕೂಡಾ ಮಹಾಮಾರಿ ಖಾಕಿ ಪಡೆಯನ್ನ ಬಿಡಲಿಲ್ಲ. ‌ಜತೆಗೆ ಸ್ಟೇಷನ್ ನಲ್ಲೂ ಕೂಡಾ ಸಾಕಷ್ಟು ಸುರಕ್ಷಿತ ಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ಮಹಾಮಾರಿಯ ಅಟ್ಟಹಾಸವೇ ಜೋರಾಗಿದ್ದು, ಹೀಗೆ ಬೆನ್ನು ಬಿಡದೆ ಕೊರೋ‌ನಾ ಸೋಂಕು ಖಾಕಿ‌ ಪಡೆಯನ್ನು ಕಾಡುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ 251 ಪೊಲೀಸರಿಗೆ ಸೋಂಕು ಧೃಡಪಟ್ಟರು ಯಾರಿಗೂ ಗಂಭೀರವಾದ ಪರಿಣಾಮ ಬೀರಿಲ್ಲ. ಬಹುತೇಕರು ಹೋಂ ಐಸೋಲೇಷನ್‌ನಲ್ಲಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಕೊರೋನಾ ಫ್ರಂಟಲೈನ್ ವರ್ಕರ್‌ಗಳಾಗಿರುವ ಪೊಲೀಸರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲೇ ಬೇಕು ಎಂದು ಆದೇಶ ಮಾಡಿದ್ದರು. ಇದರ ಪರಿಣಾಮವಾಗಿ ಬಹುತೇಕರು ಲಸಿಕೆ ಪಡೆದಿದ್ದರಿಂದ ಕೊರೋನಾ ಬಂದರು ಯಾವುದೇ ಅನಾಹುತವಾಗದೇ ಗುಣಮುಖರಾಗುತ್ತಿದ್ದಾರೆ ಎನ್ನಲಾಗಿದೆ.ಇದಲ್ಲದೇ ಠಾಣೆಗಳಲ್ಲಿ ಪೊಲೀಸರಿಗೆ ಮಾನಸಿಕ ಧೈರ್ಯ ತುಂಬಲು ಹಬೆ ವ್ಯವಸ್ಥೆಯನ್ನ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಹ ಮಾಡಿದ್ದು, ಪೊಲೀಸರಿಗೆ ಸಹಾಯವಾಗಿದೆ ಎನ್ನಲಾಗಿದೆ. ಇನ್ನು ಸಾರ್ವಜನಿಕರು ಕೋವಿಡ್​ ನಿಯಮವಾದ ಮಾಸ್ಕ್​ ಧಾರಣೆ, ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಬೇಕು. ಲಸಿಕೆ ಪಡೆಯುವ ಮೂಲಕ ಕೊರೋನಾ ವಿರುದ್ಧದ ಯುದ್ಧದಲ್ಲಿ ಕೈ ಜೋಡಿಸಬೇಕು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *