ಬೆಂಗಳೂರು ತಲುಪಿದ ಮಹಿಳಾ ಆಕ್ಸಿಜನ್ ಎಕ್ಸ್ ಪ್ರೆಸ್
ಬೆಂಗಳೂರು,ಮೇ.22-ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡ 120 ಮೆಟ್ರಿಕ್ ಟನ್ ಅಮ್ಲಜನಕ ಹೊತ್ತುತಂದಿರುವ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ನಗರ ತಲುಪಿದೆ. ಜಮ್ಷೆಡ್ಪುರದ ಟಾಟಾ ನಗರದಿಂದ ಅಮ್ಲಜನಕ ಹೊತ್ತುತಂದಿರುವ ಮಹಿಳಾ ಆಕ್ಸಿಜನ್ ಎಕ್ಸ್ಪ್ರೆಸ್ ಕರ್ನಾಟಕ ತಲುಪಿದೆ ಎಂದು ರೈಲ್ವೇ ಸಚಿವ ಪಿಯೂಷ್ ಚಾವ್ಲಾ ಟ್ವಿಟ್ ಮಾಡಿದ್ದಾರೆ.ಇದುವರೆಗೂ 7 ಆಕ್ಸಿಜನ್ ರೈಲುಗಳು ನಗರಕ್ಕೆ ಆಗಮಿಸಿದ್ದು ಎಂಟನೆ ರೈಲು ಗುಜರಾತ್ನಿಂದ ಇಂದು ಬೆಂಗಳೂರು ತಲುಪಲಿದೆ.
ರಾಜ್ಯದಲ್ಲಿ ಪ್ರತಿನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಇದೆ ಎಂದು ಸರ್ಕಾರ ಹೇಳಿರುವ ಹಿನ್ನಲೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಅಗತ್ಯವಿರುವ ಅಮ್ಲಜನಕ ಸರಬರಾಜು ಮಾಡಲಾಗುತ್ತಿದೆ.
ಕರ್ನಾಟಕದಲ್ಲಿ ನಿನ್ನೆ 32218 ಸೋಂಕು ಪ್ರಕರಣಗಳು ಪತ್ತೆಯಾಗಿ 353 ಮಂದಿ ಮಹಾಮಾರಿಗೆ ಬಲಿಯಾಗಿದ್ದರು. ಇದರೊಂದಿಗೆ ರಾಜ್ಯದಲ್ಲಿ 23.67 ಲಕ್ಷ ಮಂದಿ ಸೋಂಕಿಗೆ ಗುರಿಯಾಗಿದ್ದರೆ ಇದುವರೆಗೂ 24 ಸಾವಿರ ಮಂದಿ ಬಲಿಯಾಗಿದ್ದಾರೆ.