Yaas Cyclone: ಚಂಡಮಾರುತದಿಂದ ತತ್ತರಿಸಿದರೂ ಬೇರೆ ರಾಜ್ಯಗಳಿಗೆ ಆಕ್ಸಿಜನ್​ ಪೂರೈಕೆ ನಿಲ್ಲಿಸದ ಒಡಿಶಾ

ಒಡಿಶಾ(ಮೇ 27): ಯಾಸ್​ ಚಂಡಮಾರುತದ(Yaas Cyclone) ಹೊಡೆತಕ್ಕೆ ಸಿಕ್ಕ ಕೆಲ ರಾಜ್ಯಗಳು ಅಕ್ಷರಶಃ ನಲುಗಿವೆ. ಆ ಸಾಲಿಗೆ ಒಡಿಶಾ ಕೂಡ ಸೇರ್ಪಡೆಯಾಗುತ್ತದೆ. ಯಾಸ್​ ಚಂಡಮಾರುತದ ಆರ್ಭಟಕ್ಕೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಪರಿಸ್ಥಿರಿ ಹೀಗಿದ್ದರೂ ಸಹ ಒಡಿಶಾ ರಾಜ್ಯ ಸರ್ಕಾರ ಕೋವಿಡ್​ ಪೀಡಿತ ರಾಜ್ಯಗಳಿಗೆ ಪ್ರಾಣವಾಯು ಪೂರೈಕೆ ಮಾಡುವುದನ್ನು ನಿಲ್ಲಿಸಿಲ್ಲ. ಹೌದು, ಸೈಕ್ಲೋನ್ ದಾಳಿಗೆ ಸಿಕ್ಕಿ ತತ್ತರಿಸಿದ್ದರೂ ಸಹ ಕೊರೋನಾ ಹೊಡೆತಕ್ಕೆ ಸಿಕ್ಕಿ ನಲುಗಿರುವ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಅಡ್ಡಿ ಮಾಡಿಲ್ಲ. ನಿಯಮಿತವಾಗಿ ಪೂರೈಕೆ ಮಾಡುತ್ತಾ ಬಂದಿದೆ.

ಒಡಿಶಾ ಪೊಲೀಸ್ ಎಡಿಜಿ ಯಶ್ವಂತ್​ ಕುಮಾರ್​ ಜೆಥ್ವಾ ಇಂಡಿಯಾ ಟುಡೇ ಜೊತೆ ಮಾತನಾಡಿ, ಬೇರೆ ರಾಜ್ಯಗಳಿಗೆ ಆಕ್ಸಿಜನ್​ ಟ್ಯಾಂಕರ್​​ಗಳನ್ನು ಸಾಗಿಸುವುದರ ಜೊತೆಗೆ, ಒಡಿಶಾದ ಆಸ್ಪತ್ರೆಗಳಿಗೂ ಸಹ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜ್ಯ ಪೊಲೀಸರು ಸಹ ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಳೆ, ಗಾಳಿಯಿಂದಾಗಿ ಹೆದ್ದಾರಿಯಲ್ಲಿ ಮರಗಳು ಹಾಗೂ ವಿದ್ಯುತ್​ ಕಂಬಗಳು ಬೀಳುತ್ತಿವೆ. ಇವುಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ದುರ್ಬಲ ಜಿಲ್ಲೆಗಳಲ್ಲಿ ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆ(ಒಡಿಆರ್​​ಎ​​​​ಎಫ್​​)ಯ ಸುಮಾರು 60 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎಡಿಜಿ ಹೇಳಿದ್ದಾರೆ.

ಆಕ್ಸಿಜನ್​ ಪೂರೈಕೆಗೆ ಸುಧಾರಿತ ಯೋಜನೆ ಮಾಡಲಾಗಿದ್ದು, ಎಸ್​ಒಪಿಯನ್ನು ಸಿದ್ದಪಡಿಸಲಾಗಿದೆ. ಆಮ್ಲಜನಕ ಉತ್ಪಾದನಾ ಕೇಂದ್ರಗಳು, ಟ್ಯಾಂಕರ್​ಗಳು, ಚಾಲಕರು ಹಾಗೂ ಇತರೆ ಸಿಬ್ಬಂದಿಯ ಸುರಕ್ಷತೆ ಬಗ್ಗೆ ಗಮನ ವಹಿಸಲಾಗಿದೆ ಎಂದೂ ಸಹ ಅವರು ಹೇಳಿದರು.

ಬುಧವಾರ ನಾಲ್ಕು ಆಕ್ಸಿಜನ್​ ಟ್ಯಾಂಕರ್​​ಗಳನ್ನು ಅಂಗುಲ್​​ನಿಂದ ಹೈದ್ರಾಬಾದ್​ ಮತ್ತು ವಿಶಾಖಪಟ್ಟಣಂಗಳಿಗೆ ಕಳುಹಿಸಲಾಗಿದೆ. ಒಡಿಶಾದಲ್ಲಿ ಎರಡು ಆಕ್ಸಿಜನ್ ಟ್ಯಾಂಕರ್​ಗಳನ್ನು ಜಜ್ಪುರದಿಂದ ಬೆರ್ಹಾಂಪುರ ಮತ್ತು ಭುವನೇಶ್ವರ್​​​ಗೆ ಒಡಿಶಾ ಪೊಲೀಸರ ಕಣ್ಗಾವಲಿನಲ್ಲಿ ಕಳುಹಿಸಿಕೊಡಲಾಗಿದೆ. ಎಲ್ಲಾ ನಿಗದಿನ ಆಕ್ಸಿಜನ್​ ಟ್ಯಾಂಕರ್​ಗಳನ್ನು ಯಾವುದೇ ಅಡೆತಡೆ ಇಲ್ಲದೇ ನಿಗದಿತ ಸ್ಥಳಗಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ ಎಂದರೆ, ಕಳೆದ 34 ದಿನಗಳಲ್ಲಿ ಒಡಿಶಾ ಪೊಲೀಸರು(Odisha Police) 22542.895 ಮೆಟ್ರಿಕ್ ಟನ್​ ಆಕ್ಸಿಜನ್​​ನ್ನು ಆಮ್ಲಜನಕ ಕೊರತೆ ಇರುವ ರಾಜ್ಯಗಳಿಗೆ ಮೀಸಲಾದ ಹಸಿರು ಕಾರಿಡಾರ್(Green Corridor) ಮೂಲಕ ಲೋಡ್ ಮಾಡಲು ಸಾಗಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.7 ದಿನಗಳ ಪರಿಹಾರ ಘೋಷಿಸಿದ ಸಿಎಂ ನವೀನ್ ಪಟ್ನಾಯಕ್

ಯಾಸ್​ ಚಂಡಮಾರುತದ ಹೊಡೆತಕ್ಕೆ ಸಿಕ್ಕಿ ನಲುಗಿರುವ ಪ್ರದೇಶದ ಜನರಿಗೆ 7 ದಿನಗಳ ಪರಿಹಾರವನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್​ ಘೋಷಣೆ ಮಾಡಿದ್ದಾರೆ. ಯಾಸ್​ ಚಂಡಮಾರುತದಿಂದ ಹಾನಿಗೊಳಗಾದ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಿರುವ 128 ಹಳ್ಳಿಗಳಿಗೆ 7 ದಿನಗಳ ಪರಿಹಾರವನ್ನು ನೀಡುವುದಾಗಿ ಹೇಳಿದ್ದಾರೆ.

ಯಾಸ್​ ಚಂಡಮಾರುತದ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಸೈಕ್ಲೋನ್​ನಿಂದ ಹಾನಿಗೊಳಗಾದ ಎಲ್ಲಾ ಪ್ರಮುಖ ರಸ್ತೆಗಳನ್ನು ದುರಸ್ತಿ ಮಾಡಲು ಹಾಗೂ ಸೈಕ್ಲೋನ್ ಪೀಡಿತ ಜಿಲ್ಲೆಗಳಲ್ಲಿ ಶೇ.80ರಷ್ಟು ವಿದ್ಯುತ್​ ಸರಬರಾಜನ್ನು ಮುಂದಿನ 24 ಗಂಟೆಗಳಲ್ಲಿ ಮರುಸ್ಥಾಪಿಸುವಂತೆ ಸಿಎಂ ನವೀನ್ ಪಟ್ನಾಯಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನು, ಕರಾವಳಿ ತೀರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರನ್ನು ಸಮಯಕ್ಕೆ ಸರಿಯಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅತ್ಯುತ್ತಮ ಕಾರ್ಯ ಮಾಡಿದ ಪಂಚಾಯತ್​ ಪ್ರತಿನಿಧಿಗಳು, ಜಿಲ್ಲಾಡಳಿತ, ಸಮುದಾಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯನ್ನು ಸಿಎಂ ಅಭಿನಂದಿಸಿದರು. ಇದೇ ವೇಳೆ, ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ನಿರಂತರ ಆರೋಗ್ಯ ಸೇವೆ ಮಾಡಿದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಿಎಂ ನವೀನ್ ಪಟ್ನಾಯಕ್​ ಧನ್ಯವಾದಗಳನ್ನು ತಿಳಿಸಿದರು.

ಮುಂದಿನ 12 ಗಂಟೆಗಳಲ್ಲಿ ಯಾಸ್ ಚಂಡಮಾರುತವು 100-110 ಕಿ.ಮೀ.ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಜೊತೆಗೆ ಮಯೂರ್ಭಂಜ್​ ಜಿಲ್ಲೆಯಲ್ಲಿ ಚಂಡಮಾರುತ ವೇಗ ಪಡೆದುಕೊಳ್ಳಲಿದ್ದು, ಅಪ್ಪಳಿಸುವ ಸಾಧ್ಯತೆ ಹೆಚ್ಚಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *