ಕೋವಿಡ್ ಲಸಿಕೆ ಕೊರತೆ: ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜಿಲ್ಲೆಗೆ ಹೆಚ್ಚಿನ ಲಸಿಕೆ ಹಂಚಿಕೆಗೆ ಪ್ರಯತ್ನ -ಮುರುಗೇಶ ನಿರಾಣಿ
ಕಲಬುರಗಿ,ಮೇ.23(ಕ.ವಾ) ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಕೊರತೆ ನೀಗಿಸುವ ನಿಟ್ಟಿನಲ್ಲಿ ಇಂದು (ರವಿವಾರ) ಸಂಜೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ಲಸಿಕೆ ಹಂಚಿಕೆ ಮಾಡಲು ಪ್ರಯತ್ನಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಅವರು ರವಿವಾರ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಿಂದಲೆ ಕಲಬುರಗಿ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕ-ಸಂಸದರೊಂದಿಗೆ ಝೂಮ್ ಮೀಟ್ ಮೂಲಕ ಸಂವಾದ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆ ಹೆಚ್ಚಿದ್ದು, ಸಿ.ಎಂ. ಅವರ ಗಮನಕ್ಕೆ ತರಲಾಗುವುದು ಎಂದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತೀವ್ರಗತಿಯಲ್ಲಿ ಸೋಂಕು ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಜೊತೆಗೆ ಕೋವಿಡ್ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಮುರುಗೇಶ ನಿರಾಣಿ ನಿರ್ದೇಶನ ನೀಡಿದರು. ಡಿ.ಸಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ಈ ಕುರಿತಂತೆ ಎಲ್ಲಾ ತಹಶೀಲ್ದಾರರಿಗೆ ಪೊಲೀಸರ ಸಹಕಾರದೊಂದಿಗೆ ಕೋವಿಡ್ ಶಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಕ್ಕೆ ಸೂಚಿಸಿದ್ದು, ರವಿವಾರ ಸಂಜೆ ಹೊತ್ತಿಗೆ ಶೇ.80ರಷ್ಟು ಸ್ಥಳಾಂತರ ಕಾರ್ಯ ನಡೆಯಲಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲೂಕ ಆಸ್ಪತ್ರೆಗಳಿಗೆ ಆಕ್ಸಿಜನ್ ಜನರೇಶನ್ ಪ್ಲಾಂಟ್ ಸ್ಥಾಪನೆ ಕುರಿತಂತೆ ರಾಜ್ಯ ಸರ್ಕಾರದಿಂದಲೆ ಅಗತ್ಯ ಉಪಕರಣಗಳು ಖರೀದಿಸಿ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಆರೋಗ್ಯ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸಚಿವರು ರಾಜ್ಯ ಸರ್ಕಾರವು ಎಲ್ಲಾ ತಾಲೂಕುಗಳಿಗೆ ಆಕ್ಸಿಜನ್ ಜನರೇಷನ್ ಪ್ಲಾಂಟ್ ಖರೀದಿಗೆ ಮುಂದಾಗಿದ್ದರಿಂಸ ಪೂರೈಕೆ ತಡವಾಗುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರದಿಂದ ಅಧಿಕೃತ ದರ ಪಡೆದು ಜಿಲ್ಲಾ ಖನಿಜ ನಿಧಿಯಿಂದಲೇ ಇದನ್ನು ಖರೀದಿಸಬೇಕು ಮತ್ತು ಆದಷ್ಟು ಬೇಗ ಈ ಕಾರ್ಯ ಆಗಬೇಕು. ಇದಲ್ಲದೆ ಮೊಬೈಲ್ ಆಕ್ಸಿಜನ್ ಸಹ ಖರೀದಿಸಬೇಕು ಎಂದು ಡಿ.ಸಿ.ಗೆ ಸೂಚಿಸಿದರು.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಮುಕ್ತ ಗ್ರಾಮ, ಕೋವಿಡ್ ಮುಕ್ತ ವಾರ್ಡ್, ಕೋವಿಡ್ ಮುಕ್ತ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡುವಲ್ಲಿ ಶ್ರಮಿಸುವ ಆರೋಗ್ಯ ಮತ್ರು ಮುಂಚೂಣಿ ಕಾರ್ಯಕರ್ತರಿಗೆ ಪ್ರಶಸ್ತಿ, ಗೌರವ ಸನ್ಮಾನ ಮಾಡುವ ವಿನೂತನ ಪ್ರಯತ್ನ ಮಾಡಲಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿಯೂ ಇದನ್ನು ಜಾರಿಗೆ ತರಲಾಗುವುದು ಎಂದು ಸಚಿವರು ತಿಳಿಸಿದರು.
ಗ್ರಾಮೀಣ ಭಾಗಕ್ಕೆ 24 ಗಂಟೆ ವಿದ್ಯುತ್ ಕೊಡಿ:
ಸಂಸದ ಡಾ.ಉಮೇಶ್ ಜಾದವ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ವಿಶೇಷವಾಗಿ ತಾಂಡಾಗಳಲ್ಲಿ ಜನರು ಜ್ವರದಿಂದ ಬಳಲುತ್ತಿದ್ದು, ಕೋವಿಡ್ ಟೆಸ್ಟಿಂಗ್ ಹೆಚ್ಚಳ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಕೃಷಿ ಮುಖ್ಯ ಕಸುಬಾಗಿರುವುದರಿಂದ ದಿನದ 24 ಗಂಟೆ ವಿಶೇಷವಾಗಿ ರಾತ್ರಿಯಲ್ಲಿ ಸಿಂಗಲ್ ಫೇಸ್ ವಿದ್ಯುತ್ ನೀಡಿದಲ್ಲಿ ಹೊಲದಲ್ಲಿ ಜನ ಕೆಲಸ ಮಾಡಲು ಹೋಗುತ್ತಾರೆ. ಇದರಿಂದ ಹಳ್ಳಿಯಲ್ಲಿ ಗುಂಪುಗೂಡುವಿಕೆ ಕಡಿಮೆಯಾಗಿ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದು ಎಂದಾಗ ಶಾಸಕ ಎಂ.ವೈ.ಪಾಟೀಲ ಸಹ ಇದಕ್ಕೆ ದ್ವನಿಗೂಡಿಸುತ್ತಿದ್ದಂತೆ ಸಚಿವ ಮುರುಗೇಶ ನಿರಾಣಿ ಅವರು ವಿದ್ಯುತ್ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಕಟ್ಟೆ ಹರಟೆಗೆ ಬ್ರೆಕ್ ಹಾಕಿ:
ಜೇವರ್ಗಿ ಶಾಸಕ ಡಾ.ಅಜಯ ಸಿಂಗ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡುತ್ತಿರುವುದು ಆತಂಕದ ವಿಷಯವಾಗಿದೆ. ಇದನ್ನು ತಡೆಗಟ್ಟಲು ಹಳ್ಳಿಗಳಲ್ಲಿ ಮಾಸ್ಕ್ ಧರಿಸದೆ ಮಾತಾಡಿಕೊಂಡು ಕೂಡುವ ಹರಟೆ ಕಟ್ಟೆಗೆ ಬ್ರೆಕ್ ಹಾಕಬೇಕು. ಕೋವಿಡ್ ಮೂರನೇ ಅಲೆಯ ಭೀತಿಯ ಕಾರಣ ಈಗಿನಿಂದಲೇ ಪೂರ್ವಸಿದ್ಧತೆ ಕೈಗೊಂಡು ಎಲ್ಲರಿಗೂ ಕೋವಿಡ್ ಲಸಿಕೆ ನೀಡುವಲ್ಲಿ ರಾಜ್ಯ ಸರ್ಕಾರ ಪ್ರಥಮಾದ್ಯತೆ ನೀಡಬೇಕು. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಜಿಲ್ಲೆಯಲ್ಲಿ 250 ಹಾಸಿಗೆ ಮೀಸಲಿರಿಸಿದ್ದು, ಇದು ಸಾಕಾಗುವುದಿಲ್ಲ. ಅಕ್ಕಪಕ್ಕದ ಜಿಲ್ಲೆಗಳಿಂದ ಚಿಕಿತ್ಸೆಗೆ ರೋಗಿಗಳು ಕಲಬುರಗಿ ಜಿಮ್ಸ್ ಅಸ್ಪತ್ರೆಗೆ ಬರುತ್ತಿದ್ದು, ಹಾಸಿಗೆ ಹೆಚ್ಚಳ ಮಾಡಬೇಕು ಎಂದರು.
ಅಫಜಲಪೂರ ಶಾಸಕ ಎಂ.ವೈ. ಪಾಟೀಲ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅರಿವಿನ ಕೊರತೆಯಿಂದಲೆ ಸೋಂಕು ತೀವ್ರಗತಿಯಲ್ಲಿ ಹರಡಲು ಕಾರಣವಾಗಿದ್ದು, ಆಂದೋಲನದ ರೂಪದಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಮತ್ತು ತಾಲೂಕಿನಲ್ಲಿ ನಡೆಯುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಸಚಿವರಲ್ಲಿ ಕೋರಿದರು. ಸ್ಯಾಂಡ್ ಮಾಫಿಯಾ ಕಡಿವಾಣಕ್ಕೆ ಅಧಿಕಾರಿಗಳಿಗೆ ಸೂಚಿಸುವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಚಿತ್ತಾಪೂರ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವ ವಲಸೆ ಕಾರ್ಮಿಕರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದು ಸಹ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಹಳ್ಳಿಯಲ್ಲಿ ಯಾರಿಗೆ ಸೋಂಕು ತಗುಲಿದರು ಅವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ, ಪಕ್ಷಬೇಧ ಮರೆತು ಎಲ್ಲ ಜನಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡಲಾಗುವುದು ಎಂದ ಅವರು ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಬಾಧಿತರಾಗಬಹುದು ಎಂದು ತಜ್ಞರು ಅಂದಾಜಿಸಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಮಕ್ಕಳ ವಿಭಾಗದ ವಾರ್ಡ್ ಬಲಗೊಳಿಸಬೇಕು. ಕಾಂಗ್ರೆಸ್ ಪಕ್ಷದಿಂದ ಇತ್ತೀಚೆಗೆ 51 ಆಕ್ಸಿಜನ್ ಕನ್ಸನ್ ಟ್ರೇಟರ್ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿದೆ ಎಂದರು.
ಡಿ.ಸಿ. ವಿ.ವಿ.ಜ್ಯೋತ್ಸ್ನಾ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಇಳಿಮುಖವಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 5638 ಗೆ ಇಳಿಮುಖವಾಗಿದಲ್ಲದೆ ಐ.ಸಿ.ಯು, ಆಕ್ಸಿಜನ್ ಬೆಡ್ ಖಾಲಿ ಇವೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗಿ ಕಾಣುತ್ತಿದ್ದು, ನಿಯಂತ್ರಣಕ್ಕೆ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದ ಅವರು ಜನಪ್ರತಿನಿಧಿಗಳ ಸಹಕಾರವು ಮುಖ್ಯವಾಗಿದೆ ಎಂದರು. ಇನ್ನು ಜಿಲ್ಲೆಯಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಸ್ಥಾಪನೆ, ಆಕ್ಸಿಜನ್ ಟ್ಯಾಂಕರ್ ಮತ್ತು ಕನ್ಸನ ಟ್ರೇಟರ್ ಖರೀದಿ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅಂದಾಜು ಪಟ್ಟಿ ಸಲ್ಲಿಸಿದ್ದು, ನಾಳೆಯೇ ಟೆಂಡರ್ ಕರೆಯಲಾಗುವುದು ಎಂದರು.
ಶಹಾಬಾದ ಇ.ಎಸ್.ಐ.ಸಿ. ಅಸ್ಪತ್ರೆ ನವೀಕರಣಕ್ಕೆ 2 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಕೆ: ಶಹಾಬಾದ ಇ.ಎಸ್.ಐ.ಸಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಕಟ್ಟಡ ನವೀಕರಣ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ 2 ಕೋಟಿ ರೂ. ಅಂದಾಜು ಪಟ್ಟಿ ಸಲ್ಲಿಸಿದೆ ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ತಿಳಿಸಿದರು. ತಡಮಾಡದೆ ನಾಳೆಯಿಂದಲೆ ಈ ಕೆಲಸ ಅರಂಭಿಸಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ವಿಧಾನ ಪರಿಷತ್ತಿನ ಶಾಸಕರಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ್, ಸುನೀಲ್ ವಲ್ಯಾಪುರೆ ಅವರು ಮಾತನಾಡಿದರು.
ಝೂಮ ಮೀಟ್ ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಣ ಹಾಗೂ ಕಲಬುರಗಿ ದಕ್ಣಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ,
ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಸಿ.ರವಿಕುಮಾರ್, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್, ಜಿಲ್ಲಾ ಸರ್ಜನ್ ಡಾ.ಅಂಬಾರಾಯ ರುದ್ರವಾಡಿ, ಆರ್.ಸಿ.ಹೆಚ್.ಓ ಡಾ. ಪ್ರಭುಲಿಂಗ ಮಾನಕರ, ಸಹಾಯಕ ಔಷಧ ನಿಯಂತ್ರಕ ಡಾ. ಗೋಪಾಲ ಭಂಡಾರಿ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ರಮೇಶ ಕೋಲಾರ ಸೇರಿದಂತೆ ತಾಲೂಕಿನ ತಹಶೀಲ್ದಾರರು, ಆರೋಗ್ಯ ಇಲಾಖೆಯ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.