Narasimha Jayanti: ಇಂದು ನರಸಿಂಹ ಜಯಂತಿ…ಏನಿದರ ವೈಶಿಷ್ಟ್ಯ ? ಪೂಜಾವಿಧಿಗಳೇನು ? ಯಾರು ಆಚರಿಸಬಹುದು?
Lakshmi Narasimha Jayanthi: ಇಂದು, ಮೇ 25ರ ಮಂಗಳವಾರ ನರಸಿಂಹ ಜಯಂತಿ. ಮಹಾವಿಷ್ಣುವಿನ 10 ಅವತಾರಗಳಲ್ಲಿ (ದಶಾವತಾರ) ನರಸಿಂಹನ ಅವತಾವರವೂ ಒಂದು. ಶುಕ್ಲ ಪಕ್ಷದ ವೈಶಾಖ ಚತುರ್ದಶಿಯ ದಿನ ನೃಸಿಂಹ ಜಯಂತಿಯನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಅರ್ಧ ಮಾನವ (ನರ) ಮತ್ತು ಅರ್ಧ ಸಿಂಹ (ಸಿಂಹ)ದ ಈ ಅವತಾರ ದಶಾವತಾರದಲ್ಲಿ ನಾಲ್ಕನೆಯದ್ದಾಗಿದೆ. ತನ್ನ ಪರಮ ಭಕ್ತ ಪ್ರಹ್ಲಾದನ ಕರೆಗೆ ಓಗೊಟ್ಟು, ದುಷ್ಟ ಶಿಕ್ಷೆ ಮತ್ತು ಶಿಷ್ಠ ರಕ್ಷೆಗಾಗಿ ಮಹಾವಿಷ್ಣು ನರಸಿಂಹನ ಅವತಾರವೆತ್ತಿದ್ದಾನೆ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಭಾಗವತ ಪುರಾಣದಲ್ಲಿ ನರಸಿಂಹ ಅವತಾರದ ಉಲ್ಲೇಖವಿದ್ದು ಈ ಅವತಾರವನ್ನು ವಿಷ್ಣು ಏಕೆ ತಾಳಿದ, ಇದರ ಹಿನ್ನೆಲೆ ಏನು, ನರಸಿಂಹ ಸ್ತುತಿ ಮಾಡುವುದರಿಂದ ಏನೇನು ಪ್ರಯೋಜನ ಎನ್ನುವುದೆಲ್ಲದರ ಬಗ್ಗೆ ಸುದೀರ್ಘವಾದ ಟಿಪ್ಪಣಿ ಇದೆ.
ಮನುಷ್ಯನ ದೇಹ, ಮನುಷ್ಯನ ಕೈಗೆ ಸಿಂಹದ ಪಂಜು, ನೀಳ ಉಗುರು, ಸಿಂಹದ ತಲೆ, ಕೇಸರ, ಕೋರೆ-ದಾಡೆಗಳು…ಒಂದು ಕ್ಷಣ ನೋಡಿದವರ ಎದೆ ಝಲ್ಲೆನಿಸುವ ಈ ರೂಪ ನರಸಿಂಹನದ್ದು. ಧರ್ಮ ಸಂಸ್ಥಾಪನೆಗಾಗಿ ಪ್ರಹ್ಲಾದನ ಪ್ರಾರ್ಥನೆಗೆ ಒಲಿದು ವಿಷ್ಣು ಈ ಅವತಾರವನ್ನು ಎತ್ತಿದ್ದಾನೆ. ಪ್ರಹ್ಲಾದನ ತಂದೆ ಹಿರಣ್ಯಕಶಿಪು ದೀರ್ಘ ತಪ್ಪಸ್ಸನ್ನು ಮಾಡಿ ಸೃಷ್ಟಿಕರ್ತ ಬ್ರಹ್ಮನನ್ನು ಒಲಿಸಿಕೊಂಡಿರುತ್ತಾರೆ. ತನಗೆ ಯಾವ ಮನುಷ್ಯನಿಂದಾಗಲಿ, ಪ್ರಾಣಿಯಿಂದಾಗಲಿ, ಆಯುಧದಿಂದಾಗಲಿ, ಆಕಾಶ – ಭೂಮಿ – ಪಾತಾಳದಲ್ಲಾಗಲಿ, ಹಗಲು ಅಥವಾ ಇರುಳಿನಲ್ಲಾಗಲಿ ಸಾವು ಬರಬಾರದು ಎನ್ನುವ ವಿಚಿತ್ರ ವರ ಪಡೆದಿರುತ್ತಾನೆ. ಅವನ ಆರ್ಭಟ ಅದೆಷ್ಟೇ ಹೆಚ್ಚಾಗಿದ್ದರೂ ದೇವಾನುದೇವತೆಗಳಾದಿಯಾಗಿ ಯಾರೂ ಏನೂ ಮಾಡಲು ಸಾಧ್ಯವಾಗಿರಲಿಲ್ಲ.
ಅದರಲ್ಲೂ ವಿಷ್ಣುವನ್ನು ದೇವರೆಂದು ಪೂಜಿಸುತ್ತಿದ್ದ ಭಕ್ತರ ಮೇಲೆ ಆತನ ಪ್ರಹಾರಗಳು ದಿನೇ ದಿನೇ ಹೆಚ್ಚಾದವು. ಆಗ ಬೇರೆ ದಾರಿ ಕಾಣದೆ ಎಲ್ಲರೂ ವಿಷ್ಣುವಿನ ಮೊರೆ ಹೋದರು. ಹಿರಣ್ಯಕಶಿಪುವಿನ ಸಂಹಾರಕ್ಕಾಗೇ ಮಹಾವಿಷ್ಣು ನರಸಿಂಹನ ಅವತಾರವೆತ್ತಿ ಭೂಮಿಗೆ ಬಂದಿದ್ದನು ಎನ್ನುತ್ತದೆ ಪುರಾಣ.
ಬ್ರಹ್ಮ ನೀಡಿದ ವರಕ್ಕೆ ತಕ್ಕಂತೆ ಉತ್ತರವಾಗಿ ಮುಸ್ಸಂಜೆಯ ವೇಳೆಗೆ ಕಂಬವನ್ನು ಸೀಳಿಕೊಂಡು ಅರ್ಧ ಮನುಷ್ಯ- ಅರ್ಧ ಪ್ರಾಣಿಯ ಆಕಾರದಲ್ಲಿ ಬಂದ ನರಸಿಂಹ ಹೊಸ್ತಿಲ ಮೇಲೆ ಕುಳಿತು ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಇರಿಸಿಕೊಂಡು ತನ್ನ ಚೂಪಾದ ಪಂಜುಗಳಿಂದ ಬಗೆದು ಕೊಲ್ಲುತ್ತಾನೆ. ನಂತರ ಆತನ ಕರುಳನ್ನು ತನ್ನ ಕೊರಳಿಗೆ ಮಾಲೆಯಂತೆ ಹಾಕಿಕೊಂಡು ಅಧರ್ಮಕ್ಕೆ ಅಂತ್ಯಕಾಣಿಸುತ್ತಾನೆ.
ಹೀಗಾಗಿಯೇ ನರಸಿಂಹ ಜಯಂತಿಯನ್ನು ಮುಸ್ಸಂಜೆ ವೇಳೆಯಲ್ಲಿ ಆಚರಿಸಲಾಗುತ್ತದೆ.
ಪೂಜಾ ಸಮಯ:2021ರ ನರಸಿಂಹ ಜಯಂತಿ ಆಚರಣೆಯು ಇಂದು ಸಂಜೆ 4.26 ರಿಂದ 7.11 ರ ಸಮಯದಲ್ಲಿ ಆಚರಿಸಲಾಗುತ್ತದೆ. ಚತುದರ್ಶಿಯು ಮಧ್ಯಾಹ್ನ 12.22 ಕ್ಕೆ ಆರಂಭವಾಗಿ ರಾತ್ರಿ 8.29ಕ್ಕೆ ಮುಗಿಯಲಿದೆ.
ಆಚರಣೆ ವಿಧಾನ:
ಸೂರ್ಯೋದಯದಿಂದ ಮುಂದಿನ ಸೂರ್ಯಾಸ್ತದವರಗೆ ಉಪವಾಸವಿರಬೇಕು. ಧಾನ್ಯಗಳನ್ನು ತಿನ್ನುವಂತಿಲ್ಲ. ಮಧ್ಯಾಹ್ನದ ವೇಳೆಗೆ ಸಂಕಲ್ಪ ಮಾಡಿ, ಸೂರ್ಯಾಸ್ತದ ಒಳಗೆ ಪೂಜೆ ಮಾಡಬೇಕು. ನರಸಿಂಹ ಕವಚ ಮಂತ್ರವನ್ನು ಜಪಿಸಿ ಎಲ್ಲಾ ಸಂಕಷ್ಟಗಳನ್ನು ಪರಿಹರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಬೇಕು.
ಸಾಮಾನ್ಯವಾಗಿ ವೃತ ಆಚರಿಸುವವರು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ, ಹೊಸಾ ಉಡುಪು ಧರಿಸಿ, ನರಸಿಂಹ ದೇವರ ಮೂರ್ತಿಯೆದುರು ಕುಳಿತು ಜಪ ಮಾಡಬೇಕು.
ಕಡಲೆಬೇಳೆ, ಬೆಲ್ಲ, ಹೂವು, ಸಿಹಿ, ಗಂಧ ಲೇಪನ, ತೆಂಗಿನಕಾಯಿ ಮುಂತಾದವನ್ನು ದೇವರ ಎದುರಿನಲ್ಲಿಟ್ಟು ಪೂಜೆ ಮಾಡಬೇಕು. ಅಲ್ಲದೆ ಜನರು ಬಟ್ಟೆ, ಲೋಹ, ಆಹಾರ, ಎಳ್ಳು ಮುಂತಾದವನ್ನು ದಾನ ನೀಡುತ್ತಾರೆ.