Petrol Price Today: ಒಂದೆಡೆ ಕೊರೋನಾ ಕಷ್ಟ; ಇನ್ನೊಂದೆಡೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಬಿಸಿ
ನವದೆಹಲಿ, ಮೇ 25: ದೇಶದ ಜನತೆ ಒಂದು ಕಡೆ ಕೊರೋನಾ ಕಷ್ಟ ಎದುರಿಸಬೇಕಾದರೆ ಇನ್ನೊಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಿಸಿ ಅನುಭವಿಸಬೇಕಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾ ಎರಡನೇ ಅಲೆ ತಾರಕ್ಕೇರಿರುವ ಸಂದರ್ಭದಲ್ಲೂ ಮೇ 4ರಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದ್ದು ಮೇ 25ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 17 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 27 ಪೈಸೆ ಏರಿಕೆ ಮಾಡಿದೆ.
ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಹೀಗಿದೆ…
ಬೆಂಗಳೂರು- ಪೆಟ್ರೋಲ್ 96.55 ರೂ., ಡೀಸೆಲ್ 89.39 ರೂ.
ಭೂಪಾಲ್- ಪೆಟ್ರೋಲ್ 101.52 ರೂ., ಡೀಸೆಲ್ 92.77 ರೂ.
ಜೈಪುರ – ಪೆಟ್ರೋಲ್ 99.92 ರೂ., ಡೀಸೆಲ್ 93.05 ರೂ.
ಮುಂಬೈ- ಪೆಟ್ರೋಲ್ 99.71 ರೂ., ಡೀಸೆಲ್ 91.57 ರೂ.
ಪಾಟ್ನಾ- ಪೆಟ್ರೋಲ್ 95.62 ರೂ., ಡೀಸೆಲ್ 89.58 ರೂ.ಚೆನ್ನೈ- ಪೆಟ್ರೋಲ್ 95.06 ರೂ., ಡೀಸೆಲ್ 89.11 ರೂ.
ಕೋಲ್ಕತ್ತಾ- ಪೆಟ್ರೋಲ್ 93.49 ರೂ., ಡೀಸೆಲ್ 87.16 ರೂ.
ದೆಹಲಿ- ಪೆಟ್ರೋಲ್ 93.44 ರೂ., ಡೀಸೆಲ್ 84.32 ರೂ.
ಲಕ್ನೋ- ಪೆಟ್ರೋಲ್ 91.03 ರೂ., ಡೀಸೆಲ್ 84.71 ರೂ.
ರಾಂಚಿ- ಪೆಟ್ರೋಲ್ 90.23 ರೂ., ಡೀಸೆಲ್ 89.05 ರೂ.
ಕೊರೋನಾ ಎರಡನೇ ಅಲೆ ಆರಂಭಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಇತ್ತು. ಮಧ್ಯ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡುವುದನ್ನು ನಿಲ್ಲಿಸಿತ್ತು. ಮೇ 2ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಯ್ತು. ಮೇ 4ರಿಂದಲೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುವ ಹಳೆ ಚಾಳಿಯನ್ನು ಕೇಂದ್ರ ಸರ್ಕಾರ ಪುನರಾರಂಭಿಸಿತು.
ಮೇ ತಿಂಗಳಲ್ಲಿ ಈವರೆಗೆ ಒಟ್ಟು 13 ಭಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ. ಪ್ರತಿ ಪೆಟ್ರೋಲ್ ಮೇಲೆ 3.04 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 3.59 ರೂಪಾಯಿ ಹೆಚ್ಚಳ ಮಾಡಲಾಗಿದೆ. ಮೇ 5ರಿಂದ ನಿರಂತರವಾಗಿ ಮೂರು ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿತ್ತು. ಇದಾದ ಮೇಲೆ ಮೂರು ದಿನ ಮಾತ್ರ ವಿರಮಿಸಿದ್ದ ಕೇಂದ್ರ ಸರ್ಕಾರ ಬಳಿಕ ಮೇ 10ರಂದು, ಮೇ 11ರಂದು ಮತ್ತು ಮೇ 12ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿತು. ಇದಾದ ಮೇಲೆ ದಿನ ಬಿಟ್ಟು ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಪದಾರ್ಥಗಳ ಬೆಲೆ ಗಣನೀಯವಾಗಿ ಏರಿಕೆ ಆಗಿಲ್ಲ. ಆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಿಯ ಗ್ರಾಹಕರ ಮೇಲೆ ಅಂದರೆ ಬಡ ಭಾರತೀಯರ ಮೇಲೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಸುತ್ತಿದೆ. ಕೊರೋನಾ ಕಷ್ಟ ಕಾಲದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಸಬೇಡಿ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾದರೆ ಇತರೆ ವಸ್ತುಗಳ ಬೆಲೆ ಏರಿಕೆ ಕೂಡ ಆಗುತ್ತೆ ಎಂದು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಸಾರ್ವಜನಿಕಕರಿಂದ ಒತ್ತಾಯ ಕೇಳಿಬರುತ್ತಿದೆ. ಆದರೂ ಕೊರೋನಾ ಹೊಡೆತದ ನಡುವೆಯೂ ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿ ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.