PM Narendra Modi: ಸಂಪೂರ್ಣ ನಿಯಂತ್ರಣಕ್ಕೆ ಬಾರದ ಕೊರೋನಾ; ಜೂನ್​ 2ಕ್ಕೆ ಸಿಎಂಗಳ ಸಭೆ ಕರೆದ ಪ್ರಧಾನಿ ಮೋದಿ

ನವದೆಹಲಿ(ಮೇ 29): ಮೊದಲ ಅಲೆಗಿಂತಲೂ ತೀವ್ರವಾಗಿ ದೇಶವನ್ನು ಕಾಡಿ ಕಂಗೆಡಿಸಿರುವ ಕೊರೋನಾ ಎರಡನೇ ಅಲೆ ಕೊನೆಯಾಗಲು ಇನ್ನೂ ಕೆಲ ದಿನಗಳು ಬೇಕಾಗಬಹುದು. ಇನ್ನೂ ಕೆಲವು ಕಟ್ಟು‌ ನಿಟ್ಟಿನ ಕ್ರಮಗಳು ಬೇಕಾಗಬಹುದು. ದೇಶದಲ್ಲಿ ‌ಸದ್ಯ ಪ್ರತಿ ದಿನ ಒಂದು ಮುಕ್ಕಾಲು ಲಕ್ಷದಷ್ಟು ಕೊರೋನಾ ಪೀಡಿತರು ಕಂಡುಬರುತ್ತಿದ್ದಾರೆ. ಸಕ್ರೀಯ ಪ್ರಕರಣಗಳು ಇನ್ನೂ ಕಡಿಮೆ ಆಗಬೇಕಿದೆ. ಕೊರೋನಾದಿಂದ ಸಾಯುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡಿಲ್ಲ. ಈ‌ ಎಲ್ಲಾ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.

ಜೂನ್ 2ರಂದು ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ. ಸಭೆಯಲ್ಲಿ ಇನ್ನೂ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬರುತ್ತಿರುವ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿ ಆಗಲಿದ್ದಾರೆ. ಆ ರಾಜ್ಯಗಳೆಂದರೆ ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ ಮತ್ತು ಹರಿಯಾಣ‌. ವಿಶೇಷ ಎಂದರೆ ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿರುವ ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಸಭೆಯಲ್ಲಿ ಭಾಗಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಹತ್ವದ ಸಭೆಯಲ್ಲಿ ಕೊರೊನಾ ಸೋಂಕು ನಿಯಂತ್ರಣದ ಬಗ್ಗೆ ಚರ್ಚೆ ಆಗಲಿದೆ. ಗ್ರಾಮೀಣ ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ದೇಶಾದ್ಯಂತ ಕೊರೋನಾ ಲಸಿಕೆ ಕೊರತೆ ನಿರ್ಮಾಣವಾಗಿದ್ದು ವ್ಯಾಕ್ಸಿನೇಷನ್‌ ಬಗ್ಗೆಯೂ ಚರ್ಚೆ ನಡೆಯಲಿದೆ. ಇದರ ಜೊತೆಗೆ ತಜ್ಞರು ಮೂರನೇ ಅಲೆಯ ಕೊರೋನಾ ಬಂದೇ ಬರುತ್ತೆ. ಅದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತೆ ಎಂದು ಹೇಳಿರುವುದರಿಂದ ಅದಕ್ಕಾಗಿ ಮಾಡಿಕೊಳ್ಳಬೇಕಾದ ತಯಾರಿಗಳ ಬಗ್ಗೆಯೂ ಪ್ರಸ್ತಾಪ ಆಗುವ ಸಾಧ್ಯತೆ ಇದೆ.

ಮೇ ತಿಂಗಳ ಮಧ್ಯ ಭಾಗದಲ್ಲಿ ಕೊರೋನಾ ಎರಡನೇ ಅಲೆ ತಾರಕಕ್ಕೇ ಏರುತ್ತದೆ. ತಿಂಗಳ ಕೊನೆಯಲ್ಲಿ ಕಡಿಮೆ ಆಗುತ್ತದೆ ಎಂಬ ದೇಶಿಯ ಮತ್ತು ವಿದೇಶಿ ತಜ್ಞರ ಅಭಿಪ್ರಾಯದಂತೆ ಮೇ 6ರಂದು 4,14,188 ಪ್ರಕರಣಗಳು ಕಂಡುಬಂದಿದ್ದು ದೇಶದಲ್ಲಿ ದಿನ ಒಂದರಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಎಂಬ ದಾಖಲೆಯಾಗಿತ್ತು. ನಂತರ ಕೆಳಮುಖವಾಗಿ ಸಾಗಿದ್ದವು.

ಶುಕ್ರವಾರ 1,73,790 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,77,29,247ಕ್ಕೆ ಏರಿಕೆ ಆಗಿದೆ.‌ ಶುಕ್ರವಾರ 3,617 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 3,22,512ಕ್ಕೆ ಏರಿಕೆ ಆಗಿದೆ. ಈವರೆಗೆ 2,51,78,011 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 22,28,724 ಆಕ್ಟಿವ್ ಕೇಸುಗಳಿವೆ. ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಂಡವರ ಸಂಖ್ಯೆ 20 ಕೋಟಿ ದಾಟಿದೆ.‌ ಈವರೆಗೆ 20,89,02,445 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ. ದೇಶದಲ್ಲಿ ಸದ್ಯ ಗುಣಮುಖ ಆದದವರ ಪ್ರಮಾಣ ಶೇಕಡಾ 90.80ಕ್ಕೆ ಏರಿಕೆ ಆಗಿದೆ. ವಾರದ ಪಾಸಿಟಿವಿಟಿ ದರ ಶೇಕಡಾ 9.84ಕ್ಕೆ ಇಳಿಕೆ ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ‌.ಮೇ 24ರಂದು ಮೊದಲ ಬಾರಿಗೆ ಎರಡು ಲಕ್ಷಕ್ಕಿಂತ ಕಡಿಮೆ (1,96,427) ಪ್ರಕರಣಗಳು ಪತ್ತೆ ಆಗಿದ್ದವು. ಇದರ ಬಳಿಕ ನಿನ್ನೆಯವರೆಗೂ (ಮೇ 28) ದೇಶದಲ್ಲಿ ಒಂದು ಹೆಚ್ಚು ಪ್ರಕರಣಗಳು ಮತ್ತೊಂದು ದಿನ ಕಡಿಮೆ ಕೇಸುಗಳು ಬರುತ್ತಿದ್ದು ಹಾವು ಏಣಿ ಆಟದಂತಾಗಿತ್ತು. ಈಗ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ದೇಶದಲ್ಲಿ ಸದ್ಯ ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವುದು ತಮಿಳುನಾಡಿನಲ್ಲಿ. ಎರಡನೇ ಸ್ಥಾನದಲ್ಲಿ ಕೇರಳ ಇದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಸಂಪೂರ್ಣವಾಗಿ ಚೇತರಿಕೆಯ ಹಾದಿಯಲ್ಲಿರುವ ಮಹಾರಾಷ್ಟ್ರ ನಾಲ್ಕನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಪ್ರಕರಣಗಳು ಕಂಡು ಬರುತ್ತಿರುವ ನಾಲ್ಕು ರಾಜ್ಯಗಳೂ ದಕ್ಷಿಣ ಭಾರತಕ್ಕೆ ಸೇರಿದವಾಗಿವೆ. ಸಾವಿನ ಸಂಖ್ಯೆಯಲ್ಲಿ ಹಾಗೂ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲೂ ದಕ್ಷಿಣ ಭಾರತದ ರಾಜ್ಯಗಳೇ ಮುಂದೆ ಇವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *