Joe Biden: ಕೊರೋನಾ ಸೋಂಕಿನ ಮೂಲವನ್ನು ಪತ್ತೆಹಚ್ಚಿ; ಅಮೆರಿಕ ಗುಪ್ತಚರ ಇಲಾಖೆಗೆ ಜೋ ಬೈಡನ್ ಆದೇಶ
ವಾಷಿಂಗ್ಟನ್ ; 2019 ರ ನವೆಂಬರ್ ವೇಳೆಗೆ ಚೀನಾದ ವುಹಾನ್ ನಗರದ ಮಾಂಸದ ಮಾರುಕಟ್ಟೆಯಲ್ಲಿ ಹುಟ್ಟಿದ ಕೊರೋನಾ ವೈರಸ್ ಇದೀಗ ಇಡೀ ವಿಶ್ವವನ್ನೇ ಹೆಮ್ಮಾರಿಯಂತೆ ಕಾಡುತ್ತಿದೆ. ಈ ನಡುವೆ ಕಳೆದ ವರ್ಷ 2020 ರ ಹೊತ್ತಿನಲ್ಲಿ ಅಂದಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಕೊರೋನಾ ವೈರಸ್ ಅನ್ನು ಚೈನೀಸ್ ವೈರಸ್ ಎಂದು ಕರೆಯುವ ಮೂಲಕ ವೈರಸ್ಸಿನ ಮೂಲವನ್ನು ತನ್ನ ಪ್ರತಿಸ್ಪರ್ಧಿ ಚೀನಾದ ಕಡೆ ತಿರುಗಿಸಿತ್ತು. ಹಲವಾರು ವಿಜ್ಞಾನ ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ವೈರಸ್ ಅಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದರೂ ಸಹ ವಿಶ್ವದ ಕೆಲ ದೇಶಗಳಿಗೆ ಚೀನಾದ ಮೇಲೆ ಅನುಮಾನ ಇದ್ದೇ ಇತ್ತು. ಆದರೆ, ಈ ಎಲ್ಲಾ ಅನುಮಾನಗಳಿಗೂ ಪುಷ್ಠಿ ನೀಡುವಂತೆ ಇಂದು ಅಮೆರಿಕದ ಗುಪ್ತಚರ ಇಲಾಖೆಗೆ ಮಹತ್ವದ ಆದೇಶ ನೀಡಿರುವ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್, ಕೊರೋನಾ ಸೋಂಕಿನ ಮೂಲವನ್ನು ಶೀಘ್ರದಲ್ಲಿ ಪತ್ತೆಹಚ್ಚುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.
ಕೊರೋನಾ ವೈರಸ್ ಸಾಂಕ್ರಾಮಿಕವು ಅರ್ಧದಷ್ಟು ದೇಶಗಳನ್ನು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಕೋವಿಡ್ ವೈದ್ಯಕೀಯ ವಿಪತ್ತಿನಿಂದ ಜಗತ್ತಿನ ಅರ್ಧದಷ್ಟು ಜನ ತಮ್ಮ ಜೀವ ಕೈಯಲ್ಲಿ ಹಿಡಿದು ಜೀವಿಸುತ್ತಿದ್ದಾರೆ. ಅಮೆರಿಕಾ, ಯುರೋಪ್, ಚೀನಾ, ಭಾರತ ಸೇರಿ ಜಗತ್ತಿನ ಎಲ್ಲ ಆರ್ಥಿಕ ಕ್ಷೇತ್ರಗಳು ಮತ್ತೆ ಚೇತರಿಸಿಕೊಳ್ಳಲಾದ ಸ್ಥಿತಿಗೆ ತಲುಪಿವೆ. ಉತ್ಪಾದನಾ ವಲಯ ಕಳೆದ ನೂರು ವರ್ಷಗಳಲ್ಲೆ ಅತ್ಯಂತ ಕನಿಷ್ಠಮಟ್ಟಕ್ಕೆ ಇಳಿದಿದೆ.
ನಿರುದ್ಯೋಗ ಮತ್ತು ಹಸಿವೆ ಕೊರೋನಾ ನೀಡಿದ ಬಳುವಳಿಯಾಗಿ ಜನರ ಬಳಿ ಉಳಿದಿದೆ. ಜಗತ್ತಿನ ಜನರ ಜೀವದ ಜೊತೆ ಚೆಲ್ಲಾಟವಾಡುತ್ತ, ಅಲೆಯ ಮೇಲೆ ಮತ್ತೊಂದು ಅಲೆಯಾಗಿ ಇನ್ನಷ್ಟು ತೀವ್ರ ಸ್ವರೂಪ ಪಡೆದು ಮುನ್ನುಗ್ಗುತ್ತಿರುವ ವೈರಾಣುವಿನ ಮೂಲ ಯಾವುದು..? ವೈದ್ಯ ವಿಜ್ಞಾನದ ಅತ್ಯಂತ ಕಠಿಣ ಸವಾಲಾಗಿರುವ ಈ ಪ್ರಶ್ನೆಯ ಉತ್ತರ ಮಾತ್ರ ಇದುವರೆಗೆ ದೊರೆತಿಲ್ಲ. ನಾನಾ ಸಿದ್ಧಾಂತಗಳು, ಸಂಶೋಧನೆಗಳು ಒಂದಕ್ಕಿಂತ ಒಂದು ನಿಗೂಢ ಮತ್ತು ಸ್ವಾರಸ್ಯಕರ ಊಹೆ ಮತ್ತು ಆಧಾರಗಳನ್ನು ಹೊರತು ಪಡಿಸಿದರೆ ಸೋಂಕಿನ ಮೂಲದ ಕುರಿತಾಗಿ ಅಧಿಕೃತ ಉತ್ತರವನ್ನು ನೀಡಲು ವೈದ್ಯ ಜಗತ್ತು ಇಂದಿಗೂ ತಡಕಾಡುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಚೀನಾವನ್ನಾಗಲಿ, ಅಮೆರಿಕಾವನ್ನಾಗಲಿ ಅಥವಾ ಜಗತ್ತಿನ ಇನ್ನಾವುದೇ ದೇಶವನ್ನು ಕೊರೋನಾ ಸೋಂಕಿನ ಮೂಲವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಧಿಕೃತ ಪಡಿಸಿತ್ತು. WHO ಸ್ಪಷ್ಟನೆಯ ನಂತರ ಯಾವ ದೇಶಗಳೂ ಕೊರೋನಾ ವೈರಸ್ ನ ಮೂಲವನ್ನು ಹುಡುಕುವ ಸಾಹಸಕ್ಕೆ ಮುಂದಾಗಿರಲಿಲ್ಲ. ಎಲ್ಲರ ಗಮನ ಸೋಂಕಿನ ನಿಯಂತ್ರಣ ಮತ್ತು ಲಸಿಕೆಯನ್ನು ಕಂಡು ಹಿಡಿಯುವುದರ ಕಡೆ ತಿರುಗಿತು. ಅಮೆರಿಕಾ ಮಾತ್ರ ಸದ್ದಿಲ್ಲದೇ ತನ್ನದೇ ರೀತಿಯಲ್ಲಿ ಗೌಪ್ಯವಾಗಿ ಸೋಂಕಿನ ಮೂಲವನ್ನು ಪತ್ತೆ ಹಚ್ಚುವ ತನಿಖೆಯನ್ನು ಮುಂದುವರೆಸಿತ್ತು. ಕುಂಟುತ್ತ ಸಾಗುತ್ತಿದ್ದ ಕೊರೋನಾ ಮೂಲದ ರಹಸ್ಯ ತನಿಖೆಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಚುರುಕು ನೀಡುವ ಮೂಲಕ ಈಗ ಮತ್ತೊಮ್ಮೆ ಸೋಂಕಿನ ಮೂಲದ ಚರ್ಚೆಗೆ ನಾಂದಿ ಹಾಡಿದ್ದಾರೆ.
ಕೊರೊನಾ ತನಿಖೆ ತೀವ್ರಗೊಳಿಸಲು ಆದೇಶಿದ ಪ್ರೆಸಿಡೆಂಟ್ ಬೈಡನ್ ಹೇಳಿದ್ದೇನು ?
ಕೊರೋನಾ ವೈರಸ್ನ ಮೂಲವನ್ನು ಪತ್ತೆ ಹಚ್ಚಲು ಅಮೆರಿಕಾ ಯಾವಾಗಲೂ ಬದ್ದವಾಗಿದೆ. ಜಗತ್ತಿನ ಆರೋಗ್ಯ ವ್ಯವಸ್ಥೆಗೆ ದೊಡ್ಡ ಪಿಡುಗಾಗಿ ಪರಿಣಮಿಸಿರುವ ಸಾಂಕ್ರಾಮಿಕದ ಮೂಲವನ್ನು ಪತ್ತೆ ಹಚ್ಚಿ ವೈರಸ್ ಮಾನವ ನಿರ್ಮಿತವೇ ಅಥವಾ ಪ್ರಕೃತಿಯ ಜೀವ ರಾಸಾಯನಿಕ ಕ್ರಿಯೆಗಳ ಮೂಲಕ ಹುಟ್ಟಿಕೊಂಡಿದ್ದೆ ಎಂದು ಕಂಡುಕೊಳ್ಳುವುದು 21 ನೇ ಶತಮಾನದ ಮಹತ್ವದ ಸಂಶೋಧನೆಗಳಲ್ಲಿ ಒಂದಾಗಿದೆ. ಅಮೆರಿಕಾದ ತನಿಖೆ ಈ ನಿಟ್ಟಿನಲ್ಲಿಯೇ ಮುಂದುವರೆಯಲಿದ್ದು ಚೀನಾ ಕೂಡ ಅಮೆರಿಕಾದ ತನಿಖೆಯಲ್ಲಿ ಭಾಗವಹಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಬೈಡನ್ ಬುಧವಾರ (ಮೇ 26) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚೀನಾದ ವುಹಾನ್ ನಗರದ ಜೀವ ರಾಸಾಯನಿಕ ಪ್ರಯೋಗವೊಂದರಲ್ಲಿ ಕೊರೋನಾ ವೈರಸ್ ಸೃಷ್ಟಿಯಾಗಿದೆ ಎಂಬ ಬಲವಾದ ಆಯಾಮವೂ ನಮ್ಮ ಮುಂದಿದೆ. ವೂಹಾನ್ ಲ್ಯಾಬ್ ಆಯಾಮದಲ್ಲೂ ಅಮೆರಿಕನ್ ತನಿಖಾ ಏಜೆನ್ಸಿಗಳು ಸಂಶೋಧನೆಯನ್ನು ಮುಂದುವರೆಸಲಿವೆ ಎಂದು ಅಧ್ಯಕ್ಷ ಬೈಡನ್ ತಿಳಿಸಿದ್ದಾರೆ. ಮುಂದಿನ 90 ದಿನಗಳಲ್ಲಿ ತನಿಖೆಗೆ ಪೂರಕವಾದ ಮಾಹಿತಿ ಸಾಕ್ಷಿಗಳನ್ನು ಕಲೆಹಾಕಿ ಒಂದು ಅಂತಿಮವಾದ ಅಧಿಕೃತ ತೀರ್ಮಾನಕ್ಕೆ ಬರುವಂತೆ ಬೈಡನ್ ತಮ್ಮ ತನಿಖಾ ಸಂಸ್ಥೆಗಳಿಗೆ ಆದೇಶಿಸಿದ್ದಾರೆ.
ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಕೊರೊನಾ ಸಾಂಕ್ರಾಮಿಕ ವೈರಸ್ 2019 ಅಂತ್ಯದ ವೇಳೆಗೆ ಮೊಟ್ಟ ಮೊದಲ ಬಾರಿಗೆ ಚೀನಾ ದೇಶದ ವುಹಾನ್ ನಗರದಲ್ಲಿ ಪತ್ತೆಯಾಯಿತು. 2019 ರಿಂದ ಸರಿ ಸುಮಾರು 10 ಕೋಟಿ ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಆಧುನಿಕ ವಿಜ್ಞಾನಕ್ಕೆ ವಿರುದ್ಧವಾಗಿರುವ ಅನೇಕ ವೈರಸ್ ಸಿದ್ಧಾಂತಗಳ ಪ್ರತಿಪಾದನೆಯ ನಂತರವೂ ಇಂದಿಗೂ ಅಮೆರಿಕ ಮತ್ತು ಅದನ್ನು ಬೆಂಬಲಿಸುವ ರಾಷ್ಟ್ರಗಳು ವೈರಸ್ ಕುರಿತಾಗಿ ಪಾರದರ್ಶಕವಾಗಿ ಚೀನಾ ವರ್ತಿಸಿದ್ದರೆ ಇಂದಿನ ಮಹಾ ದುರಂತವನ್ನು ತಪ್ಪಿಸಬಹುದಿತ್ತೆಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ.