Cyclone Yaas: ಯಾಸ್ ಚಂಡಮಾರುತದ ಅಬ್ಬರ; ಪಶ್ಚಿಮ ಬಂಗಾಳ, ಒರಿಸ್ಸಾದಲ್ಲಿ ಭಾರೀ ಮಳೆ; 2 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ
ಕೊಲ್ಕತ್ತಾ (ಮೇ 25): ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ತೌಕ್ತೆ (Cyclone Tauktae) ಚಂಡಮಾರುತ ಅಪ್ಪಳಿಸಿ ಅವಾಂತರ ಸೃಷ್ಟಿಸಿತ್ತು. ಇದೀಗ ಪಶ್ಚಿಮ ಬಂಗಾಳ ಮಗ್ತು ಒರಿಸ್ಸಾದಲ್ಲಿ ಯಾಸ್ ಚಂಡಮಾರುತ (Yaas Cyclone) ಅಪ್ಪಳಿಸಲು ಸಜ್ಜಾಗಿದೆ. ನಿನ್ನೆ ಸಂಜೆ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಭಾರೀ ಬಿರುಗಾಳಿ ಎದ್ದಿದ್ದು, ಮೇ 26ಕ್ಕೆ ಯಾಸ್ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಎರಡೂ ರಾಜ್ಯಗಳಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಕರಾವಳಿ ತೀರದ ಮತ್ತು ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ 149 ಎನ್ಡಿಆರ್ಎಫ್ ತಂಡಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ.
ಈಗಾಗಲೇ 100ಕ್ಕೂ ಹೆಚ್ಚು NDRF ಸಿಬ್ಬಂದಿಯನ್ನು ಪಶ್ಚಿಮ ಬಂಗಾಳ ಮತ್ತು ಒರಿಸ್ಸಾಗೆ Airlift ಮಾಡಲಾಗಿದ್ದು, 26 ಹೆಲಿಕಾಪ್ಟರ್ಗಳನ್ನು ಯಾವುದೇ ಕ್ಷಣದಲ್ಲಿ ಜನರ ರಕ್ಷಣೆಗೆ ಆಗಮಿಸಲು ಸಿದ್ಧಪಡಿಸಿಡಲಾಗಿದೆ. ಮೇ 26ರಂದು ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಪ್ಪಳಿಸಲಿರುವ ಈ ಚಂಡಮಾರುತ ಗಂಟೆಗೆ 155 ಕಿ.ಮೀ.ಯಿಂದ 165 ಕಿ.ಮೀ. ವೇಗದಲ್ಲಿ ಚಲಿಸಲಿದೆ.
ನಾಳೆ ಯಾಸ್ ಚಂಡಮಾರುತ ಏಳುವುದಿರಂದ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಹಾಗೂ ಭೂಕುಸಿತವಾಗುವ ಸಾಧ್ಯತೆಯಿದೆ. ಯಾಸ್ ಚಂಡಮಾರುತದಿಂದ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಪಶ್ಚಿಮ ಬಂಗಾಳದಲ್ಲಿ 10 ಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ. ಎರಡೂ ರಾಜ್ಯಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ, ಅಗತ್ಯ ಸೌಲಭ್ಯವನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ.
ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತ (Cyclone Yaas) ಇಂದಿನಿಂದ ಆರ್ಭಟಿಸಲಿದ್ದು, ಮೇ 26ರವರೆಗೆ ಭಾರೀ ಮಳೆಯಾಗಲಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಗೋವಾ ಸೇರಿದಂತೆ ಕರಾವಳಿ ತೀರದ ರಾಜ್ಯಗಳಲ್ಲಿ ಯಾಸ್ ಚಂಡಮಾರುತದ ಆರ್ಭಟವಿರಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮೇ 26ರಂದು ಯಾಸ್ ಚಂಡಮಾರುತ ಪಶ್ಚಿಮ ಕರಾವಳಿಯ ರಾಜ್ಯಗಳಿಗೆ ಅಪ್ಪಳಿಸಲಿದೆ. ಹೀಗಾಗಿ, ಕಡಲ ತೀರದ ಪ್ರದೇಶಗಳಲ್ಲಿ ಮೇ 26ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಪಶ್ಚಿಮ ಬಂಗಾಳ ಮತ್ತು ಒರಿಸ್ಸಾದಲ್ಲಿ ಭಾರೀ ಮಳೆಯಿಂದ ಭೂಕುಸಿತವಾಗುತ್ತಿದ್ದು, 46 ಎನ್ಡಿಆರ್ಎಫ್ ತಂಡಗಳನ್ನು ರಚಿಸಲಾಗಿದೆ. ಬಂಗಾಳದ ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. ತೌಕ್ತೆ ಚಂಡಮಾರುತಕ್ಕಿಂತ ಯಾಸ್ ಚಂಡಮಾರುತದ ಅಬ್ಬರ ಹೆಚ್ಚಾಗಿರಲಿದ್ದು, ಕೇಂದ್ರ ಸರ್ಕಾರ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಯಾಸ್ ಚಂಡಮಾರುತದ ಅಬ್ಬರ ತೀವ್ರವಾಗಿರಲಿದೆ ಎಂಬ ಕಾರಣಕ್ಕೆ ಈಗಾಗಲೇ ಎನ್ಡಿಆರ್ಎಫ್, ಕೋಸ್ಟಲ್ ಗಾರ್ಡ್, ಐಎನ್ಎಸ್ ಚಿಲಿಕಾಗೆ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳ ಸರ್ಕಾರ ಸನ್ನದ್ಧರಾಗಿರಲು ಸೂಚಿಸಿದೆ. ಮೇ 26ರಂದು ಯಾಸ್ ಚಂಡಮಾರುತ ಅಪ್ಪಳಿಸುವುದರಿಂದ ಈಗಾಗಲೇ ಭಾರೀ ಮಳೆ ಶುರುವಾಗಿದ್ದು, ಪಶ್ಚಿಮ ಬಂಗಾಳ, ಗುಜರಾತ್, ಒರಿಸ್ಸಾ, ಗೋವಾದ ಎಲ್ಲ ಕರಾವಳಿ ತೀರದ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ಒರಿಸ್ಸಾದಲ್ಲಿ 28 ಎನ್ಡಿಆರ್ಎಫ್ ತಂಡಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ 32 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಆಂಧ್ರಪ್ರದೇಶ, ತಮಿಳುನಾಡು, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲೂ ಕೆಲವು ಎನ್ಡಿಆರ್ಎಫ್ ತಂಡಗಳನ್ನು ಕಳುಹಿಸಲಾಗಿದೆ.
ಜೂನ್ 1ರಂದು ಕೇರಳಕ್ಕೆ ಮುಂಗಾರು (Kerala Monsoon) ಪ್ರವೇಶವಾಗಲಿದೆ. ಅಷ್ಟರೊಳಗೆ ಯಾಸ್ ಎಂಬ ಮತ್ತೊಂದು ಚಂಡಮಾರುತ ಅಪ್ಪಳಿಸಲಿದ್ದು, ಇನ್ನೊಂದು ವಾರ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಭಾಗಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತವಾಗಿ ಬದಲಾಗಿದ್ದು, ಗುಜರಾತ್, ಮಹಾರಾಷ್ಟ್ರದ, ಪಶ್ಚಿಮ ಬಂಗಾಳ, ಒರಿಸ್ಸಾ ಸೇರಿ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರ ಹಾಗೂ ನೆರೆಯ ಉತ್ತರ ಅಂಡಮಾನ್ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ಅಧಿಕೃತ ಎಚ್ಚರಿಕೆ ಹೊರಡಿಸಿದೆ. ಇದರ ಪ್ರಭಾವದಿಂದ ಗಾಳಿಯ ವೇಗ ಹೆಚ್ಚಾಗಿ ಮೇ 26ರವರೆಗೆ ಅಂಡಮಾನ್ ಸಮುದ್ರದಲ್ಲಿ ಪ್ರತಿಕೂಲ ಹವಾಮಾನ ಉಂಟಾಗಲಿದೆ.