ಕಾಳಗಿ ತಾಲ್ಲೂಕಿನ ನಾಲ್ಕು ಗ್ರಾಮಗಳು ಕೊರೋನಾ ಮುಕ್ತ..!

ಕಲಬುರಗಿ,ಮೇ.27:ಕೊರೋನಾ ಸೋಂಕಿಗೆ ದೇಶದಲ್ಲಿ ಮೊದಲನೇ ಬಲಿಯಾದ ಜಿಲ್ಲೆಯೆಂಬ ಅಪಖ್ಯಾತಿಗೆ ಒಳಗಾದ ಜಿಲ್ಲೆಯಲ್ಲಿ ಕೊರೋನಾ ರುದ್ರತಾಂಡವ ಮುಂದುವರೆದಿದೆ. ಸೋಂಕಿನಿಂದ ಮೃತಪಡುವವರ ಸಂಖ್ಯೆ ಏರುತ್ತಲೇ ಇದೆ. ಆದಾಗ್ಯೂ, ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದರ ನಿರಂತರ ಪ್ರಯತ್ನದಿಂದ ನಾಲ್ಕು ಗ್ರಾಮಗಳು ಕೊರೋನಾ ಮುಕ್ತ ಹೆಗ್ಗಳಿಕೆಗೆ ಪಾತ್ರವಾಗಿವೆ.
ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತಿದೆ. ಆದಾಗ್ಯೂ, ಜಿಲ್ಲೆಯ ಕಾಳಗಿ ತಾಲ್ಲೂಕಿನ ಕಂದಗೂಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಗೂಳ್, ಹುಳಗೇರಿ, ವಟವಟಿ ಹಾಗೂ ವಟವಟಿ ತಾಂಡಾ ಸೇರಿ ಒಟ್ಟು ನಾಲ್ಕು ಗ್ರಾಮಗಳಲ್ಲಿ ಕೊರೋನಾ ಅಷ್ಟೊಂದು ಇಲ್ಲವೇ ಇಲ್ಲ.
ಕಂದಗೂಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳು ಸೇರಿ ಸುಮಾರು ಹತ್ತು ಸಾವಿರ ಜನರು ವಾಸವಿದ್ದಾರೆ. ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣ್ ಕಡೆಗೆ ದುಡಿಯಲು ಗುಳೆ ಹೋಗಿದ್ದ ಜನ ಕೂಡ ಗ್ರಾಮಗಳಿಗೆ ಮರಳಿದ್ದಾರೆ. ಆದಾಗ್ಯೂ, ನಾಲ್ಕು ಗ್ರಾಮಗಳಲ್ಲಿ ಸೋಂಕಿತರು ಇಲ್ಲ. ಪಂಚಾಯಿತಿಯ ವಿಶೇಷ ಕಾಳಜಿಗೆ ಕೈ ಜೋಡಿಸಿದ ಗ್ರಾಮಸ್ಥರು ಸ್ವಯಂ ಪ್ರೇರಿತ ನಿಷೇಧ ಹೇರಿಕೊಂಡಿದ್ದಾರೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುವ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಹದಿನಾಲ್ಕು ದಿನಗಳವರೆಗೆ ಹೋಮ್ ಐಸೋಲೇಷನ್ ಕಡ್ಡಾಯಗೊಳಿಸಲಾಗಿದೆ.
ಎರಡು ದಿನಗಳಿಗೊಮ್ಮೆ ಡಂಗೂರ ಸಾರುವ ಮೂಲಕ ಗ್ರಾಮಗಳಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸ್ವತ: ಕಂದಗೂಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಬಾಗಿಲಿಗೆ ಹೋಗಿ ಕೊರೋನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಮನೆಗಳಲ್ಲಿ ಮದುವೆ ಸಮಾರಂಭಗಳು ಇದ್ದಲ್ಲಿ ಅಂತಹ ಮನೆಗಳಿಗೆ ತೆರಳಿ ಜನ ಸೇರಿಸದೇ ಮನೆಯವರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಲಹೆ ನೀಡುತ್ತಿದ್ದಾರೆ. ಸಮಾರಂಭದಲ್ಲಿ ಭಾಗಿಯಗುವ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸಾಮಾಜಿಕ ಅಂತರ ಕಾಪಾಡುವಂತೆ ಮತ್ತು ಸೋಂಕಿನ ಲಕ್ಷಣಗಳು8 ಯಾರಿಗಾದರೂ ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಚುರುಕಾಗಿ ಕೆಲಸ ಮಾಡುತ್ತಿದ್ದು, ನಿತ್ಯ ಗ್ರಾಮದ ಮನೆ, ಮನೆಗೆ ತೆರಳಿ ಪಲ್ಸ್ ಆಕ್ಸಿಮೀಟರ್, ಥರ್ಮಲ್ ಸ್ಕ್ರೀನಿಂಗ್‍ನಿಂದ ಅರೋಗ್ಯ ಸ್ಥಿರತೆ ಕುರಿತು ನಿಗಾ ವಹಿಸುತ್ತಿದ್ದಾರೆ. ಸೋಂಕು ಶಂಕಿತರಿಗೆ ತಕ್ಷಣ ಆರ್‍ಟಿಪಿಸಿಆರ್ ತಪಾಸಣೆಗೆ ಒಳಪಡಿಸಿ ತೀವ್ರ ನಿಗಾ ವಹಿಸಿ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೂ ಲಸಿಕೆಗಳನ್ನು ಹಾಕಿಸಿಕೊಳ್ಳಲು ಪ್ರಚೋದಿಸಲಾಗುತ್ತಿದೆ.
ಗ್ರಾಮ ಪಂಚಾಯಿತಿಯೊಂದಿಗೆ ಕೈಜೋಡಿಸಿದ ನಾಲ್ಕು ಗ್ರಾಮಗಳ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಎಚ್ಚರಿಕೆ ವಹಿಸುತ್ತಿದ್ದಾರೆ. ಮನೆಯ ಮುಂದೆ ಇರುವ ಕಟ್ಟೆ ಮೇಲೆ ಕುಳಿತರೂ ಮಾಸ್ಕ್ ಧರಿಸಿ ಪರಸ್ಪರರು ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಹೊಲಗಳಿಗೆ ಹೊಗುವಾಗ ರೈತರು ಸಹ ಮಾಸ್ಕ್ ಕಡ್ಡಾಯವಾಗಿ ಧರಿಸುತ್ತಿದ್ದಾರೆ. ಈ ಮುಂಚೆ ಗ್ರಾಮದಲ್ಲಿ ಏಳು ಜನರಿಗೆ ಸೋಂಕು ತಗುಲಿತ್ತು. ಗ್ರಾಮ ಪಂಚಾಯಿತಿಯ ಶ್ರಮದಿಂದ ಸೋಂಕು ಮುಂದೆ ಹರಡದಂತೆ ನೋಡಿಕೊಳ್ಳಲಾಗಿದೆ. ಇದೀಗ ಏಳು ಜನರು ಗುಣಮುಖರಾಗಿದ್ದು, ನಂತರದಲ್ಲಿ ಇಲ್ಲಿಯವರೆಗೆ ಯಾರಿಗೂ ಸೋಂಕು ತಗುಲಿಲ್ಲ ಅನ್ನೋದು ಗಮನಾರ್ಹ ವಿಷಯವಾಗಿದೆ.
ಕಂದಗೂಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಸರ್ಕಾರದ ಕೋವಿಡ್ ನಿಯಮಗಳನ್ನು ಚಾಚೂ ತಪ್ಪದೇ ಜನ ಪಾಲಿಸುತ್ತಿದ್ದಾರೆ. ಜನ ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದಿಲ್ಲ. ಹೊಟೇಲ್ ಸೇರಿ ಪ್ರತಿಯೊಂದು ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ದಿನಸಿ ಅಂಗಡಿಯವರು ತಿಂಗಳಿಗೊಮ್ಮೆ ಮಾತ್ರ ಜಿಲ್ಲಾ ಕೇಂದ್ರಕ್ಕೆ ತೆರಳಿ ತಿಂಗಳಿಗೆ ಬೇಕಾಗುವ ಕಿರಾಣಿ ದಿನಸಿಯನ್ನು ಸಗಟು ಖರೀದಿಸಿ ತಂದಿಟ್ಟಿದ್ದು, ಪದೇ ಪದೇ ನಗರಕ್ಕೆ ಹೋಗುವುದನ್ನು ತಪ್ಪಿಸಿದ್ದಾರೆ. ಇದರಿಂದ ಸೋಂಕು ಗ್ರಾಮಕ್ಕೆ ಪ್ರವೇಶಪಡೆಯುವುದು ತಪ್ಪಿದಂತಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *