‘ಖಾಸಗಿಯವರಿಗೆ ಶೇ.25ಕ್ಕಿಂತ ಹೆಚ್ಚಿನ ಲಸಿಕೆ ಬೇಡ’ – ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸಲಹೆ
ಹೈಲೈಟ್ಸ್:
- ಖಾಸಗಿಯವರಿಗೆ ಶೇ.25ಕ್ಕಿಂತ ಹೆಚ್ಚು ಡೋಸ್ ಲಸಿಕೆ ಲಭ್ಯವಾಗದಂತೆ ಕೇಂದ್ರ, ರಾಜ್ಯಗಳು ಕ್ರಮ ಕೈಗೊಳ್ಳಬೇಕು ಎಂದ ಹೈಕೋರ್ಟ್
- ಇಲ್ಲವಾದರೆ ಹಣವಿದ್ದವರು ಖಾಸಗಿಯಲ್ಲಿ ಒಂದು ಡೋಸ್ ಪಡೆದು ನಂತರ ಸರಕಾರದಿಂದ 2ನೇ ಡೋಸ್ ಪಡೆಯುತ್ತಾರೆ ಎಂದ ನ್ಯಾಯಾಲಯ
- ಇದರಿಂದ ಹಣವಿಲ್ಲದವರಿಗೆ ಲಸಿಕೆ ಪಡೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕೋರ್ಟ್‌ನಿಂದ ಎಚ್ಚರಿಕೆ
ಬೆಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ನಿಗದಿತ ಶೇ. 25ಕ್ಕಿಂತ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯವಾಗದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.
ಕೋವಿಡ್‌ಗೆ ಸಂಬಂಧಿಸಿದ ಪಿಐಎಲ್‌ಗಳ ಕುರಿತು ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕಾ ನೇತೃತ್ವದ ನ್ಯಾಯಪೀಠ, ಬುಧವಾರ ವಿಚಾರಣೆ ನಂತರ ಈ ಸಲಹೆ ಮಾಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಕೇಂದ್ರ ಸರಕಾರದ ಪರ ವಾದಿಸಿದ ಎಎಸ್‌ಜಿ ಐಶ್ವರ್ಯ ಭಾಟಿ, ”ಕೇಂದ್ರ ತನ್ನ ಶೇ.50ರ ಕೋಟಾದಿಂದ ಕರ್ನಾಟಕಕ್ಕೆ 24 ಲಕ್ಷ ಡೋಸ್ ಲಸಿಕೆ ನೀಡಿದೆ. ಅಂತೆಯೇ ರಾಜ್ಯ ಸರಕಾರ ತನ್ನ ಶೇ.25ರ ಕೋಟಾದಲ್ಲಿ 15,98,220 ಡೋಸ್ ಖರೀದಿ ಮಾಡಿದೆ. ಖಾಸಗಿ ಆಸ್ಪತ್ರೆಗಳು ತಮ್ಮ ಶೇ.25ರ ಕೋಟಾದಲ್ಲಿ16,16,660 ಲಸಿಕೆ ಖರೀದಿಸಿವೆ” ಎಂದರು.
ಈ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ, ”ಹೇಗೆ ಖಾಸಗಿಯವರಿಗೆ ಸರಕಾರಕ್ಕಿಂತ ಹೆಚ್ಚು ಡೋಸ್ ಲಭ್ಯವಾಗಿದೆ” ಎಂದು ಆಶ್ಚರ್ಯ ವ್ಯಕ್ತಪಡಿಸಿತು. ಅಲ್ಲದೆ, ”ಇದು ಸಮಾನತೆ ಹಕ್ಕಿಗೆ ವಿರುದ್ಧವಲ್ಲವೇ? ಖಾಸಗಿ ಆಸ್ಪತ್ರೆಗಳಿಗೆ ಆದೇಶ ನೀಡಲು ಸಾಧ್ಯವೇ ಎಂಬ ಕುರಿತು ಗುರುವಾರ ನಿಲುವು ತಿಳಿಸಬೇಕು” ಎಂದು ಅಡ್ವೊಕೇಟ್ ಜನರಲ್‌ಗೆ ಸೂಚಿಸಿತು.
”ಖಾಸಗಿಯವರಿಗೆ ಶೇ.25ಕ್ಕಿಂತ ಹೆಚ್ಚು ಡೋಸ್ ಲಸಿಕೆ ಲಭ್ಯವಾಗದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹಣವಿದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಡೋಸ್ ಲಸಿಕೆ ಪಡೆದು ನಂತರ ಸರಕಾರದಿಂದ ಎರಡನೇ ಡೋಸ್ ಪಡೆಯುತ್ತಾರೆ. ಹಣವಿಲ್ಲದವರು ಮೊದಲ ಡೋಸ್ ಪಡೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ” ಎಂದು ಸೂಚ್ಯವಾಗಿ ಎಚ್ಚರಿಸಿತು.
ಕರ್ನಾಟಕ ರಾಜ್ಯ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಎಂ. ಪ್ರಸನ್ನ, ”18 ರಿಂದ 44 ವರ್ಷದೊಳಗಿನವರೂ ಸೇರಿ ಮೊದಲೇ ನೋಂದಣಿ ಮಾಡಿಕೊಂಡ ಎಲ್ಲ ವಯೋಮಾನದವರಿಗೂ ಲಸಿಕೆ ನೀಡಲಾಗುತ್ತಿದೆ. ವಯೋಮಾನದ ಆಧಾರದಲ್ಲಿ ಲಸಿಕೆ ನೀಡುವುದನ್ನು ತಡೆಯಲಾಗದು” ಎಂದರು.