ಒಂದೇ ತಿಂಗಳಲ್ಲಿ 50 ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ; ಮಂಗಳೂರು ಲೇಡಿಗೋಷನ್‌ ಆಸ್ಪತ್ರೆ ಸಾಧನೆ

ಹೈಲೈಟ್ಸ್‌:

  • ಒಂದೇ ತಿಂಗಳಲ್ಲಿ 50 ಕೊರೊನಾ ಸೋಂಕಿತರಿಗೆ ಹೆರಿಗೆ
  • ಮಂಗಳೂರಿನ ಪ್ರಸಿದ್ಧ ಲೇಡಿಗೋಷನ್‌ ಆಸ್ಪತ್ರೆ ಸಾಧನೆ
  • ಒಟ್ಟು 157 ಗರ್ಭಿಣಿಯರಿಗೆ ಸುರಕ್ಷಿತ ಡೆಲಿವರಿ
  • ಅತ್ಯುತ್ತಮ ಸೇವೆ ಕಲ್ಪಿಸುತ್ತಿರುವ ಸರ್ಕಾರಿ ಲೇಡಿಗೋಷನ್‌ ಆಸ್ಪತ್ರೆ

ಮಂಗಳೂರು: ಸರಕಾರಿ ವ್ಯವಸ್ಥೆಯಲ್ಲೂ ಅತ್ಯುತ್ತಮ ಸೌಲಭ್ಯ ಕಲ್ಪಿಸುತ್ತಿರುವ ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಮೇ ತಿಂಗಳೊಂದರಲ್ಲೇ 50 ಕೋವಿಡ್‌ ಸೋಂಕಿತ ಗರ್ಭಿಣಿಯರ ಹೆರಿಗೆ ನಡೆಸಿ ಸಾಧನೆ ಮಾಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಕೋವಿಡ್‌-19 ಎರಡನೇ ಅಲೆ ಗರ್ಭಿಣಿಯರಿಗೆ ಹೆಚ್ಚು ಬಾಧಿಸಿದೆ. ಹಿಂದಿನ ಲೆಕ್ಕಾಚಾರ ತೆಗೆದರೆ ಇಲ್ಲಿ ಯಾವ ತಿಂಗಳಲ್ಲೂ ಹೆರಿಗೆ ಪ್ರಮಾಣ 45ರ ಗಡಿ ದಾಟಿರಲಿಲ್ಲ. ಮೇ ತಿಂಗಳ 24 ದಿನಗಳಲ್ಲಿ ಸೋಂಕಿತ ಗರ್ಭಿಣಿಯರಲ್ಲಿ 23 ನಾರ್ಮಲ್‌ ಮತ್ತು 27 ಸಿಸೇರಿಯನ್‌ ಹೆರಿಗೆಯಾಗಿದೆ. ಅಕ್ಟೋಬರ್‌ನಲ್ಲಿ ಒಟ್ಟು 800 ಹೆರಿಗೆ ಮೂಲಕ ಲೇಡಿಗೋಷನ್‌ ಆಸ್ಪತ್ರೆ ದಾಖಲೆ ಮಾಡಿತ್ತು. ಆಗ ಕೋವಿಡ್‌ ಸೋಂಕಿತ 14 ನಾರ್ಮಲ್‌ ಮತ್ತು 21 ಸಿಸೇರಿಯನ್‌ ಮೂಲಕ ಒಟ್ಟು 35 ಹೆರಿಗೆ ನಡೆದಿತ್ತು. ನಂತರ ಅದರ ಪ್ರಮಾಣ ಕುಂಠಿತಗೊಂಡಿತ್ತು. ಈಗ ಮತ್ತೆ ತೀವ್ರ ಹೆಚ್ಚಳವಾಗುತ್ತಿದೆ.

173 ವರ್ಷಗಳ ಇತಿಹಾಸ ಹೊಂದಿರುವ ಲೇಡಿಗೋಷನ್‌ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲೇ ಕೋವಿಡ್‌ ಮೆಟರ್ನಿಟಿ ಬ್ಲಾಕ್‌ ಆರಂಭಿಸಲಾಗಿದೆ. ಆಗ 15 ಆಕ್ಸಿಜನ್‌ ಮತ್ತು 5 ನಾನ್‌ ಆಕ್ಸಿಜನ್‌ ಸೇರಿ 21 ಬೆಡ್‌ ಹಾಕಲಾಗಿತ್ತು. 14 ಸಂಶಯಿತ ಕೋವಿಡ್‌ ಬೆಡ್‌ ಸೇರಿ ಒಟ್ಟು 53 ಬೆಡ್‌ಗಳನ್ನು ಮೀಸಲಿಡಲಾಗಿದೆ. ಅದರಲ್ಲಿ ಸಾಮಾನ್ಯ ಮತ್ತು ಸಿಸೇರಿಯನ್‌ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

3 ಶಿಶುಗಳು ಪಾಸಿಟಿವ್‌: ಇಷ್ಟರ ತನಕ ಒಟ್ಟು 331 ಸೋಂಕಿತ ಗರ್ಭಿಣಿಯರು ದಾಖಲಾಗಿದ್ದು, 62 ನಾರ್ಮಲ್‌ ಮತ್ತು 95 ಸಿಸೇರಿಯನ್‌ ಸೇರಿ 157 ಹೆರಿಗೆಯಾಗಿದೆ. ಸಂಶಯಿತ ಕೆಲವು ಪ್ರಕರಣ ನೆಗೆಟಿವ್‌ ಕೂಡ ಆಗಿವೆ. ಹೆರಿಗೆಯಾದ ಮೂರು ಶಿಶುಗಳು ಕೋವಿಡ್‌ ಪಾಸಿಟಿವ್‌ ಆಗಿದ್ದವು. ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್‌ ನವಜಾತ ಶಿಶುಗಳ ತೀವ್ರ ನಿಗಾ ಘಟಕ ಇಲ್ಲಿದೆ.

ಆಕ್ಸಿಜನ್‌ ಸಮಸ್ಯೆ ಇಲ್ಲ: ಇತರ ಆಸ್ಪತ್ರೆಗಳಲ್ಲಿಆಕ್ಸಿಜನ್‌ ಬೆಡ್‌ಗಳ ಕೊರತೆ ಇರುತ್ತದೆ. ಇಲ್ಲಿ ಪ್ರಸೂತಿಗಾಗಿಯೇ ಆಬ್‌ಸ್ಟೆಟ್ರಿಕ್‌ ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳಿವೆ.

ಗರ್ಭಾವಸ್ಥೆ ನಿರ್ವಹಣೆ ಅಗತ್ಯ
ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದೇ ಪ್ರತಿರೋಧ ಶಕ್ತಿಯನ್ನು ಕಳೆದುಕೊಳ್ಳುವ ಪ್ರಾಕೃತಿಕ ಕ್ರಿಯೆ. ಪ್ರತಿರೋಧ ಶಕ್ತಿ ಕಡಿಮೆಯಾಗುವಾಗ ಸೋಂಕು ತಗಲುವುದು ಸಾಮಾನ್ಯ. ಈ ಅವಧಿಯಲ್ಲಿ ಪೌಷ್ಟಿಕ ಆಹಾರ, ವಿಟಮಿನ್‌ ಸಿ ಮಾತ್ರೆ ಸೇವನೆ ಮೂಲಕ ಹೆಚ್ಚಿನ ರಕ್ತಸ್ರಾವ ಆಗದಂತೆ ಎಚ್ಚರಿಕೆ, ವೈಯಕ್ತಿಕ ಸ್ವಚ್ಛತೆ, ಸೋಂಕು ತಗುಲದಂತೆ ಜಾಗ್ರತೆ ವಹಿಸಿ, ಗರ್ಭಾವಸ್ಥೆಯನ್ನು ನಿಭಾಯಿಸುವುದು ಅಗತ್ಯ.

ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಸೆಪ್ಟೆಂಬರ್‌ನಿಂದ ಈವರೆಗೆ ಒಟ್ಟು 157 ಸೋಂಕಿತ ಗರ್ಭಿಣಿಯರಲ್ಲಿ 4-7 ತಿಂಗಳ ಮಧ್ಯೆ 11 ಶಿಶುಗಳು ಹೊಟ್ಟೆಯಲ್ಲೇ ತೀರಿಕೊಂಡಿವೆ. ಅದು ಕೋವಿಡ್‌ನಿಂದಲೇ ಆಗಿದೆ ಎನ್ನಲಾಗದು. ಅದಕ್ಕೆ ಅಧ್ಯಯನ ನಡೆಯುವ ಅಗತ್ಯವಿದೆ. ಕೋವಿಡ್‌ ಸೋಂಕಿತ ಬಹುತೇಕ ಎಲ್ಲರೂ ಹೆರಿಗೆಯಾಗಿ ಹೋಗಿದ್ದಾರೆ. ಇಬ್ಬರಿಗೆ ಮಾತ್ರ ಉಸಿರಾಟದ ಸಮಸ್ಯೆಯಿಂದ ಹೆಚ್ಚಿನ ಚಿಕಿತ್ಸೆ ಬೇಕಾಗಿತ್ತು. ಹಾಗಾಗಿ ಭಯಪಡುವ ಬದಲು, ಜಾಗ್ರತೆ ವಹಿಸಬೇಕು.
ಡಾ. ದುರ್ಗಾಪ್ರಸಾದ್‌, ಅಧೀಕ್ಷಕರು, ಸರಕಾರಿ ಲೇಡಿಗೋಷನ್‌ ಆಸ್ಪತ್ರೆ, ಮಂಗಳೂರು

 

ಮಂಗಳೂರು ಕೆಎಂಸಿಯಲ್ಲಿ 31 ವರ್ಷದ ಪಾಸಿಟಿವ್‌ ಆಗಿದ್ದ ಗರ್ಭಿಣಿಯೊಬ್ಬರು ದಾಖಲಾಗಿದ್ದರು. ಜ್ವರದಿಂದ ಬಳಲುತ್ತಿದ್ದ ತಾಯಿಗೆ ಚಿಕಿತ್ಸೆ ಮತ್ತು ಮಗುವಿಗೆ ತೊಂದರೆಯಾಗದಂತೆ ತಡೆಯುವುದು ಸವಾಲಾಗಿತ್ತು. ಹೆರಿಗೆ ತಜ್ಞೆ ಡಾ. ವಿದ್ಯಾಶ್ರೀ ಕಾಮತ್‌ ಅವರ ಮೂಲಕ ಸುರಕ್ಷಿತ ಹೆರಿಗೆ ಮಾಡಿಸಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಕೋವಿಡ್‌ ಎರಡನೇ ಅಲೆಯಲ್ಲಿ ಗರ್ಭಿಣಿಯರು ತೊಂದರೆ ಅನುಭವಿಸುತ್ತಿದ್ದಾರೆ. ಆರಂಭದಲ್ಲೇ ಚಿಕಿತ್ಸೆ ಪಡೆಯುವುದು ಉತ್ತಮ.
ಡಾ. ಹಾರೂನ್‌ ಎಚ್‌., ಕನ್ಸಲ್ಟೆಂಟ್‌, ಇಂಟರ್ನಲ್‌ ಮೆಡಿಸಿನ್‌, ಕೆಎಂಸಿ, ಮಂಗಳೂರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *