ಕೋವಿಡ್ ಲಸಿಕೆ ಪಡೆದ ಜಗತ್ತಿನ ಮೊದಲ ಪುರುಷ ವಿಲಿಯಂ ಷೇಕ್‌ಸ್ಪಿಯರ್ ಅನಾರೋಗ್ಯದಿಂದ ನಿಧನ

ಹೈಲೈಟ್ಸ್‌:

  • ಡಿಸೆಂಬರ್ 8ರಂದು ಲಸಿಕೆ ಪಡೆದಿದ್ದ ವಿಲಿಯಂ ಷೇಕ್‌ಸ್ಪಿಯರ್
  • ಕೋವಿಡ್ ಲಸಿಕೆ ಪಡೆದ ಮೊದಲ ಪುರುಷ ಹಾಗೂ ಎರಡನೆಯ ವ್ಯಕ್ತಿ
  • ಲಸಿಕೆ ಪಡೆದ ನಂತರವೂ ಸಹಜ ಸ್ಥಿತಿಯಲ್ಲಿದ್ದ ಷೇಕ್‌ಸ್ಪಿಯರ್

ಲಂಡನ್: ಜಗತ್ತಿನಲ್ಲಿಯೇ ಕೊರೊನಾ ವೈರಸ್‌ಗೆ ಲಸಿಕೆ ಪಡೆದಿದ್ದ ಮೊದಲ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬ್ರಿಟನ್‌ನ ವಿಲಿಯಂ ಷೇಕ್‌ಸ್ಪಿಯರ್ (81) ನಿಧನರಾಗಿದ್ದಾರೆ. ಅವರು ಆರೋಗ್ಯದ ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದರು.

ಕೋವಿಡ್ 19 ವಿರುದ್ಧ ಫೈಜರ್ ಅಭಿವೃದ್ಧಿಪಡಿಸಿದ್ದ ಲಸಿಕೆಗೆ ಬ್ರಿಟನ್ ಕಳೆದ ಡಿಸೆಂಬರ್ ಆರಂಭದಲ್ಲಿ ಅನುಮೋದನೆ ನೀಡಿದ್ದಾಗ ಷೇಕ್‌ಸ್ಪಿಯರ್ ಲಸಿಕೆ ಪಡೆದಿದ್ದರು. ಈ ಲಸಿಕೆ ಪಡೆದವರಲ್ಲಿ 90 ವರ್ಷದ ಅಜ್ಜಿ ಮಾರ್ಗರೆಟ್ ಕೀನನ್ ಜಗತ್ತಿನ ಪ್ರಥಮ ವ್ಯಕ್ತಿ ಎನಿಸಿದ್ದಾರೆ. ಅವರ ನಂತರ ಎರಡನೆಯವರಾಗಿ ಲಸಿಕೆ ಪಡೆದುಕೊಂಡಿದ್ದ ಷೇಕ್‌ಸ್ಪಿಯರ್, ಈ ಡೋಸ್ ಪಡೆದುಕೊಂಡ ಮೊದಲ ಪುರುಷ ಎನಿಸಿಕೊಂಡಿದ್ದರು. ಡಿಸೆಂಬರ್ 8ರಂದು ಅವರು ಮೊದಲ ಡೋಸ್ ಪಡೆದುಕೊಂಡಿದ್ದರು.

ಖ್ಯಾತ ಸಾಹಿತಿ ವಿಲಿಯಂ ಷೇಕ್‌ಸ್ಪಿಯರ್ ಹೆಸರನ್ನೇ ಹೊಂದಿದ್ದ ಇವರು, ತಮ್ಮ ಹೆಸರಿನ ಕಾರಣದಿಂದಾಗಿಯೇ ಗಮನ ಸೆಳೆದಿದ್ದರು. ವಿಲಿಯಂ ಷೇಕ್‌ಸ್ಪಿಯರ್ ಅವರು ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಮಾಡಿದ್ದರು. ಜತೆಗೆ ಕೌನ್ಸಿಲರ್ ಕೂಡ ಆಗಿದ್ದರು. ಸ್ಥಳೀಯ ಲೇಬರ್ ಪಕ್ಷದ ಸಕ್ರಿಯ ಬೆಂಬಲಿಗರಾಗಿದ್ದರು. ಅವರ ನಿಧನಕ್ಕೆ ವೆಸ್ಟ್ ಮಿಡ್‌ಲ್ಯಾಂಡ್ ಲೇಬರ್ ಪಕ್ಷ ಸಂತಾಪ ಸೂಚಿಸಿದೆ.

ವಾರ್‌ವಿಕ್‌ಷೈರ್ ನಿವಾಸಿಯಾಗಿದ್ದ ಷೇಕ್‌ಸ್ಪಿಯರ್, ಯುನಿವರ್ಸಿಟಿ ಹಾಸ್ಪಿಟಲ್ ಕೊವೆಂಟ್ರಿಯಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಆಸ್ಪತ್ರೆಯ ದುರ್ಬಲ ರೋಗಿಗಳ ವಾರ್ಡ್‌ನಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಕೋವಿಡ್ ಕಾರಣವಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *