ಕಲಬುರಗಿ: ಸಾಲೇವಾಡಿ ಬಾಲಕಿಯರ ಮೇಲೆ ಅತ್ಯಾಚಾರ ಕೊಲೆ : ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಆಗ್ರಹ
ಕಲಬುರಗಿ:ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಸಾಲೇವಾಡಿ ಗ್ರಾಮದ ದಲಿತ, ಮಾದಿಗ ಸಮುದಾಯದ ಪ್ರೀತಿ ಹಾಗೂ ರೇಣುಕಾ ಎಂಬ ಅಪ್ರಾಪ್ರ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡು ಜಾತಿನಿಂದನೆ ಪ್ರಕರಣದಡಿ ಕಠಿಣ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಸೋಮವಾರ ಕರ್ನಾಟಕ ದಲಿತ ಜನಜಾಗೃತಿ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕೋವಿಡ್ ನಿಯಮದಡಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮೃತರ ಸಂತ್ರಸ್ತ ಕುಟುಂಬಗಳೆರಡಕ್ಕೆ ತಲಾ 25 ಲಕ್ಷ ರೂ.ಗಳ ಪರಿಹಾರ ಧನ ಒದಗಿಸುವಂತೆ, ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡುವಂತೆ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತವು ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂಘಟನೆಯ ರಾಜ್ಯ ಸಂಚಾಲಕ ರುಕ್ಕಪ್ಪಾ ಟಿ. ಕಾಂಬಳೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕದ ಅಧ್ಯಕ್ಷ ವಿಜಯಕುಮಾರ್ ಎಂ. ಸಾವಳಗಿ, ನಗರ ಅಧ್ಯಕ್ಷ ಚಂದ್ರಕಾಂತ್ ಕಪನೂರ್, ಉಪಾಧ್ಯಕ್ಷ ಮಹೇಶ್ ಎಂ. ಕಾಂಬಳೆ, ತಾಲ್ಲೂಕು ಅಧ್ಯಕ್ಷ ಧರ್ಮಣ್ಣಾ ಬಿ. ಪೂಜಾರಿ, ಸದಸ್ಯ ಮಾಣಿಕ್ ಎಸ್. ಕಾಂಬಳೆ ಮುಂತಾದವರು ಪಾಲ್ಗೊಂಡಿದ್ದರು.