ಪುಟ್ ಪಾತ್ ಮೇಲೆ ಶವ ಇಳಿಸಿ ಹೋಗಿದ್ದ ಆ್ಯಂಬುಲೆನ್ಸ್ ಚಾಲಕನ ಸೆರೆ
ಬೆಂಗಳೂರು,ಮೇ.29 ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಸಾಗಿಸಲು 18 ಸಾವಿರ ರೂಗಳನ್ನು ನೀಡಿಲ್ಲ ಎಂದು ಶವವನ್ನು ಪುಟ್ ಪಾತ್ ಮೇಲೆ ಇಳಿಸಿ ಅಮಾನವೀಯತೆ ಮೆರೆದಿದ್ದ ಆ್ಯಂಬುಲೆನ್ಸ್ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ಆ್ಯಂಬುಲೆನ್ಸ್ ಚಾಲಕ ಶರತ್ ಗೌಡ ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಹೆಬ್ಬಾಳ ಚಿತಾಗಾರ ಉಸ್ತುವಾರಿ ಸತೀಶ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿ ನಾಗೇಶ್ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ.
ಕಳೆದ ಮೇ 24 ರಂದು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನುಜ್ ಸಿಂಗ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಹೆಬ್ಬಾಳದ ಚಿತಾಗಾರಕ್ಕೆ ಶವ ಸಾಗಿಸಲು ಕುಟುಂಬಸ್ಥರ ಬಳಿ ಹಣ ಇರಲಿಲ್ಲ. ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ನಾಗೇಶ್, ಆಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಆ್ಯಂಬುಲೆನ್ಸ್ನಲ್ಲಿ ಚಿತಾಗಾರಕ್ಕೆ ಶವ ಸಾಗಿಸಲು ಚಾಲಕ 18 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ.
ಈ ವೇಳೆ 3 ಸಾವಿರ ರೂ.ಹಣ ಹೊಂದಿಸಿ ಉಳಿದ ಹಣ ಕೊಡುವುದಾಗಿ ಮೃತನ ಪತ್ನಿ ಹೇಳಿದ್ದಳು. ಚಿತಾಗಾರದ ಬಳಿ ಬಂದು ಉಳಿದ ಹಣ ಕೊಡುವಂತೆ ಆ್ಯಂಬುಲೆನ್ಸ್ ಚಾಲಕ ಗಲಾಟೆ ಮಾಡಿದ್ದಾನೆ. ಹಣ ನೀಡದಿದ್ದರಿಂದ ಕೊನೆಗೆ ಶವವನ್ನು ಪುಟ್ ಪಾತ್ ಮೇಲೆ ಇಳಿಸಿ ಆ್ಯಂಬುಲೆನ್ಸ್ ಚಾಲಕ ಪರಾರಿಯಾಗಿದ್ದನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.