ಕೋವಿಡ್‌ ವಿಚಾರದಲ್ಲಿ ಕುಗ್ಗಿದ ಬಿಜೆಪಿ ವರ್ಚಸ್ಸು; 7 ರಾಜ್ಯಗಳ ಚುನಾವಣೆಗೆ ಮುನ್ನ ಪಕ್ಷ ಬಲವರ್ಧನೆಗೆ ಕಸರತ್ತು

ಹೈಲೈಟ್ಸ್‌:

  • ಕೊರೊನಾ ನಿರ್ವಹಣೆ ವಿಚಾರದಲ್ಲಿ ಕುಗ್ಗಿದ ಬಿಜೆಪಿ ವರ್ಚಸ್ಸು
  • ಮುಂಬರುವ 7 ರಾಜ್ಯಗಳ ಚುನಾವಣೆಗೆ ಮುನ್ನ ಪಕ್ಷ ಬಲವರ್ಧನೆಗೆ ಕಸರತ್ತು
  • ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರಮುಖರಿಂದ ಸುದೀರ್ಘ ಸಮಾಲೋಚನೆ
  • ಗಂಗಾ ನದಿಯಲ್ಲಿ ತೇಲಿ ಬಂದ ಶವಗಳಿಂದ ಉ.ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ
  • ಕೊರೊನಾ ನಿರ್ವಹಣೆಯಲ್ಲಿ ಉ.ಪ್ರ. ಸರ್ಕಾರ ವಿಫಲವಾಗಿದೆಯೆಂದು ಬಿಜೆಪಿ ನಾಯಕರಿಂದಲೇ ದೂರು

ಹೊಸದಿಲ್ಲಿ: ಕೋವಿಡ್‌ ಸೋಂಕು ಹಾವಳಿಯಿಂದ ದೇಶ ತಲ್ಲಣಿಸುತ್ತಿರುವ ನಡುವೆಯೇ ರಾಜಕೀಯ ವಿದ್ಯಮಾನಗಳು ಚುರುಕು ಗೊಂಡಿವೆ. ಮುಂದಿನ ವರ್ಷ ಉತ್ತರಪ್ರದೇಶ ಸೇರಿ ಏಳು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ವರ್ಚಸ್ಸು ಬಲವರ್ಧನೆ ಕಸರತ್ತು ಆರಂಭಿಸಿದೆ.

ಸದ್ಯ ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಆಗಿರುವ ಹಾನಿಯನ್ನು ಸರಿಪಡಿಸಿ, ಗೆಲುವಿನ ಪಥ ಕ್ರಮಿಸುವುದು ಹೇಗೆ ಎನ್ನುವ ಮುಖ್ಯ ಪ್ರಶ್ನೆ ಇಟ್ಟುಕೊಂಡು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಪ್ರಮುಖರು ಸುದೀರ್ಘ ಸಮಾಲೋಚನೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಕೂಡ ಈ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆಯನ್ನು ದೇಶದ ರಾಜಕೀಯ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತದೆ. ಕಳೆದ ನಾಲ್ಕುವರೆ ವರ್ಷಗಳಿಂದ ಇಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್‌ ಸರಕಾರ ಉತ್ತಮ ಆಡಳಿತ ನೀಡಿದೆ. ಆದರೆ, ಕೋವಿಡ್‌ ಬಿಕ್ಕಟ್ಟಿನಿಂದಾಗಿ ಕಳೆದೆರಡು ತಿಂಗಳಿಂದ ರಾಜ್ಯದಲ್ಲಿ ವಿಚಿತ್ರ ಬಿಕ್ಕಟ್ಟು ಶುರುವಾಗಿದೆ.

ಸೋಂಕು ನಿಯಂತ್ರಣ ಮತ್ತು ನಿಭಾವಣೆ ಜವಾಬ್ದಾರಿಯಲ್ಲಿ ಗಂಭೀರ ಲೋಪಗಳು ಘಟಿಸಿದ್ದು, ಪಕ್ಷದ ವರ್ಚಸ್ಸಿನ ಅಲೆಗೆ ಹಿನ್ನಡೆ ಉಂಟಾಗಿದೆ. ಚುನಾವಣೆ ಹೊಸ್ತಿನಲ್ಲಿ ಇಂತಹ ಸವಾಲು ಎದುರಾಗಿರುವುದು ವರಿಷ್ಠರನ್ನು ಕಳವಳಕ್ಕೆ ದೂಡಿದೆ. ಇದನ್ನು ಎದುರಿಸಿ, ಪರಿಸ್ಥಿತಿಯನ್ನು ಸುಧಾರಿಸಲು ಅನುಸರಿಬೇಕಾದ ಕಾರ್ಯತಂತ್ರಗಳು ಏನು ಎನ್ನುವ ಕುರಿತು ಕಳೆದ ಒಂದು ವಾರದಿಂದ ಬಿಜೆಪಿಯ ದಿಲ್ಲಿ ವರಿಷ್ಠರು ನಿರಂತರ ಸಮಾಲೋಚನೆ ನಡೆಸಿದ್ದಾರೆ. ಭಾನುವಾರ ರಾತ್ರಿ ನಡೆದ ಮಹತ್ವದ ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಪ್ರದೇಶ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್‌ ಬನ್ಸಾಲ್‌ ಮತ್ತು ಆರ್‌ಎಸ್‌ಎಸ್‌ ಮುಖಂಡ ದತ್ತಾತ್ರೇಯ ಹೊಸಬಾಳೆ ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಡವಾಗಿ ಸಭೆಗೆ ಆಗಮಿಸಿದರು.

ವಿಶೇಷವಾಗಿ ಕೋವಿಡ್‌ ಬಿಕ್ಕಟ್ಟಿನಿಂದ ಪಕ್ಷ ಎದುರಿಸುತ್ತಿರುವ ಸವಾಲಿನ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ‘ಪ್ರಧಾನಿ ಮೋದಿ ಅವರ ಜನಪ್ರಿಯತೆ ಕೂಡ ಈ ಅವಧಿಯಲ್ಲಿ ಸ್ವಲ್ಪಮಟ್ಟಿಗೆ ಕುಗ್ಗಿದೆ. ಆಕ್ಸಿಜನ್‌ ಮತ್ತು ಲಸಿಕೆ ಪೂರೈಕೆ ವಿಷಯದಲ್ಲಿ ಆದ ಏರುಪೇರಿನಿಂದ ಅವರ ಇಮೇಜ್‌ಗೆ ಪೆಟ್ಟು ಬಿದ್ದಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಈ ಕುರಿತು ವಿವರವಾದ ಚರ್ಚೆ ನಡೆಯಿತು’ ಎಂದು ಮೂಲಗಳು ತಿಳಿಸಿವೆ. ಎರಡನೇ ಅಲೆಯ ಆಘಾತ: ಕಳೆದ ಏಳು ವರ್ಷಗಳಿಂದ ಮೋದಿ ಅಲೆ ಏಕಾಂಗಿಯಾಗಿ ಪಕ್ಷದ ವರ್ಚಸ್ಸನ್ನು ರಕ್ಷಣೆ ಮಾಡಿತ್ತು. ಆರ್‌ಎಸ್‌ಎಸ್‌ ನಡೆಸುತ್ತ ಬಂದ ಜನ ಸಂಪರ್ಕ ಸಭೆಗಳು ಆ ವರ್ಚಸ್ಸನ್ನು ಅಚ್ಚಳಿಯದಷ್ಟು ಭದ್ರಗೊಳಿಸಿದ್ದವು. ಆದರೆ ಕೊರೊನಾ ಎರಡನೇ ಅಲೆಯು ಆ ಎಲ್ಲಾ ಪ್ರಯತ್ನಗಳ ಫಲವನ್ನು ಒಂದೇ ಏಟಿಗೆ ತೊಳೆದು ಹಾಕಿದ್ದು, ವರಿಷ್ಠರ ಕಳವಳವನ್ನು ಹೆಚ್ಚಿಸಿದೆ. ಕೊರೊನಾ ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಕಂಗೆಡಿಸಿದ್ದರೂ, ಸೋಂಕಿನ ಎರಡನೇ ಅಲೆ ಭಾರತದ ಮೇಲೆ ಅತಿಕೆಟ್ಟ ಪರಿಣಾಮ ಉಂಟು ಮಾಡಿದೆ. ಅದರಲ್ಲೂ ವಿಶೇಷವಾಗಿ ಉತ್ತರಪ್ರದೇಶದಲ್ಲಿ ನಡೆದ ಕೋವಿಡ್‌ ಸಂಬಂಧಿತ ಸರಣಿ ಘಟನೆಗಳು ಬಿಜೆಪಿಗೆ ಇರಿಸುಮುರಿಸನ್ನು ತಂದೊಡ್ಡಿವೆ. ಗಂಗಾ ನದಿಯಲ್ಲಿ ತೇಲಿದ ಸೋಂಕಿತರ ಶವಗಳು ಯೋಗಿ ಸರಕಾರಕ್ಕೆ ದೊಡ್ಡ ಕಳಂಕವನ್ನು ತಂದಿತ್ತಿವೆ. ಎರಡನೇ ಅಲೆ ನಿಭಾಯಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲಗೊಂಡಿದೆ ಎಂದು ಖುದ್ದು ಬಿಜೆಪಿ ಮುಖಂಡರೇ ದೂರಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *