Coronavirus India Updates: 45 ದಿನಗಳ ಬಳಿಕ ಮೊದಲ ಬಾರಿಗೆ ದೇಶದಲ್ಲಿ 1 ಮುಕ್ಕಾಲು ಲಕ್ಷಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳು ದಾಖಲು
ನವದೆಹಲಿ(ಮೇ 29): ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿದ್ದ ಕೊರೋನಾ ಎರಡನೇ ಅಲೆ ನಿಧಾನಕ್ಕೆ ಕೊನೆಯಾಗುವ ಲಕ್ಷಣಗಳು ಗೋಚರಿಸತೊಡಗಿವೆ. ಕಳೆದ 45 ದಿನಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದು ಮುಕ್ಕಾಲು ಲಕ್ಷಕ್ಕಿಂತ ಕಡಿಮೆ ಕಂಡುಬಂದಿದ್ದು ಇಂಥದೊಂದು ಆಶಾವಾದ ಮೂಡಿಸಿದೆ. ಸಕ್ರೀಯ ಪ್ರಕರಣಗಳಲ್ಲಿ ಹಾಗೂ ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿರುವುದು ಇದಕ್ಕೆ ಪೂರಕವಾಗಿದೆ.
ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ದೇಶಿಯ ಮತ್ತು ವಿದೇಶಿ ತಜ್ಞರ ಅಭಿಪ್ರಾಯದಂತೆ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಎಂಬ ದಾಖಲೆಯಾಗಿತ್ತು. ನಂತರ ಕೆಳಮುಖವಾಗಿ ಸಾಗಿ ಮೇ 16ರಂದು ಮೊದಲ ಬಾರಿಗೆ ಮೂರು ಲಕ್ಷಕ್ಕೂ ಕಡಿಮೆ ಪ್ರಕರಣಗಳು (2,81,386) ಕಂಡು ಬಂದಿದ್ದವು.
ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು. ಇದರ ಬಳಿಕ ನಿನ್ನೆಯವರೆಗೂ (ಮೇ 28) ದೇಶದಲ್ಲಿ ಒಂದು ಹೆಚ್ಚು ಪ್ರಕರಣಗಳು ಮತ್ತೊಂದು ದಿನ ಕಡಿಮೆ ಕೇಸುಗಳು ಬರುತ್ತಿದ್ದು ಹಾವು ಏಣಿ ಆಟದಂತಾಗಿತ್ತು. ಈಗ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಶುಕ್ರವಾರ 1,73,790 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,77,29,247ಕ್ಕೆ ಏರಿಕೆ ಆಗಿದೆ. ಶುಕ್ರವಾರ 3,617 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,22,512ಕ್ಕೆ ಏರಿಕೆ ಆಗಿದೆ. ಈವರೆಗೆ 2,51,78,011 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿ ಇನ್ನೂ 22,28,724 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ. ಈವರೆಗೆ 20,89,02,445 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ದೇಶದಲ್ಲಿ ಸದ್ಯ ಗುಣಮುಖ ಆದದವರ ಪ್ರಮಾಣ ಶೇಕಡಾ 90.80ಕ್ಕೆ ಏರಿಕೆ ಆಗಿದೆ. ವಾರದ ಪಾಸಿಟಿವಿಟಿ ದರ ಶೇಕಡಾ 9.84ಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಸದ್ಯ ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದು ತಮಿಳುನಾಡಿನಲ್ಲಿ. ಎರಡನೇ ಸ್ಥಾನದಲ್ಲಿ ಕೇರಳ ಇದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಸಂಪೂರ್ಣವಾಗಿ ಚೇತರಿಕೆಯ ಹಾದಿಯಲ್ಲಿರುವ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ನಾಲ್ಕು ರಾಜ್ಯಗಳೂ ದಕ್ಷಿಣ ಭಾರತಕ್ಕೆ ಸೇರಿದವಾಗಿವೆ. ಸಾವಿನ ಸಂಖ್ಯೆಯಲ್ಲಿ ಹಾಗೂ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲೂ ದಕ್ಷಿಣ ಭಾರತದ ರಾಜ್ಯಗಳೇ ಮುಂದೆ ಇವೆ.