ಮಂಗಳೂರಿಗೆ ಕುವೈತ್‌ನಿಂದ ಮತ್ತೆ ಆಗಮಿಸಿದ ಆಕ್ಸಿಜನ್
ಮಂಗಳೂರು, ಮೇ ೨೫- ಕುವೈತ್ ನ ಇಂಡಿಯನ್ ಕಮ್ಯುನಿಟಿ ಸಪೋರ್ಟ್ ಗ್ರೂಪ್ (ಐಸಿಎಸ್ ಜಿ) ನಿಂದ ಭಾರತಕ್ಕೆ ೧೨೦೦ ಟನ್ ಲಿಕ್ವಿಡ್ ಆಕ್ಸಿಜನ್ ಸೇರಿದಂತೆ ಇತರ ವೈದ್ಯಕೀಯ ಸಾಮಗ್ರಿಗಳು ಎನ್ ಎಂಪಿಟಿಗೆ ಇಂದು (ಮಂಗಳವಾರ) ಬೆಳಗ್ಗೆ ಆಗಮಿಸಿದೆ.
ಐಸಿಎಸ್ ಜಿಯಿಂದ ಭಾರತದ ನೌಕಾಪಡೆಯ ಹಡಗು ಶಾರ್ದೂಲ್ ಹೊತ್ತು ಎನ್‌ಎಂಪಿಟಿಗೆ ಆಗಮಿಸಿತು. ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ನೀಡಲಾದ ಈ ನೆರವು ರೂಪದ ಕೊಡುಗೆಯನ್ನು ರೆಡ್ ಕ್ರಾಸ್ ನ ದ.ಕ ಜಿಲ್ಲಾ ಘಟಕ ಸ್ವೀಕರಿಸಿದೆ. ಲಿಕ್ವಿಡ್ ಆಕ್ಸಿಜನ್ ಹೊಂದಿದ ೧೧ ಟ್ಯಾಂಕರ್ ಗಳು, ೨ ಸೆಮಿ ಟ್ರೇಲರ್ ಗಳು, ೧೨೦೦ ಆಕ್ಸಿಜನ್ ಸಿಲಿಂಡರ್ ಗಳು ಇದರಲ್ಲಿದ್ದು, ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ, ರಾಜ್ಯ ನಿರ್ವಹಣಾ ಸಮಿತಿಯ ಸದಸ್ಯ ಯತೀಶ್ ಬೈಕಂಪಾಡಿ ಎನ್‌ಎಂಪಿಟಿಯಲ್ಲಿ ಈ ಸರಕು ಸ್ವೀಕರಿಸಿದರು.