ಉಡುಪಿ : ಜಿಲ್ಲೆಯಾದ್ಯಂತ ಮದುವೆ ಹಾಗೂ ಇನ್ನಿತ್ತರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡವರಲ್ಲಿ ಕೊರೋನಾ ಸೊಂಕು ಹೆಚ್ಚಾಗಿ ಕಾಣುತ್ತಿದೆ. ಹೀಗಾಗಿ ಆದಷ್ಟು ಮದುವೆಯಂತಹಾ ಸಾರ್ವಜನಿಕರು ಒಟ್ಟಾಗುವ ಕಾರ್ಯಕ್ರಮಗಳಿಂದ ದೂರವಿರಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಕೆಲವು ದಿನಗಳಿಂದ ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆ ಮತ್ತಿತ್ತರ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಕೊರೋನಾ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಸಾಧ್ಯವಾದರೆ ಆದಷ್ಟು ಮದುವೆ ಕಾರ್ಯಕ್ರಮಗಳನ್ನು ಮುಂದೂಡುವುದು ಒಳ್ಳೆಯದು ಎಂದು ಡಿ.ಸಿ ಜಗದೀಶ್ ಹೇಳಿದ್ದಾರೆ. ಮದುವೆ ಪಾರ್ಟಿ, ಮದುವೆ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.
ಕೊರೋನಾ ಸಂದರ್ಭದಲ್ಲಿಯೂ ಹಲವರು ಹತ್ತಿರದ ಗ್ರೌಂಡ್ಗಳಲ್ಲಿ ಕ್ರಿಕೆಟ್ ಆಡುತ್ತಿರುವುದು ಕಂಡುಬರುತ್ತಿದೆ. ಹೀಗೆ ಗುಂಪುಗೂಡಿ ಆಟವಾಡಬೇಡಿ, ನಾನು ಈಗಾಗಲೇ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಈ ರೀತಿ ಗುಂಪುಗೂಡಿ ಕ್ರಿಕೇಟ್ ಆಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ಎಸ್.ಪಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಕ್ರಿಕೆಟ್ ಆಡುವ ಮೂಲಕ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಡಿ.ಸಿ ಜಗದೀಶ್ ಮನವಿ ಮಾಡಿದ್ದಾರೆ.