ಸಿಬಿಐಗೆ ಮುಂದಿನ ಮುಖ್ಯಸ್ಥರ ನೇಮಕ; ಅಂತಿಮ ಪಟ್ಟಿಗೆ ಮೋದಿ ನೇತೃತ್ವದ ಸಮಿತಿಯಿಂದ ಮೂವರ ಹೆಸರು
ಹೈಲೈಟ್ಸ್:
- ಸಿಬಿಐಗೆ ಮುಂದಿನ ಮುಖ್ಯಸ್ಥರ ನೇಮಕ ಸಂಬಂಧ
- ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯಿಂದ ಸಭೆ
- ಆಯ್ಕೆ ಸಮಿತಿಯಿಂದ ಮೂವರ ಹೆಸರು ಶಾರ್ಟ್‌ಲಿಸ್ಟ್
ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಸಿಬಿಐಗೆ ಮುಂದಿನ ಮುಖ್ಯಸ್ಥರ ನೇಮಕ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಸೋಮವಾರ ಸಭೆ ನಡೆಸಿ ಮೂವರು ಐಪಿಎಸ್ ಅಧಿಕಾರಿಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ.
ಮಹಾರಾಷ್ಟ್ರದ ಡಿಜಿಪಿ ಸುಭೋದ್ ಕುಮಾರ್, ಸಶಸ್ತ್ರ ಸೀಮಾ ದಳದ ಡಿಜಿ ಕೆ.ಆರ್.ಚಂದ್ರ ಹಾಗೂ ಗೃಹ ಸಚಿವಾಲಯ ವಿಶೇಷ ಕಾರ‍್ಯದರ್ಶಿ (ಆಂತರಿಕ ಭದ್ರತೆ) ವಿಎಸ್‌ಕೆ ಕೌಮುದಿ ಅವರ ಹೆಸರನ್ನು ಅಂತಿಮಪಟ್ಟಿಗೆ ಪರಿಗಣಿಸಲಾಗಿದೆ. ಸಭೆಯಲ್ಲಿ ಸಿಜೆಐ ಎನ್.ವಿ. ರಮಣ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರು ಪಾಲ್ಗೊಂಡಿದ್ದರು.
ಈ ಆಯ್ಕೆ ಪ್ರಕ್ರಿಯೆಗೆ ಅಧೀರ್ ರಂಜನ್ ಚೌಧರಿ ಆಕ್ಷೇಪ ಸಲ್ಲಿಸಿದರು. ‘ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯಕ್ಕೆ ಮೇ 11ರಂದು ನಾನು 109 ಅಧಿಕಾರಿಗಳ ಹೆಸರನ್ನು ನೀಡಿದ್ದೆ. ಸೋಮವಾರ ಮಧ್ಯಾಹ್ನ 1 ಗಂಟೆಗೆ 10 ಹೆಸರನ್ನು, ಸಂಜೆ 4 ಗಂಟೆಗೆ 6 ಹೆಸರನ್ನು ಅಂತಿಮಗೊಳಿಸಲಾಗಿದೆ. ಇದೊಂದು ಸಹಜ ಪ್ರಕ್ರಿಯೆ ಎಂಬಂತೆ ಸಚಿವಾಲಯ ವರ್ತಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.