ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲ: ರಾಷ್ಟ್ರಪತಿ ಆಡಳಿತ ಜಾರಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಕಲಬುರಗಿ :ಕೋವಿಡ್-19 ಎರಡನೇ ಅಲೆಯ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದ್ದು, ಕೂಡಲೇ ದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸೋಮವಾರ ಜಿಲ್ಲಾ ಜಾತ್ಯಾತೀತ ಜನತಾದಳದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಜನರ ಜೀವದ ಜೊತೆಗೆ ಚೆಲ್ಲಾಟವಾಡುವುದರೊಂದಿಗೆ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ 9 ಶಾಸಕರು ಹಾಗೂ ಓರ್ವ ಸಂಸದರು ಕೋವಿಡ್ ನಿರ್ವಹಣೆಗೆ ಹಾಗೂ ಜನರ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 50,100 ಲಸಿಕೆ ಕೊಡುವ ಮೂಲಕ ಹುಡುಕಾಟಿಕೆಯಾಡಲಾಗುತ್ತಿದೆ ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ. ಅದು ಕೇವಲ ಕಾಟಾಚಾರವಾಗಿದೆ. ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದು ದೇಶದಲ್ಲಿ ಸ್ವಾತಂತ್ರ್ಯನಂತರದಲ್ಲಿ ಆಗಿರುವ ದೊಡ್ಡ ಸಾವುಗಳನ್ನು ನೋಡಿದರೆ ಇದು ಕೊಲೆಗಡುಕ ಸರ್ಕಾರ. ಆಡಳಿತ ಯಂತ್ರ ಸಂಪೂರ್ಣ ತುಕ್ಕು ಹಿಡಿದಿದೆ.ಪ್ಯೇಕೇಜ್ನಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ, ಕೂಲಿಕಾರರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗಿಲ್ಲ. ಆಟೋ ಚಾಲಕರಿಗೆ, ಕಮ್ಮಾರರಿಗೆ, ಕುಂಬಾರರಿಗೆ, ಅಕ್ಕಸಾಲಿಗರಿಗೆ, ಕಟ್ಟಡ ಕಾರ್ಮಿಕರಿಗೆ, ಸವಿತಾ ಸಮಾಜದವರಿಗೆ ಪರಿಹಾರವು ಆನೆ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಅವರು ಕಿಡಿ ಕಾರಿದರು.
ನ್ಯಾಯಾಂಗ ಹಾಗೂ ಶಾಸಕಾಂಗದ ನಡುವೆ ಭಿನ್ನಾಭಿಪ್ರಾಯ ಬಂದಿರುವುದರಿಂದ ದೇಶದ ಪರಿಸ್ಥಿತಿ ಗಂಭೀರವಾಗಿದೆ. ಅದಕ್ಕಾಗಿ ದೇಶದ ಜನರು ನ್ಯಾಯಾಂಗದ ಪರವಾಗಿ ನಿಲ್ಲುವುದು ಅನಿವಾರ್ಯವಾಗಿದೆ. ನ್ಯಾಯಾಂಗವು ಶಾಸಕಾಂಗಕ್ಕೆ ಬುದ್ದಿವಾದ ಹೇಳಿದರೆ ಅದನ್ನು ತಪ್ಪಾಗಿ ತಿಳಿದುಕೊಂಡು ಶಾಸಕಾಂಗ ತಪ್ಪು ಹೆಜ್ಜೆಗಳನ್ನು ಇಡುತ್ತಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಆಡಳಿತ ನಡೆಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿರುವುದರಿಂದ ಕಿವಿ ಹಿಂಡುವ ಮೂಲಕ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮನೋಹರ್ ಪೋದ್ದಾರ್, ಬಸವರಾಜ್ ಬೀರಬಟ್ಟಿ, ವಿಠಲ್ ಜಾಧವ್, ದೇವಿಂದ್ರ ಹಸನಾಪೂರ್, ಸುನೀಲ್ ಬಿರಾದಾರ್ ಮುಂತಾದವರು ಪಾಲ್ಗೊಂಡಿದ್ದರು.