Mehul Choksi:14 ಸಾವಿರ ಕೋಟಿ ವಂಚಕ ಮೇಹುಲ್ ಚೋಕ್ಸಿ ಆಂಟಿಗುವಾ ದೇಶದಿಂದಲೂ ನಾಪತ್ತೆ; ಕ್ಯೂಬಾದಲ್ಲಿರುವ ಸಾಧ್ಯತೆ?
ನವ ದೆಹಲಿ (ಮೇ 25); ಭಾರತದ ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (Punjab National Bank) 14 ಸಾವಿರ ಕೋಟಿ ರೂ. ಸಾಲ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ವಾಂಟೆಡ್ ಲಿಸ್ಟ್‌ನಲ್ಲಿರುವ, 2018 ರಲ್ಲಿ ಭಾರತದಿಂದ ಓಡಿ ಹೋಗಿರುವ ಗುಜರಾತಿನ ಒಂದು ಕಾಲದ ಪ್ರಖ್ಯಾತ ವಜ್ರ ವ್ಯಾಪಾರಿ ಮೆಹೂಲ್ ಚೋಕ್ಸಿ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾದಿಂದಲೂ ನಾಪತ್ತೆಯಾಗಿ ದ್ದಾರೆ ಎಂದು ಅವರ ವಕೀಲರನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ಆದರೆ, ಅವರು ಕ್ಯಾಬಾ ದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಜಾರಿ ನಿರ್ದೇಶನಾಲದ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಚೋಕ್ಸಿ ಅವರ ವಕೀಲ ವಿಜಯ್ ಅಗರ್‌ವಾಲ್ ಅವರು ಮಂಗಳವಾರ ಬೆಳಿಗ್ಗೆ ಎನ್‌ಡಿಟಿವಿಗೆ ತಮ್ಮ ಕಕ್ಷಿದಾರ ಕಾಣೆಯಾಗಿದ್ದಾರೆ ಮತ್ತು ಅವರ ಕುಟುಂಬವು ಅವರನ್ನು ಹುಡುಕುತ್ತಿದೆ ಎಂದು ದೃಢಪಡಿಸಿದ್ದಾರೆ. ಆಂಟಿಗುವಾ ಪೊಲೀಸರು ಪತ್ತೆ ಕಾರ್ಯ ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಮಾಧ್ಯಮ ಆಂಟಿಗುವಾ ನ್ಯೂಸ್‌ರೂಮ್, ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿ ಅವರನ್ನು ಉಲ್ಲೇಖಿಸಿ, ಅಧಿಕಾರಿಗಳು ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿ ಇರುವ ಸ್ಥಳವನ್ನು ಅನುಸರಿಸುತ್ತಿದ್ದಾರೆ ಎಂದು ತಿಳಿಸಿದೆ. ಚೋಕ್ಸಿ ಕಾಣೆಯಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿಸಲಾಗಿಲ್ಲ ಎಂದು ಸಿಬಿಐನ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ದೃಢೀಕರಣ ಮತ್ತು ಹೆಚ್ಚಿನ ಮಾಹಿತಿಗಾಗಿ ಭಾರತದ ಆಂಟಿಗುವಾನ್ ರಾಯಭಾರ ಕಚೇರಿಗೆ ಸಿಬಿಐ ಪತ್ರ ಬರೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
2018 ರಲ್ಲಿ ಜಾಗತಿಕ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ಚೋಕ್ಸಿ ವಿರುದ್ಧ ರೆಡ್ ನೋಟಿಸ್ ಹೊರಡಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಅಂದರೆ ಅವರು ಜಗತ್ತಿನ ಎಲ್ಲಿಯಾದರೂ ಯಾವುದೇ ದೇಶವನ್ನು ಪ್ರವೇಶಿಸಿದರೆ ಸಿಬಿಐಗೆ ಇಂಟರ್‌ಪೋಲ್ ಸೂಚನೆ ನೀಡಲಿದೆ.
ಆಂಟಿಗುವಾದಲ್ಲಿನ ಸ್ಥಳೀಯ ಮಾಧ್ಯಮವನ್ನು ಉಲ್ಲೇಖಿಸಿ ಗುಪ್ತಚರ ಮೂಲಗಳು, ಚೋಕ್ಸಿ ಅವರು ಕ್ಯೂಬಾದಲ್ಲಿ ನೆಲೆಸಿದ್ದಾರೆ ಎಂದು ಹೇಳುತ್ತಿವೆ. “ನಾವು ಅಂತಹ ವರದಿಗಳನ್ನು ಪಡೆದುಕೊಂಡಿದ್ದೇವೆ. ನಾವು ಅದನ್ನು ಪತ್ತೆ ಮಾಡುತ್ತಿದ್ದೇವೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಚೋಕ್ಸಿ ಸೋಮವಾರ ಸಂಜೆ ದ್ವೀಪದ ದಕ್ಷಿಣ ಭಾಗದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಹೋಗಲು ತಮ್ಮ ಮನೆಯಿಂದ ಹೊರಟರು. ಆಮೇಲೆ ಅವರು ಕಾಣಿಸಿಕೊಂಡಿಲ್ಲ. ಅವರ ವಾಹನವು ನಂತರ ಪತ್ತೆಯಾಗಿದೆ. ಆದರೆ ಅವರ ಯಾವುದೇ ಸುಳಿವು ಇಲ್ಲ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ಮೆಹುಲ್ ಚೋಕ್ಸಿ ದೀರ್ಘಕಾಲದ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.
ಅವರು ಪ್ರಸ್ತುತ ಆಂಟಿಗುವಾನ್ ಪೌರತ್ವವನ್ನು ಹೊಂದಿದ್ದಾರೆ. ಕಳೆದ ವರ್ಷ ಆಂಟಿಗುವಾ ಪ್ರಧಾನಿ ಗ್ಯಾಸ್ಟನ್ ಬ್ರೌನ್, ಚೋಸ್ಕಿ ಅವರ ಎಲ್ಲಾ ಕಾನೂನು ಆಯ್ಕೆಗಳು ಮುಗಿದ ನಂತರ ಪೌರತ್ವವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದ್ದರು.
ಕೆರಿಬಿಯನ್‌ನ ಅನೇಕ ದೇಶಗಳಂತೆ ತಮ್ಮ ದೇಶವು ಅಪರಾಧಿಗಳಿಗೆ, ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಸುರಕ್ಷಿತ ತಾಣ ಒದಗಿಸುವುದಿಲ್ಲ ಎಂದು ಬ್ರೌನ್ ಸ್ಪಷ್ಟಪಡಿಸುತ್ತ ಬಂದಿದ್ದಾರೆ. “ಪೌರತ್ವದ ಪ್ರಕ್ರಿಯೆ ನಡೆದ ಬಳಿಕ ಚೋಸ್ಕಿ ಪ್ರವೇಶಿಸಿದ್ದಾರೆ. ನಮಗೆ ಬೇರೆ ಪ್ರಕ್ರಿಯೆ ಕೂಡ ಇವೆ. ವಾಸ್ತವವೆಂದರೆ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದು ಮತ್ತು ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದು” ಎಂದು ಬ್ರೌನ್ ಹೇಳಿದ್ದಾರೆ ಎಂದು ಆಂಟಿಗುವಾ ಅಬ್ಸರ್ವರ್ ವರದಿ ಮಾಡಿದೆ.
ಆಂಟಿಗುವಾನ್ ಸಿವಿಲ್ ನ್ಯಾಯಾಲಯವು ಪೌರತ್ವವನ್ನು ರದ್ದುಪಡಿಸಿದೆ ಎಂಬ ಮಾಧ್ಯಮ ವರದಿಗಳು ಸುಳ್ಳು ಎಂದು ಮಾರ್ಚ್‌ನಲ್ಲಿ ಚೋಕ್ಸಿ ಅವರ ವಕೀಲರು ಹೇಳಿದ್ದರು. ಮೆಹುಲ್ ಚೋಕ್ಸಿ ಆಂಟಿಗುವಾನ್ ಪ್ರಜೆಯಾಗಿ ಉಳಿದಿದ್ದಾರೆ ಎಂದು ವಕೀಲ ಅಗರವಾಲ್ ಹೇಳಿದ್ದರು. ಎಎನ್‌ಐ ಜೊತೆಗಿನ ತಮ್ಮ ಹಿಂದಿನ ಸಂದರ್ಶನದಲ್ಲಿ ಚೋಕ್ಸಿ, ತಮ್ಮ ವಿರುದ್ಧದ ಆರೋಪಗಳು ಸುಳ್ಳು, ಆಧಾರರಹಿತ ಮತ್ತು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದ್ದಾರೆ.
ಪಿಎನ್‌ಬಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಕ್ಸಿಯ ಸಂಬಂಧಿಕ (ಸೋದರಳಿಯ), ಬಿಲಿಯನೇರ್ ಆಭರಣ ವ್ಯಾಪಾರಿ ನೀರವ್ ಮೋದಿ (50) ಕೂಡ ವಾಂಟೆಡ್ ಲಿಸ್ಟ್‌ನಲ್ಲಿದ್ದಾರೆ. ಚೋಕ್ಸಿ ಅವರಂತೆಯೇ ಮೋದಿ ಕೂಡ 2018 ರಲ್ಲಿ ಭಾರತದಿಂದ ಪಲಾಯನ ಮಾಡಿ, ಪ್ರಸ್ತುತ ಬ್ರಿಟನ್ ದೇಶದಲ್ಲಿದ್ದಾರೆ.
ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಕಳೆದ ತಿಂಗಳು ಬ್ರಿಟಿಷ್ ಸರ್ಕಾರ ಅನುಮತಿಸಿತ್ತು. ಆದರೆ ನೀರವ್ ಮೋದಿ ಬ್ರಿಟಿಷ್ ಹಸ್ತಾಂತರದ ಆದೇಶವನ್ನು ಯುಕೆ ಹೈಕೋರ್ಟ್ ಮುಂದೆ ಪ್ರಶ್ನಿಸಬಹುದು. 2019 ರ ಫೆಬ್ರವರಿಯಲ್ಲಿ ಸಹಿ ಮಾಡಿದ ಹಸ್ತಾಂತರ ಆದೇಶದ ವಿರುದ್ಧ ನ್ಯಾಯಾಲಯಕ್ಕೆ ಹೋದ ಮದ್ಯದ ದೊರೆ ವಿಜಯ್ ಮಲ್ಯ ಅವರ ಪ್ರಕರಣದಲ್ಲಿ ಕಂಡುಬರುವಂತೆ, ಈ ಪ್ರಕ್ರಿಯೆಯು ತಿಂಗಳುಗಳು ಅಥವಾ ವರ್ಷಗಳನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ.