Chikmagalur Crime: ಹಣ ನೀಡಲಿಲ್ಲವೆಂದು ಮೂಡಿಗೆರೆಯಲ್ಲಿ ಅಪ್ಪನನ್ನು ಕೊಚ್ಚಿ ಕೊಂದ ಪಾಪಿ ಮಗ
ಚಿಕ್ಕಮಗಳೂರು : ಪಾರ್ಶ್ವವಾಯು ಪೀಡಿತನಾಗಿದ್ದ ಅಪ್ಪ ತನಗೆ ಹಣ ನೀಡಲಿಲ್ಲ ಎಂದು ಮಗನೇ ಕೊಡಲಿಯಿಂದ ಹಲ್ಲೆ ಮಾಡಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚನ್ನಹಡ್ಲು ಗ್ರಾಮದ ಸುಂದರ ಪೂಜಾರಿ ಮೃತ ದುರ್ದೈವಿ. ಹೀಗೆ ಮಗನ ಕೊಡಲಿ ಏಟಿಗೆ ಉಸಿರು ಚೆಲ್ಲಿದ್ದು 52 ವರ್ಷದ ಸುಂದರ್ ಪೂಜಾರಿ ಎಂಬ ವ್ಯಕ್ತಿ. ತಂದೆಯ ಬಳಿ ಹಣ ಕೇಳಿದ್ದ ಈ ಪಾಪಿ ಪುತ್ರ ನಿಖೇಶ್, ಹಣ ಕೊಡಲಿಲ್ಲ ಅಂತ ಕೊಡಲಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ.
ಬೆಂಗಳೂರಿನಲ್ಲಿ ಕಾರು ಬಾಡಿಗೆ ಮಾಡ್ಕೊಂಡ್ ಶೋಕಿ ಮಾಡ್ತಿದ್ದ ಈ ದುರುಳ, ಲಾಕ್ ಡೌನ್ ಇದ್ದಿದ್ದರಿಂದ ಮನೆಗೇ ಮರಳಿದ್ದ. ತನ್ನ ಸಹೋದರ, ಸಹೋದರಿ ಬುದ್ದಿಮಾಂದ್ಯರಾಗಿದ್ದರೂ ತಂದೆ ಹಾಸಿಗೆ ಹಿಡಿದಿದ್ದರೂ ಮನೆಯ ಜವಾಬ್ದಾರಿ ತೆಗೆದುಕೊಳ್ಳದ ಈ ನೀಚ, ಅಪ್ಪನ ಬಳಿಯೇ ಹಣ ನೀಡುವಂತೆ ಪೀಡಿಸುತ್ತಿದ್ದ. ನನ್ನ ಬಳಿ ಹಣ ಇಲ್ಲ ಅಂತ ಹೇಳಿದರೂ ಕೇಳದೆ ಅಪ್ಪನನ್ನು ಕೊಡಲಿಯಿಂದ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾನೆ.
ದೊಡ್ಡ ಮಗನೂ ಮನೆಯ ಜವಾಬ್ದಾರಿ ಬಿಟ್ಟು ಬೆಂಗಳೂರು ಬಿದ್ದಾಗ ಧೃತಿಗೆಡದೆ ಆಟೋ ಓಡಿಸಿಕೊಂಡು ಕುಟುಂಬದ ಬೆನ್ನೆಲುಬುವಾಗಿ ನಿಂತಿದ್ದರು ಸುಂದರ್ ಪೂಜಾರಿ. ಆದರೆ ಕಳೆದ ವರ್ಷ ಇದೇ ಸಮಯದಲ್ಲಿ ಮನೆಯ ಆಧಾರಸ್ಥಂಭವಾಗಿದ್ದ ಸುಂದರ್ ಪೂಜಾರಿ ಅವರಿಗೆ ಸ್ಟ್ರೋಕ್ ಹೊಡೆದಿತ್ತು. ಮೊದಲೇ ಎರಡು ಮಕ್ಕಳನ್ನ ನೋಡಿಕೊಳ್ಳಲು ಹರಸಾಹಸ ಪಡ್ತಿದ್ದ ಸುಂದರ್ ಪೂಜಾರಿ, ಪತ್ನಿ ಅರುಣಾ ಮತ್ತಷ್ಟು ಕುಗ್ಗಿಹೋದರು. ಈ ವೇಳೆ ಕುಟುಂಬದ ಕಣ್ಣೀರಿನ ಕಥೆ ಕಂಡು ಕರುನಾಡ ಜನತೆ 3 ಲಕ್ಷಕ್ಕೂ ಅಧಿಕ ಹಣವನ್ನ ನೀಡಿ ಕುಟುಂಬಕ್ಕೆ ಹೆಗಲಾಗಿದ್ದರು. ಈ ದುಡ್ಡಿನ ಮೇಲೆ ಕಣ್ಣಾಕ್ಕಿದ ಹಿರಿಯ ಪುತ್ರ, ಕಳೆದ ಬಾರಿಯೂ ಲಾಕ್ ಡೌನ್ ವೇಳೆಯಲ್ಲಿ ಮನೆಗೆ ಬಂದು, ತಾಯಿಯ ಬಳಿ ಗಲಾಟೆ ಮಾಡಿ ಸ್ವಲ್ಪ ಹಣ ಕಿತ್ತುಕೊಂಡು ಪುನಃ ಬೆಂಗಳೂರಿಗೆ ಹೋಗಿದ್ದ. ಮತ್ತೆ ಅಪ್ಪಿತಪ್ಪಿಯೂ ಮನೆ ಕಡೆ ಮುಖ ಹಾಕದ ಈ ಪಾಪಿ, ರಾಜಧಾನಿಯಲ್ಲಿ ಶೋಕಿ ಜೀವನ ಮಾಡ್ಕೊಂಡು ಎಂಜಾಯ್ ಮಾಡ್ತಿದ್ದ. ಮತ್ತೆ ಲಾಕ್ ಡೌನ್ ಆಗಿದ್ದರಿಂದ ಊರಿಗೆ ಬಂದು ತಂದೆಯ ಜೀವವನ್ನೇ ಬಲಿ ಪಡೆದಿದ್ದಾನೆ.
ಒಂದುಕಡೆ ಕ್ರೂರಿ ಕೊರೊನಾ ಜನರ ಜೀವವನ್ನೇ ಬಲಿ ತೆಗೆದುಕೊಳ್ತಿದ್ರೆ, ಮತ್ತೊಂದೆಡೆ ಅಸಂಖ್ಯ ಜನರ ಜೀವನವನ್ನೇ ಮೂರಾಬಟ್ಟೆ ಮಾಡಿಬಿಟ್ಟಿದೆ. ಅದರಲ್ಲೂ ಈ ಕುಟುಂಬದ ಕಣ್ಣೀರಿನ ಕಥೆ ನೋಡಿದರೆ, ಎಂಥ ಶತ್ರುವಿಗೂ ಕೂಡ ಇಂತಹ ದುಸ್ಥಿತಿ ಬರಬಾರದು ಅನ್ಸುತ್ತೆ. ಮೊದಲೇ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದ ಈ ಕಟುಂಬಕ್ಕೆ ಮನೆಮಗನೇ ಶತ್ರುವಾಗಿ, ಸಾಕಿ ಸಲುಹಿದ ತಂದೆಯನ್ನೇ ಕೊಡಲಿಯಿಂದ ಕೊಚ್ಚಿ ವಿಕೃತಿ ಮೆರೆದಿದ್ದಾನೆ.
ಸದ್ಯ ಬಾಳೂರು ಪೊಲೀಸರು ದುರುಳ ನಿಖೇಶ್ನನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಸ್ಟ್ರೋಕ್ನಿಂದ ಈಗಷ್ಟೇ ಚೇತರಿಸಿಕೊಳ್ತಿದ್ದ ಜೀವವನ್ನು ಬದುಕಲು ಬಿಡದೇ ಬಲಿ ತೆಗೆದುಕೊಂಡ ಪಾಪಿ ಪುತ್ರನಿಗೆ ತಕ್ಕ ಶಿಕ್ಷೆ ಆಗಬೇಕಿದೆ.