Coronavirus Chitradurga: ಚಿತ್ರದುರ್ಗ ತಾಲ್ಲೂಕಿನ 138 ಹಳ್ಳಿಗಳಲ್ಲಿ ಕೊರೋನಾ ಸೋಂಕು: ಗ್ರಾಮಗಳತ್ತ ಜಿಲ್ಲಾಡಳಿತ

ಚಿತ್ರದುರ್ಗ(ಮೇ 28): ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿನ ತೀವ್ರತೆ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಚಿತ್ರದುರ್ಗ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿದೆ. ಆರೋಗ್ಯ ಇಲಾಖೆಯ ಮಾಹಿತಿ  ಪ್ರಕಾರ ಚಿತ್ರದುರ್ಗ ತಾಲ್ಲೂಕಿನ 138 ಹಳ್ಳಿಗಳಿಗೂ ಕೋವಿಡ್ ಸೋಂಕು ವ್ಯಾಪಿಸಿದೆ. ಮೇ 03 ರಿಂದ ಇಲ್ಲಿಯವರೆಗೆ 783 ಪ್ರಕರಣಗಳು ವರದಿಯಾಗಿದ್ದು, 407 ಪ್ರಕರಣಗಳು ಸಕ್ರಿಯವಾಗಿವೆ.

ಚಿತ್ರದುರ್ಗ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಾದ ಪಿಳ್ಳೇಕೆರೆನಹಳ್ಳಿ, ಮದಕರಿಪುರ, ಸೀಬಾರ, ತುರುವನೂರು, ಜಿ.ಆರ್.ಹಳ್ಳಿ, ಕ್ಯಾಸಾಪುರ, ಬೆಳಗಟ್ಟ, ಪಂಡರಹಳ್ಳಿ, ಹಿರೇಗುಂಟನೂರು, ಕಾಲ್ಗೆರೆ, ಡಿ.ಎಸ್.ಹಳ್ಳಿ, ಭೀಮಸಮುದ್ರ, ಕಾಸವರಹಟ್ಟಿ, ವಿಜಯಪುರ, ಸಿ.ಜಿ.ಹಳ್ಳಿ, ಗೊಡಬನಾಳ್ ಗ್ರಾಮಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದೆ. ನಗರದ ಪ್ರದೇಶಗಳಲ್ಲಿ ಮಾತ್ರವೇ ಹೆಚ್ಚಿದ್ದ ಕೋವಿಡ್ ಸೋಂಕು ಇದೀಗ ಹಳ್ಳಿ ಹಳ್ಳಿಗೂ ಸೋಂಕು ವ್ಯಾಪಿಸಿದ್ದು, ತಾಲ್ಲೂಕಿನ ಕೆಲವೊಂದು ಭಾಗದಲ್ಲಿ ಮನೆ ಮಂದಿಯೆಲ್ಲಾ ಸೋಂಕಿಗೆ ತುತ್ತಾಗಿರುವ ಉದಾಹರಣೆಗಳಿವೆ.

ಸದ್ಯ ಕೊರೋನಾ ಸೋಂಕಿತರಲ್ಲಿ ಕೆಲವರು ಹೋಂ ಐಸೋಲೇಷನ್, ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಮತ್ತು ಚಿತ್ರದುರ್ಗ ನಗರದ ವಿವಿಧೆಡೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶರವೇಗದಲ್ಲಿ ಹರಡುತ್ತಿರುವ ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಳ್ಳಿಗಳತ್ತ ಮುಖ ಮಾಡಿ, ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ  ನೀಡಲಾಗಿದೆ.

ಇನ್ನೂ ಪ್ರತಿ ದಿನವೂ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡುವುದು, ಕೋವಿಡ್ ಸೋಂಕಿನ ಚೈನ್ ಕಟ್ ಮಾಡೋಕೆ ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.

ಜಿಲ್ಲೆಯಲ್ಲಿ ಈಗಾಗಲೇ ದಿನ ಬಿಟ್ಟು ದಿನ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಕೋವಿಡ್ ಸೋಂಕಿತರಿಗಾಗಿ ಜಿಲ್ಲೆಯಾದ್ಯಂತ ವಿವಿಧೆಡೆ ಹಾಸ್ಟೆಲ್‍ಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕೋವಿಡ್ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಹೋಂ ಐಸೋಲೇಷನ್ ಬದಲಾಗಿ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್​ಗೆ ಸೋಂಕಿತರನ್ನು ಶಿಫ್ಟ್ ಮಾಡಲಾಗುತ್ತಿದೆ.

ಇನ್ನೂ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ, ಅದರಲ್ಲೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಕೋವಿಡ್ ಸೋಂಕು ವ್ಯಾಪಿಸಿದ್ದು, ಗ್ರಾಮೀಣ ಜನರು ಕೋವಿಡ್‍ನಿಂದ ರಕ್ಷಣೆ ಪಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಡಿಸಿ ಕವಿತಾ ಎಸ್. ಮನ್ನಿಕೇರಿ ಮನವಿ ಮಾಡಿದ್ದಾರೆ.

 

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *