ಪಿಎನ್‌ಬಿ ವಂಚನೆ ಹಗರಣ: ಆಂಟಿಗುವಾದಿಂದಲೂ ಮೆಹುಲ್ ಚೋಕ್ಸಿ ನಾಪತ್ತೆ!

ಹೈಲೈಟ್ಸ್‌:

  • 2018ರಲ್ಲಿ ಆಂಟಿಗುವಾಕ್ಕೆ ಪಲಾಯನ ಮಾಡಿದ್ದ ಚೋಕ್ಸಿ
  • ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಕಾನೂನು ಪ್ರಯತ್ನ
  • ಸೋಮವಾರ ಸಂಜೆ ಊಟಕ್ಕೆ ತೆರಳಿದ್ದ ಚೋಕ್ಸಿ ಕಣ್ಮರೆ
  • ಮೆಹುಲ್ ಚೋಕ್ಸಿ ಪತ್ತೆಗೆ ಆಂಟಿಗುವಾ ಪೊಲೀಸರ ಹುಡುಕಾಟ

ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 14,000 ಕೋಟಿ ವಂಚಿಸಿದ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಕೆರಿಬಿಯನ್ ದ್ವೀಪ ರಾಷ್ಟ್ರ ಆಂಟಿಗುವಾ ಮತ್ತು ಬರ್ಮುಡಾದಿಂದ ನಾಪತ್ತೆಯಾಗಿದ್ದಾನೆ.

ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ತನ್ನನ್ನು ಬಂಧಿಸುವ ಸಾಧ್ಯತೆ ಅರಿತಿದ್ದ ಮೆಹುಲ್ ಚೋಕ್ಸಿ, 2018ರಲ್ಲಿ ಆಂಟಿಗುವಾಕ್ಕೆ ಪರಾರಿಯಾಗಿದ್ದ. ಆತನ ಪತ್ತೆಗೆ ಸಿಬಿಐ ಹಾಗೂ ಇ.ಡಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದವು. ಕೊನೆಗೂ ಆತನ ಸುಳಿವು ಪತ್ತೆಯಾಗಿ, ಭಾರತಕ್ಕೆ ಮರಳಿ ಕರೆತರುವ ಪ್ರಯತ್ನಗಳು ನಡೆದಿದ್ದವು. ಆದರೆ ಚೋಕ್ಸಿ ಅಲ್ಲಿಂದ ಕಣ್ಮರೆಯಾಗಿದ್ದಾನೆ. ಚೋಕ್ಸಿ ಕುಟುಂಬದವರು ಆತನಿಗಾಗಿ ಹುಡುಕಾಡುತ್ತಿದ್ದಾರೆ ಎಂದು ಚೋಕ್ಸಿ ಪರ ವಕೀಲ ವಿಜಯ್ ಅಗರವಾಲ್ ತಿಳಿಸಿದ್ದಾರೆ.

ಮೆಹುಲ್ ಚೋಕ್ಸಿಗಾಗಿ ಆಂಟಿಗುವಾ ಪೊಲೀಸರು ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿ ಎಲ್ಲಿದ್ದಾರೆ ಎನ್ನುವುದನ್ನು ಕಂಡುಕೊಳ್ಳಲು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಲ್ಲಿನ ಪೊಲೀಸ್ ಕಮಿಷನರ್ ಅಟ್ಲೀ ರಾಡ್ನಿ ತಿಳಿಸಿದ್ದಾರೆ.

ಚೋಕ್ಸಿಯ ನಾಪತ್ತೆಗೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳಿಂದ ಗೊತ್ತಾಗಿದೆಯೇ ವಿನಾ ತಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಸಿಬಿಐ ತಿಳಿಸಿದೆ. ಇದನ್ನು ಖಚಿತಪಡಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಆಂಟಿಗುವಾದಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಸಿಬಿಐ ಪತ್ರ ಬರೆದಿದೆ.

ಆಂಟಿಗುವಾದ ದಕ್ಷಿಣ ಭಾಗದಲ್ಲಿ ನೆಲೆಸಿದ್ದ ಚೋಕ್ಸಿ, ಸೋಮವಾರ ಸಂಜೆ ಊಟಕ್ಕೆಂದು ಮನೆಯಿಂದ ಹೊರಗೆ ತೆರಳಿದ್ದ. ಆತನ ವಾಹನ ಕೂಡ ಸಿಕ್ಕಿದೆ. ಆದರೆ ಚೋಕ್ಸಿ ಪತ್ತೆಯಾಗಿಲ್ಲ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *