Coronavirus India Updates: 41 ದಿನಗಳ ಬಳಿಕ 2 ಲಕ್ಷಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳು ಪತ್ತೆ
ನವದೆಹಲಿ(ಮೇ 25): ಇಡೀ ದೇಶವನ್ನೇ ಕಾಡಿ ಕಂಗೆಡಿಸಿದ್ದ ಎರಡನೇ ಸುತ್ತಿನ ಕೊರೋನಾ ಅಲೆ ಕಡೆಗೂ ಕೊನೆಯಾಗುವ ಲಕ್ಷಣ ತೋರಿದೆ. ಕಳೆದ 41 ದಿನಗಳಲ್ಲಿ ಮೊದಲ ಬಾರಿಗೆ ದೇಶದ ಕೊರೋನಾ ಪೀಡಿತರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಆಗಿದೆ. ಅಷ್ಟೇಯಲ್ಲ, ತೀವ್ರ ಆತಂಕ ಮೂಡಿಸಿದ್ದ ಕೊರೋನಾದಿಂದ ಸಾಯುವವರ ಸಂಖ್ಯೆ ಕೂಡ ಕಡಿಮೆ ಆಗಿದೆ. ಸೋಮವಾರ 3,511 ಜನ ಕೊರೋನಾದಿಂದ ಸಾವನ್ನಪ್ಪಿದ್ದು ಇದು ಕಳೆದ 21 ದಿನಗಳಲ್ಲಿ ಕಂಡುಬಂದ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ.
ಒಂದು ಹಂತದಲ್ಲಿ ದೇಶದ ಕೊರೋನಾ ಪೀಡಿತರ ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚಾಗಿತ್ತು. ಏಪ್ರಿಲ್ 30ರಿಂದಲೇ ದಿನ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದಾಖಲೆಯಾಗಿತ್ತು. ಸಹಜವಾಗಿ ಆತಂಕವನ್ನೂ ಸೃಷ್ಟಿಸಿತ್ತು. ಮೇ ಕಡೆಯಲ್ಲಿ ಕೊರೋನಾ ಎರಡನೇ ಅಲೆ ಇಳಿಮುಖ ಆಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದೇ ರೀತಿ ಈಗ ದೇಶದಲ್ಲಿ ಕೊರೋನಾ ಎರಡನೇ ಅಲೆ ತಳಮುಖಿಯಾಗಿ ಸಾಗುತ್ತಿದೆ.
ಮೇ 6ರಂದು 4,14,188 ಪ್ರಕರಣಗಳು ಕಂಡುಬಂದ ಬಳಿಕ ಮೂರೇ ದಿನಗಳ ಅಂತರದಲ್ಲಿ ಮೇ 9ರಂದು 3,66,161 ಪ್ರಕರಣಗಳು ಪತ್ತೆಯಾಗಿದ್ದವು. ಆಗಿನಿಂದಲೇ ಎರಡನೇ ಅಲೆಯ ಕೊರೋನಾ ಇಳಿಯುವ ಮುನ್ಸೂಚನೆ ಲಭಿಸಿತ್ತು. ಇದಾದ ಬಳಿಕ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು. ಈಗ ಎರಡು ಲಕ್ಷಕ್ಕೂ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಕಳೆದ ಏಳು ದಿನಗಳಲ್ಲಿ ವರದಿಯಾದ ಹೊಸ ಪ್ರಕರಣಗಳು ಮತ್ತು ಹಿಂದಿನ ಏಳು ದಿನಗಳಲ್ಲಿ ವರದಿಯಾದ ಪ್ರಕರಗಳ ನಡುವಿನ ವ್ಯತ್ಯಾಸ ಶೇಕಡಾ 23ರಷ್ಟು. ವಿಶ್ವ ಮಟ್ಟದಲ್ಲಿ ಈ ಸರಾಸರಿ ಶೇಕಡಾ 13ರಷ್ಟಿದೆ. ದೇಶದಲ್ಲಿ ಈಗ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿರುವುದು ತಮಿಳುನಾಡಿನಲ್ಲಿ. ಸೋಮವಾರ ತಮಿಳುನಾಡಿನಲ್ಲಿ 34.87 ಸಾವಿರ ಹೊಸ ಪ್ರಕರಣಗಳು ಕಂಡುಬಂದಿದ್ದರೆ ಕರ್ನಾಟಕದಲ್ಲಿ 25.31 ಸಾವಿರ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಸಂಪೂರ್ಣ ನಿಯಂತ್ರಣ ಆಗುತ್ತಿದ್ದು ಕೇವಲ 22.12 ಸಾವಿರ ಪ್ರಕರಣಗಳು ಗೋಚರಿಸಿವೆ.
ಸೋಮವಾರ 1,96,427 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,69,48,874ಕ್ಕೆ ಏರಿಕೆ ಆಗಿದೆ. ಇದಲ್ಲದೆ ಬಹಳ ದಿನಗಳ ಬಳಿಕ ದಿನ ಒಂದರಲ್ಲಿ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆ ನಾಲ್ಕು ಸಾವಿರಕ್ಕಿಂತ ಕಡಿಮೆ ಆಗಿದೆ. ಸೋಮವಾರ 3,511 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,07,231ಕ್ಕೆ ಏರಿಕೆ ಆಗಿದೆ. ಈವರೆಗೆ 2,40,54,861 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 25,86,782 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಈವರೆಗೆ 19,85,38,999 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು 2020ರ ಜನವರಿ 30ರಂದು; ಕೇರಳದಲ್ಲಿ. ಆಗ ಸೋಂಕು ಪೀಡಿತರ ಸಂಖ್ಯೆ ಲಕ್ಷದ ಗಡಿ ಬಳಿ ಬರಲು ಹೆಚ್ಚು ಕಡಿಮೆ ಎಂಟು ತಿಂಗಳು ಹಿಡಿದವು. ಆಗಲೂ ದಿನ ಒಂದರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿರಲಿಲ್ಲ. 2020ರ ಸೆಪ್ಟೆಂಬರ್ 17ರಂದು 98,795 ಕೇಸ್ ಕಂಡುಬಂದಿದ್ದೇ ಅತಿಹೆಚ್ಚಾಗಿತ್ತು