ಭಾನುವಾರ ಲಾಕ್ಡೌನ್ ಇರಲ್ಲ
ಬೆಂಗಳೂರು: ರಾಜ್ಯದಲ್ಲಿ ಇನ್ನುಮುಂದೆ ಭಾನುವಾರ ಸಂಪೂರ್ಣ ಲಾಕ್ಡೌನ್ ಇರಲ್ಲ. ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ವಿಧಿಸಲಾಗುತ್ತಿದ್ದ ಕರ್ಫ್ಯೂ ರದ್ದುಪಡಿಸಲಾಗಿದ್ದು, ಸರ್ಕಾರಿ ನೌಕರರಿಗೆ ಹೆಚ್ಚುವರಿಯಾಗಿ ನೀಡಿದ್ದ ಶನಿವಾರದ ರಜೆಗಳನ್ನು ಕೈಬಿಡಲಾಗಿದೆ. ನಿರ್ಬಂಧಿತ ವಲಯ (ಕಂಟೇನ್ಮೆಂಟ್)ಗಳಲ್ಲಿ ಲಾಕ್ಡೌನ್ ಮುಂದುವರಿಯಲಿದೆ. ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆಯೇ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಆ.1ರಿಂದ 31ರವರೆಗೆ ಅನ್ವಯವಾಗಲಿದೆ. 3ನೇ ಹಂತದ ನಿರ್ಬಂಧ ಸಡಿಲಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ಯಥಾವತ್ ಪಾಲಿಸಿದೆ.
ಆಗಸ್ಟ್ ಅಂತ್ಯದವರೆಗೆ ಶಾಲೆ-ಕಾಲೇಜುಗಳನ್ನು ತೆರೆಯಲ್ಲ. ಆದರೆ ದೂರ ಅಂತರ ಹಾಗೂ ಆನ್ ಲೈನ್ ಶಿಕ್ಷಣಕ್ಕೆ ಪ್ರೋತ್ಸಾಹಿಸಲಾಗಿದೆ. ಹೆಚ್ಚು ಜನ ಗುಂಪು ಸೇರುವಂತಹ ಚಟುವಟಿಕೆಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ. ಇದರಿಂದಾಗಿ ಮೆಟ್ರೋ ರೈಲು, ಈಜುಗೊಳ, ಸಿನಿಮಾ ಟಾಕೀಸ್, ಸಭಾಂಗಣ ಮತ್ತು ಬಾರ್ ಗಳನ್ನು ತೆರೆಯಲು ಅನುಮತಿ ನೀಡಲಾಗಿಲ್ಲ. ಹಾಗೆಯೇ ಧಾರ್ವಿುಕ, ಸಾಂಸ್ಕೃತಿಕ, ರಾಜಕೀಯ ಸಭೆ- ಸಮಾರಂಭಗಳಿಗೆ ನಿರ್ಬಂಧವಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದು, ಕಂಟೇನ್ಮೆಂಟ್ ವಲಯಗಳಲ್ಲಿ ಆ.31ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಜತೆಗೆ ಕಟ್ಟುನಿಟ್ಟಿನ ಕ್ರಮಕ್ಕೂ ಸೂಚಿಸಲಾಗಿದೆ. ನಂತರ ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ವನಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಲಾಗಿದೆ.
ಸೋಂಕು ವೇಗವಾಗಿ ಹರಡುವುದನ್ನು ತಡೆಯಲು ಜು.5ರಿಂದ ಆ.2ರ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲು ಸರ್ಕಾರ ನಿರ್ಧರಿಸಿತ್ತು. ಇನ್ನೂ ಒಂದು ಭಾನುವಾರ (ಆ.2) ಉಳಿದಿರುವಂತೆಯೇ ಮೊಟುಕುಗೊಳಿಸಲಾಗಿದೆ. ಹೊಸ ಮಾರ್ಗಸೂಚಿ ಪ್ರಕಾರ, ಸರ್ಕಾರಿ ನೌಕರರಿಗೆ ನೀಡಲಾಗಿದ್ದ ವಾರದಲ್ಲಿ 5 ದಿನಗಳ ಕೆಲಸ ರದ್ದಾಗಿದ್ದು, ಆ.1ರಿಂದಲೇ ಜಾರಿಗೆ ಬರುವ ಕಾರಣ ಮುಂದಿನ ಶನಿವಾರ ಕರ್ತವ್ಯಕ್ಕೆ ಹಾಜರಾಗಬೇಕು. ಮನೆಯಿಂದಲೇ ಕೆಲಸ ಮುಂದುವರಿಸುವ ಬಗ್ಗೆ ಆಯಾ ಇಲಾಖೆಗಳು ನಿರ್ಧಾರ ಕೈಗೊಳ್ಳುತ್ತವೆಂದು ಮೂಲಗಳು ತಿಳಿಸಿವೆ.
ಜಿಮ್ ಗೆ ಅಸ್ತು: ಕಂಟೇನ್ಮೆಂಟ್ ವಲಯ ಹೊರತುಪಡಿಸಿ ಉಳಿದೆಡೆ ಆ.5ರಿಂದ ಜಿಮ್ ಮತ್ತು ಯೋಗ ಕೇಂದ್ರಗಳನ್ನು ತೆರೆಯಲು ಸಮ್ಮತಿಸಿದ್ದು, ಕೇಂದ್ರದ ಆರೋಗ್ಯ ಸಚಿವಾಲಯ ಪ್ರತ್ಯೇಕವಾಗಿ ಬಿಡುಗಡೆ ಮಾಡಲಿರುವ ಮಾರ್ಗಸೂಚಿಯನ್ನು ಅನುಸರಿಸಬೇಕಾಗುತ್ತದೆ.