HBD Ravichandran: ಜನ್ಮದಿನಕ್ಕೆ ಮೂರು ಹೊಸ ಕನಸುಗಳ ಉಡುಗೊರೆ ನೀಡಿದ ‘ಕ್ರೇಜಿ ಸ್ಟಾರ್’

ಹೈಲೈಟ್ಸ್‌:

  • ‘ಕ್ರೇಜಿ ಸ್ಟಾರ್’ ರವಿಚಂದ್ರನ್‌ ಅವರಿಗೆ ಇಂದು 60ನೇ ಹುಟ್ಟುಹಬ್ಬದ ಸಂಭ್ರಮ
  • ಜನ್ಮದಿನದಂದು ಮೂರು ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಮಾಹಿತಿ ನೀಡಿದ ಕ್ರೇಜಿ ಸ್ಟಾರ್‌
  • ಇಂದು ರವಿಚಂದ್ರನ್ ನಟನೆಯ ಕನ್ನಡಿಗ ಚಿತ್ರದ ಮೊದಲ ಟೀಸರ್ ರಿಲೀಸ್‌

ಸ್ಯಾಂಡಲ್‌ವುಡ್‌ನ ಶೋ ಮ್ಯಾನ್‌ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರಿಗೆ ಈ ಬಾರಿಯ ಜನ್ಮದಿನ ತುಂಬ ವಿಶೇಷ. ಯಾಕೆಂದರೆ, ಇಂದು (ಮೇ 30) ಅವರಿಗೆ 60 ವರ್ಷಗಳು ತುಂಬಿವೆ. ಸಿನಿಮಾ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ರವಿಚಂದ್ರನ್, ಅತೀ ಚಿಕ್ಕ ವಯಸ್ಸಿಗೆ ನಿರ್ಮಾಪಕನಾಗಿ ಎಂಟ್ರಿ ಕೊಟ್ಟು, ನಂತರ ವಿಲನ್ ಆಗಿ ನಟಿಸಿ, ಬಳಿಕ ಹೀರೋ ಆಗಿ, ನಿರ್ದೇಶಕನಾಗಿ, ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಕಂಡವರು. ಎಲ್ಲೆಡೆ ಕೊರೊನಾ ಇರುವುದರಿಂದ ಈ ಬಾರಿಯೂ ಯಾವುದೇ ಸಂಭ್ರಮಾಚರಣೆ ಇಲ್ಲ. ಆದರೆ, ಅಭಿಮಾನಿಗಳಿಗೆ ಖುಷಿಯಾಗುವಂತಹ ಸುದ್ದಿಯೊಂದನ್ನು ರವಿಚಂದ್ರನ್ ಹಂಚಿಕೊಂಡಿದ್ದಾರೆ. ತಮ್ಮ 60ನೇ ಜನ್ಮದಿನದ ಸಲುವಾಗಿ ಮೂರು ಹೊಸ ಸಿನಿಮಾಗಳ ಘೋಷಣೆಯನ್ನು ವಿಶೇಷವಾಗಿ ಮಾಡಿದ್ದಾರೆ.

ಒಂದೇ ಟೀಸರ್‌ನಲ್ಲಿ ಮೂರು ಸಿನಿಮಾಗಳ ಘೋಷಣೆ
ಪ್ರಸ್ತುತ ರವಿಚಂದ್ರನ್ ನಿರ್ದೇಶನದ ‘ರವಿ ಬೋಪಣ್ಣ‘ ಎಂಬ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಕೊರೊನಾ ಲಾಕ್‌ಡೌನ್‌ ಇಲ್ಲದೇ ಹೋಗಿದ್ದರೆ, ಆ ಸಿನಿಮಾ ಇಷ್ಟೊತ್ತಿಗೆ ತೆರೆಗೆ ಬರಬೇಕಿತ್ತು. ಸುದೀಪ್ ಕೂಡ ಈ ಸಿನಿಮಾದಲ್ಲೊಂದು ಮಹತ್ವದ ಪಾತ್ರ ಮಾಡಿದ್ದಾರೆ. ಇನ್ನು, 60ನೇ ಜನ್ಮದಿನದ ಸಲುವಾಗಿ ಮೂರು ಸಿನಿಮಾಗಳ ಘೋಷಣೆಯನ್ನು ರವಿಚಂದ್ರನ್ ಮಾಡಿದ್ದಾರೆ. ಒಂದಷ್ಟು ವಿಶೇಷವಾದ ಕೋಟ್ಸ್‌ಗಳನ್ನು ಬಳಸಿ, 8 ನಿಮಿಷಗಳ ಅವಧಿಯ ಒಂದು ಟೀಸರ್ ಮಾಡಿದ್ದಾರೆ ಕ್ರೇಜಿ ಸ್ಟಾರ್. ಹಾಗಾದರೆ, ಆ ಮೂರು ಸಿನಿಮಾಗಳು ಯಾವುದು?

ಗಾಡ್‌, 60, ಬ್ಯಾಡ್ ಬಾಯ್ಸ್!
ರವಿಚಂದ್ರನ್ ಅವರು ಶುರು ಮಾಡಿರುವ ಹೊಸ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹೊಸ ಸಿನಿಮಾಗಳ ಮಾಹಿತಿ ಇರುವ ಟೀಸರ್ ರಿಲೀಸ್ ಆಗಿದೆ. ಒಂದು ಸಿನಿಮಾಕ್ಕೆ ‘ಗಾಡ್’ ಎಂದು ಹೆಸರಿಡಲಾಗಿದೆ. ಮತ್ತೊಂದು ’60’. ವಿಶೇಷವೆಂದರೆ, ಅದರಲ್ಲಿ ನಟಿ ಪಾವನಾ ಗೌಡ ಕೂಡ ಕಾಣಿಸಿಸಕೊಂಡಿದ್ದಾರೆ. ಕೊನೆಯದು ‘ಬ್ಯಾಡ್‌ ಬಾಯ್ಸ್’. ಇದರಲ್ಲಿ ರವಿಚಂದ್ರನ್ ಅವರೊಂದಿಗೆ ಅವರ ಪುತ್ರರಾದ ಮನೋರಂಜನ್ ಮತ್ತು ವಿಕ್ರಮ್ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಾದರೆ, ಒಂದೇ ಸಿನಿಮಾದಲ್ಲಿ ಅಪ್ಪ-ಮಕ್ಕಳು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಾ? ಸದ್ಯ ಹೀಗೊಂದು ಕುತೂಹಲವಂತೂ ಇದೆ.

ಇಂದು ಕನ್ನಡಿಗ ಟೀಸರ್
ರವಿಚಂದ್ರನ್‌ ನಟನೆಯ ಐತಿಹಾಸಿಕ ಸಿನಿಮಾ ‘ಕನ್ನಡಿಗ’. ಜಟ್ಟ, ಮೈತ್ರಿ ಖ್ಯಾತಿಯ ಬಿ.ಎಂ. ಗಿರಿರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ರವಿಚಂದ್ರನ್‌ ಜೊತೆಗೆ ಪಾವನಾ ಗೌಡ, ರಾಕ್‌ಲೈನ್ ವೆಂಕಟೇಶ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯವಾಗಿದ್ದು, ಇಂದು ರವಿಚಂದ್ರನ್‌ ಹುಟ್ಟುಹಬ್ಬದ ಸಲುವಾಗಿ ‘ಕನ್ನಡಿಗ’ನ ಮೊದಲ ಟೀಸರ್ ರಿಲೀಸ್ ಆಗಲಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *