ಬಾಯಿಮುಕ್ಕಳಿಸುವ ಮೂಲಕ ಕೋವಿಡ್ ಪರೀಕ್ಷೆ: ಹೊಸ ವಿಧಾನಕ್ಕೆ ಐಸಿಎಂಆರ್ ಅನುಮೋದನೆ

ಹೈಲೈಟ್ಸ್‌:

  • ಹೊಸ ವಿಧಾನದ ಪರೀಕ್ಷಾ ಮಾದರಿಗೆ ಐಸಿಎಂಆರ್ ಅನುಮೋದನೆ
  • ಲವಣದೊಂದಿಗೆ ಬಾಯಿಮುಕ್ಕಳಿಸುವ ಮೂಲಕ ಮಾದರಿ ಸಂಗ್ರಹ
  • ಸಾಂಪ್ರದಾಯಿಕ ಆರ್‌ಟಿ-ಪಿಸಿಆರ್‌ಗಿಂತ ಕಡಿಮೆ ಸಮಯ, ಕಡಿಮೆ ವೆಚ್ಚ
  • ದೇಶದೆಲ್ಲೆಡೆ ತರಬೇತಿ ನೀಡಲು ಐಸಿಎಂಆರ್ ಸೂಚನೆ

ಮುಂಬೈ: ಕೋವಿಡ್ ಪರೀಕ್ಷೆಗೆ ಸರಣಿ ಹಾಗೂ ಅಗ್ಗದ ವಿಧಾನವೊಂದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದನೆ ನೀಡಿದೆ. ‘ಲವಣಯುಕ್ತ ಬಾಯಿಮುಕ್ಕಳಿಸುವಿಕೆ ಆರ್‌ಟಿ-ಪಿಸಿಆರ್ ವಿಧಾನ’ ಇದಾಗಿದ್ದು, ಮೂರು ಗಂಟೆಗಳಲ್ಲಿಯೇ ಫಲಿತಾಂಶ ಸಿಗಲಿದೆ.

ಹೆಚ್ಚು ಸುಲಭವಾದ ‘ಸಲೈನ್ ಗಾರ್ಗಲ್’ ಆರ್‌ಟಿ-ಪಿಸಿಆರ್ ವಿಧಾನವನ್ನು ಅಭಿವೃದ್ಧಿಪಡಿಸುವ ಸಂಶೋಧನೆಯಲ್ಲಿ ನಾಗಪುರ ಮೂಲದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಹೊಸ ಮೈಲುಗಲ್ಲು ಸೃಷ್ಟಿಸುವೆ.

ಹೊಸ ಮಾದರಿಯ ಬಗ್ಗೆ ದೇಶದೆಲ್ಲೆಡೆಯ ಲ್ಯಾಬೊರೇಟರಿಗಳಿಗೆ ತರಬೇತಿ ನೀಡಲು ತನ್ನ ತಂಡಗಳನ್ನು ಕಳುಹಿಸುವಂತೆ ‘ನೀರಿ’ಗೆ ಐಸಿಎಂಆರ್ ಅನುಮತಿ ನೀಡಿದೆ.

ವಿಧಾನದ ಪ್ರಕಾರ, ರೋಗಿಯು ಲವಣಯುಕ್ತ ದ್ರಾವಣವನ್ನು ಬಾಯಲ್ಲಿ ಹಾಕಿ ಮುಕ್ಕಳಿಸಬೇಕು (ಗಾರ್ಗಲ್). ಬಳಿಕ ಅದನ್ನು ಸಂಗ್ರಹ ಕೊಳವೆಯೊಳಗೆ ಉಗುಳಬೇಕು. ಸಂಗ್ರಹ ಕೊಳವೆಯಲ್ಲಿನ ಮಾದರಿಯನ್ನು ಲ್ಯಾಬೊರೇಟರಿಗೆ ತೆಗೆದುಕೊಂಡು ಹೋಗಿ, ಅಲ್ಲಿ ‘ನೀರಿ’ ಅಭಿವೃದ್ಧಿಪಡಿಸಿರುವ ವಿಶೇಷ ಬಫರ್ ಸಲ್ಯೂಷನ್‌ನಲ್ಲಿ ಕೋಣೆಯ ತಾಪಮಾನದಲ್ಲಿ ಇರಿಸಬೇಕು. ಸೊಲ್ಯೂಷನ್ ಬಿಸಿಯಾದ ಬಳಿಕ ಆರ್‌ಎನ್‌ಎ ಟೆಂಪ್ಲೇಟ್ ಉತ್ಪತ್ತಿಯಾಗುತ್ತದೆ. ಈ ಸಲ್ಯೂಷನ್ ಅನ್ನು ಆರ್‌ಟಿ-ಪಿಸಿಆರ್ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ.

‘ಮಾದರಿಗಳನ್ನು ಸಂಗ್ರಹಿಸುವ ಈ ನೂತನ ವಿಧಾನವು, ಆರ್‌ಎನ್‌ಎ ಹೊರತೆಗೆಯುವ ಪ್ರಕ್ರಿಯೆಗೆ ಅಗತ್ಯವಿರುವ ದುಬಾರಿ ಮೂಲಸೌಕರ್ಯದ ವೆಚ್ಚವನ್ನು ಉಳಿತಾಯ ಮಾಡುತ್ತದೆ. ಈ ಮಾದರಿಯು ಸ್ವಯಂ ಮಾದರಿಗೆ ಅವಕಾಶ ನೀಡುವುದರಿಂದ ಜನರು ಸ್ವತಃ ಪರೀಕ್ಷೆಗೆ ಒಳಪಡಬಹುದು. ಪರೀಕ್ಷಾ ಕೇಂದ್ರಗಳಲ್ಲಿ ಗುಂಪುಗೂಡುವ ಅಥವಾ ಸರದಿಯಲ್ಲಿ ನಿಂತು ಕಾಯುವ ಅಗತ್ಯವಿರುವುದಿಲ್ಲ. ಹೀಗಾಗಿ ಇದು ಸಮಯ ಉಳಿತಾಯ ಹಾಗೂ

ಕೋವಿಡ್ 19 ಸೋಂಕು ತಗುಲುವ ಅಪಾಯವನ್ನು ತಗ್ಗಿಸುತ್ತದೆ. ಜತೆಗೆ ಈ ವಿಧಾನವು ತ್ಯಾಜ್ಯ ಸೃಷ್ಟಿಯನ್ನೂ ಕಡಿಮೆ ಮಾಡುತ್ತದೆ’ ಎಂದು ‘ನೀರಿ’ಯ ಹಿರಿಯ ವಿಜ್ಞಾನಿ ಡಾ. ಕೃಷ್ಣ ಖೈರ್ನರ್ ತಿಳಿಸಿದ್ದಾರೆ.

‘ಮೂಗು ಹಾಗೂ ಗಂಟಲಿನಿಂದ ಮಾದರಿಗಳನ್ನು ಸಂಗ್ರಹಿಸುವುದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಜತೆಗೆ ಇದು ಆಕ್ರಮಣಕಾರಿ ತಂತ್ರಜ್ಞಾನ. ಇದು ರೋಗಿಗಳಿಗೆ ಹಿತಕರವಾಗಿರುವುದಿಲ್ಲ. ಸಂಗ್ರಹ ಕೇಂದ್ರಕ್ಕೆ ಮಾದರಿಗಳನ್ನು ಸಾಗಿಸುವಾಗ ಸಮಯ ವ್ಯರ್ಥ ವಾಗುತ್ತದೆ. ಇನ್ನೊಂದೆಡೆ ಲವಣಯುಕ್ತ ಬಾಯಿಮುಕ್ಕಳಿಸುವಿಕೆ ಆರ್‌ಟಿ-ಪಿಸಿಆರ್ ತಕ್ಷಣದ, ಹಿತಕರ, ಮತ್ತು ರೋಗಿ ಸ್ನೇಹಿ ಆಗಿರುತ್ತದೆ. ಮಾದರಿ ಸಂಗ್ರಹಣೆ ಕೂಡಲೇ ಆಗುತ್ತದೆ ಮತ್ತು ಮೂರು ಗಂಟೆಗಳ ಒಳಗೆ ಫಲಿತಾಂಶ ಲಭ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *