Subodh Kumar Jaiswal: CBI ನಿರ್ದೇಶಕರಾಗಿ ಮಹಾರಾಷ್ಟ್ರದ IPS ಅಧಿಕಾರಿ ಸುಬೋಧ್ ಕುಮಾರ್ ಜೈಸ್ವಾಲ್ ನೇಮಕ
ನವದೆಹಲಿ (ಮೇ 26): ಮಹಾರಾಷ್ಟ್ರದ ಮಾಜಿ ಡಿಜಿಪಿ (ಪೊಲೀಸ್ ಮಹಾನಿರ್ದೇಶಕ) ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಸಿಬಿಐ (CBI) ನಿರ್ದೆಶಕರಾಗಿ ನೇಮಕ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹಾಗೂ ಕಾಂಗ್ರೆಸ್ ಲೋಕಸಭಾ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಸಭೆಯಲ್ಲಿ ಚರ್ಚಿಸಿ ನಿನ್ನೆ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಸಿಬಿಐ ನೂತನ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಪ್ರಸ್ತುತ ಸುಭೋದ್ ಕುಮಾರ್ ಜೈಸ್ವಾಲ್ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CSIF) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. 1985ನೇ ಬ್ಯಾಚ್ನ ಮಹಾರಾಷ್ಟ್ರ ಕೇಡರ್ನ ಐಪಿಎಸ್ ಅಧಿಕಾರಿಯಾಗಿರುವ ಇವರು ಇದೀಗ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಸಿಬಿಐ ನಿರ್ದೇಶಕನ ಸ್ಥಾನಕ್ಕೆ ಸುಬೋಧ್ ಕುಮಾರ್ ಜೈಸ್ವಾಲ್ ಮಾತ್ರವಲ್ಲದೆ ಎಸ್ಎಸ್ಬಿ ಮುಖ್ಯಸ್ಥ ಕುಮಾರ್ ಚಂದ್ರ ಮತ್ತು ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ವಿ.ಎಸ್.ಕೆ. ಕೌಮುದಿ ಹೆಸರು ಕೂಡ ಚರ್ಚೆಯಲ್ಲಿತ್ತು.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ, ಲೋಕಸಭೆ ಪ್ರತಿಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಸಮಿತಿ ಈ ಮೂವರ ಹೆಸರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಸುಬೋಧ್ ಕುಮಾರ್ ಜೈಸ್ವಾಲ್ ಹೆಸರು ಮುಂಚೂಣಿಯಲ್ಲಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಎಸ್ಎಫ್ ಮುಖ್ಯಸ್ಥ ಬಳಿಕ ಸುಧೋಬ್ ಜೈಸ್ವಾಲ್ ಅವರ ಹೆಸರನ್ನೇ ಅಂತಿಮಗೊಳಿಸಲಾಯಿತು.
ಫೆಬ್ರವರಿ ತಿಂಗಳಲ್ಲಿ ರಿಷಿ ಕುಮಾರ್ ಶುಕ್ಲಾ ಸಿಬಿಐ ನಿರ್ದೆಶಕ ಸ್ಥಾನದಿಂದ ನಿವೃತ್ತಿಯಾಗಿದ್ದರು. ಅದರ ಬಳಿಕ ಸಿಬಿಐ ಹೆಚ್ಚುವರಿ ನಿರ್ದೆಶಕ ಪ್ರವೀಣ್ ಸಿನ್ಹಾ ಸಿಬಿಐನ ಕಾರ್ಯಕಾರಿ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಇದೀಗ ಸುಬೋಧ್ ಕುಮಾರ್ ಜೈಸ್ವಾಲ್ ಮುಂದಿನ 2 ವರ್ಷಗಳ ಅವಧಿಗೆ ಸಿಬಿಐ ನಿರ್ದೇಶಕರಾಗಿರಲಿದ್ದಾರೆ
ಸುಬೋಧ್ ಕುಮಾರ್ ಜೈಸ್ವಾಲ್ ಅವರಿಗೆ ಗುಪ್ತಚರ ದಳದ ವಿಶೇಷ ರಕ್ಷಣಾ ದಳ ಮತ್ತು ಸಂಶೋಧನೆ ಮತ್ತು ವಿಶ್ಲೇಷಣಾ ದಳದಲ್ಲಿ ದಶಕಗಳ ಕಾಲ ಕೆಲಸ ಮಾಡಿದ ಅನುಭವವೂ ಇದೆ. ತೆಲಗಿ ಹಗರಣದ ತನಿಖೆಯಲ್ಲಿ ಸುಬೋಧ್ ಪ್ರಮುಖ ಪಾತ್ರ ವಹಿಸಿದ್ದಾರೆ.