Mehul Choski: ಮೆಹುಲ್ ಚೋಕ್ಸಿ ಭಾರತದ ನಾಗರಿಕನಲ್ಲ, ಹಾಗಾಗಿ ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಸಾಧ್ಯವಿಲ್ಲ?; ಮತ್ತಷ್ಟು ಬಿಕ್ಕಟ್ಟು
ಬ್ಯಾಂಕುಗಳಿಗೆ ಬಹುಕೋಟಿ ವಂಚಿಸಿ ತಲೆಮರೆಸಿಕೊಂಡಿದ್ದ ಡೈಮಂಡ್ ಉದ್ಯಮಿ ಮೆಹುಲ್ ಚೋಕ್ಸಿಯನ್ನು(Mehul Choksi) ದ್ವೀಪ ರಾಷ್ಟ್ರವಾದ ಡೊಮಿನಿಕಾ(Dominica)ದಲ್ಲಿ ಬಂಧಿಸಿದ ಬಳಿಕ, ಆಂಟಿಗುವಾ ಮತ್ತು ಬಾರ್ಬುಡಾದ ಪ್ರಧಾನ ಮಂತ್ರಿ ಗ್ಯಾಸ್ಟನ್ ಬ್ರೌನ್ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ವಾಪಸ್ ಕಳುಹಿಸುವಂತೆ ಡೊಮೊನಿಕಾಗೆ ವಿನಂತಿಸಿದ್ದೇವೆ ಎಂದು ಹೇಳಿದ್ದರು. ಆದರೆ, ಚೋಕ್ಸಿಯ ವಕೀಲ ವಿಜಯ್ ಅಗರ್ವಾಲ್, ತನ್ನ ಕಕ್ಷಿದಾರ ಇನ್ನು ಮುಂದೆ ಭಾರತೀಯ ಪ್ರಜೆಯಲ್ಲ. ಜೊತೆಗೆ ಈಗ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ, ಚೋಕ್ಸಿ ಭಾರತಕ್ಕೆ ವಾಪಸ್ಸಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ಡೊಮಿನಿಕಾ ಸರ್ಕಾರದ ಹೇಳಿಕೆಯು ಚೋಕ್ಸಿಯನ್ನು ಆಂಟಿಗುವಾಕ್ಕೆ ವಾಪಸ್ ಕಳುಹಿಸಬಹುದೆಂದು ಸೂಚಿಸುತ್ತಿದೆ.
ಎಎನ್‌ಐ ಸುದ್ದಿಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಬ್ರೌನ್, ಡೊಮಿನಿಕಾ ಸರ್ಕಾರವು ಆಂಟಿಗುವಾ ಮತ್ತು ಭಾರತ ಸರ್ಕಾರಗಳೊಂದಿಗೆ ಸಹಕರಿಸುತ್ತಿದೆ. ಮೆಹುಲ್ ಚೋಕ್ಸಿ ಆಂಟಿಗುವಾದಲ್ಲಿ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಹೊಂದಿದ್ದಾರೆ. ಆದರೆ ಆಂಟಿಗುವಾಕ್ಕೆ ಚೋಕ್ಸಿಯನ್ನು ವಾಪಸ್ ಕಳುಹಿಸದಂತೆ ನಾವು ಡೊಮಿನಿಕಾ ಕಾನೂನು ಜಾರಿ ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ. ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ವಾಪಸ್ ಕಳುಹಿಸಲು ಭಾರತೀಯ ಕಾನೂನು ಜಾರಿ ಸಂಸ್ಥೆಗಳು ಅಗತ್ಯ ವ್ಯವಸ್ಥೆ ಮಾಡಬೇಕೆಂದು ನಾವು ವಿನಂತಿ ಮಾಡಿದ್ದೇವೆ ಎಂದು ಹೇಳಿದರು.
ಡೊಮಿನಿಕಾದ ರಾಷ್ಟ್ರೀಯ ಭದ್ರತಾ ಸಚಿವಾಲಯ ಮತ್ತು ಗೃಹ ಸಚಿವಾಲಯ ಹೇಳುವ ಪ್ರಕಾರ, ಅಕ್ರಮ ಪ್ರವೇಶ ಮಾಡಿದ್ದರಿಂದ ಚೋಕ್ಸಿಯನ್ನು ಬಂಧಿಸಲಾಗಿತ್ತು. ಜೊತೆಗೆ ಮೆಹುಲ್ ಚೋಕ್ಸಿಯ ಪೌರತ್ವವನ್ನು ಖಚಿತಪಡಿಸಿಕೊಳ್ಳಲು ಆಂಟಿಗುವಾ ಮತ್ತು ಬಾರ್ಬುಡಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಂಟಿಗುವಾ ಅಧಿಕಾರಿಗಳು ಮಾಹಿತಿ ಒದಗಿಸಿದ ಬಳಿಕ, ಮೆಹುಲ್ ಚೋಕ್ಸಿಯನ್ನು ಆಂಟಿಗುವಾಕ್ಕೆ ವಾಪಸ್ ಕಳುಹಿಸಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಸಾವಿರಾರು ಕೋಟಿ ರೂ. ವಂಚಿಸಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಮಂಗಳವಾರ ರಾತ್ರಿ ದ್ವೀಪ ರಾಷ್ಟ್ರ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಈ ಹಿಂದೆ ಆಂಟಿಗುವಾ ಮತ್ತು ಬಾರ್ಬುಡಾದಿಂದಲೂ ಚೋಕ್ಸಿ ದಿಢೀರ್ ನಾಪತ್ತೆಯಾಗಿದ್ದ. ಚೋಕ್ಸಿ ವಿರುದ್ಧ ಇಂಟರ್‌ಪೋಲ್ ಯೆಲ್ಲೋ ನೋಟಿಸ್ ಜಾರಿಗೊಳಿಸಿತ್ತು. ಈತನ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದರು. ಮಂಗಳವಾರ ರಾತ್ರಿ ಚೋಕ್ಸಿ ಬೋಟ್ ನಲ್ಲಿ ಪರಾರಿಯಾಗುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಚೋಕ್ಸಿ ಸೋಮವಾರ ಸಂಜೆ ದ್ವೀಪದ ದಕ್ಷಿಣ ಭಾಗದಲ್ಲಿರುವ ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಹೋಗಲು ತಮ್ಮ ಮನೆಯಿಂದ ಹೊರಟರು. ಆಮೇಲೆ ಅವರು ಕಾಣಿಸಿಕೊಂಡಿಲ್ಲ. ಅವರ ವಾಹನವು ನಂತರ ಪತ್ತೆಯಾಗಿದೆ. ಆದರೆ ಅವರ ಯಾವುದೇ ಸುಳಿವು ಇಲ್ಲ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿದ್ದವು. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ಮೆಹುಲ್ ಚೋಕ್ಸಿ ದೀರ್ಘಕಾಲದ ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.
ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದಿರುವ ಚೋಕ್ಸಿ 2018 ರಿಂದ ಅಲ್ಲಿಯೇ ವಾಸ್ತವ್ಯ ಹೂಡಿದ್ದ. ಭಾರತದಿಂದ ಯೆಲ್ಲೋ ಕಾರ್ನರ್ ನೊಟೀಸ್ ಜಾರಿಯಾದ ನಂತರ, ದೇಶಬಿಟ್ಟು ಪರಾರಿಯಾಗಲು ಚೋಕ್ಸಿ ಯತ್ನಿಸಿದರೆ ಪೌರತ್ವ ಹಿಂಪಡೆಯುವುದಾಗಿ ಆಂಟಿಗುವಾ ಹೇಳಿತ್ತು. ಮೇಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಇಬ್ಬರೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದ ರೂ. 13,500 ಕೋಟಿ ಸಾಲ ಪಡೆದು ವಂಚಿಸಿದ್ದರು. ಜಾರಿ ನಿರ್ದೇಶನಾಲಯಕ್ಕೆ ವಂಚನೆಯ ವಾಸನೆ ಬಂದ ತಕ್ಷಣ ಇಬ್ಬರೂ ದೇಶ ಬಿಟ್ಟು ಕಾಲ್ಕಿತ್ತಿದ್ದರು. ಸದ್ಯ ನೀರವ್ ಮೋದಿ ಇಂಗ್ಲೆಂಡ್ನ ಜೈಲಿನಲ್ಲಿದ್ದು, ಕೋರ್ಟ್ ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದೆ. ಆದರೆ ನೀರವ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿದ್ದಾರೆ.