Karnataka: KSRTC ಅಂದ್ರೆ ಇನ್ಮೇಲೆ ಕರ್ನಾಟಕ ಸಾರಿಗೆ ಅಲ್ಲ, ಕೇರಳ ಸಾರಿಗೆ

ಬೆಂಗಳೂರು(ಜೂ. 03): ಕೆಎಸ್​ಆರ್​ಟಿಸಿ (KSRTC) ಲೋಗೋ ಬಳಕೆ ವಿಚಾರವಾಗಿ ಕರ್ನಾಟಕ ಮತ್ತು ಕೇರಳ ನಡುವೆ ನಡೆಯುತ್ತಿದ್ದ ತಿಕ್ಕಾಟಕ್ಕೆ ಬ್ರೇಕ್ ಬಿದ್ದಿದ್ದು, ಕರ್ನಾಟಕ ರಾಜ್ಯಕ್ಕೆ ಹಿನ್ನಡೆಯಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(Karnataka State Road Transport Corporation)- ಈ ಲೋಗೋವನ್ನು ಇನ್ಮುಂದೆ ಕರ್ನಾಟಕ ಬಳಸುವಂತಿಲ್ಲ. ಈಗ ಕೆಎಸ್​ಆರ್​ಟಿಸಿ ಲೋಗೋ(KSRTC Logo) ಕೇರಳದ ಪಾಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್​ ಮಾರ್ಕ್​ ರಿಜಿಸ್ಟ್ರಿ (Trade Mark Registry)​ ಆದೇಶ ಹೊರಡಿಸಿದೆ.

27 ವರ್ಷಗಳ ಕಾನೂನು ಹೋರಾಟದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಕೆಎಸ್​ಆರ್​ಟಿಸಿ(ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್​ಪೋರ್ಟ್​ ಕಾರ್ಪೋರೇಷನ್) ಹೆಸರಿನಲ್ಲಿ ಸಾರಿಗೆ ಬಸ್​ಗಳ ರಸ್ತೆಗಿಳಿಯುತ್ತಿದ್ದವು. ಅತ್ತ ಕೇರಳದಲ್ಲಿಯೂ ಸಹ ಕೇರಳ  ಸ್ಟೇಟ್​ ರೋಡ್ ಟ್ರಾನ್ಸ್​ಪೋರ್ಟ್​ ಕಾರ್ಪೋರೇಷನ್-ಕೆಎಸ್​ಆರ್​ಟಿಸಿ(Kerala State Road Transport Corporation) ಹೆಸರಿನಲ್ಲಿ ಬಸ್​ಗಳು ಕಾರ್ಯಾಚರಣೆ ಮಾಡುತ್ತಿದ್ದವು. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್​ಗಳು ಕೆಎಸ್​ಆರ್​ಟಿಸಿ ಟ್ರೇಡ್​ ಮಾರ್ಕ್​ನ್ನು ಬಳಸುತ್ತಿದ್ದವು.

ಕೇರಳ 1965ರಿಂದಲೇ ಕೆಎಸ್​ಆರ್​ಟಿಸಿ ಟ್ರೇಡ್​ ಮಾರ್ಕ್​ನ್ನು ಬಳಸುತ್ತಿದೆ. ಕರ್ನಾಟಕ ಸರ್ಕಾರ 1973ರಿಂದ ಕೆಎಸ್​ಆರ್​​ಟಿಸಿ ಹೆಸರನ್ನು ಬಳಸುತ್ತಿದೆ. ಹೀಗಾಗಿ ನಾವು ಮೊದಲು ಕೆಎಸ್​ಆರ್​ಟಿಸಿ ಹೆಸರು ಬಳಸಿರುವುದರಿಂದ ನಮಗೆ ಈ ಟ್ರೇಡ್ ಮಾರ್ಕ್​ ಕೊಡಬೇಕೆಂದು ಕೇರಳ ಸುದೀರ್ಘ 27 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿತ್ತು.

ಆದ್ರೆ ಈ ಬಗ್ಗೆ 2014ರಲ್ಲಿ ಕೇರಳಕ್ಕೆ ಈ ಟ್ರೇಡ್ ಮಾರ್ಕ್ ಬಳಸದಂತೆ ಕರ್ನಾಟಕ ಸರ್ಕಾರ ಸೂಚಿಸಿತ್ತು. ಜೊತೆಗೆ ಕರ್ನಾಟಕ ಕೇರಳಕ್ಕೆ ನೋಟಿಸ್ ಜಾರಿ ಮಾಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್ ಮಾರ್ಕ್​​ಗಳ ರಿಜಿಸ್ಟ್ರಿ ಕೇರಳ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅಂತಿಮವಾಗಿ ಕೆಎಸ್​ಆರ್​ಟಿಸಿ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಟ್ರೇಡ್​ ಮಾರ್ಕ್ ರಿಜಿಸ್ಟ್ರಿ ಕೇರಳ ಸರ್ಕಾರಕ್ಕೆ ಕೆಎಸ್​ಆರ್​​ಟಿಸಿ ಟ್ರೇಡ್​​ ಮಾರ್ಕ್​ ನೀಡಿದೆ. ಸದ್ಯ ಈ ಬಗ್ಗೆ ಕೇರಳ ಸಾರಿಗೆ ಸಂಸ್ಥೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಕೆಎಸ್​ಆರ್​​ಟಿಸಿ ಟ್ರೇಡ್​ ಮಾರ್ಕ್​​ ಕೇರಳ ಪಾಲಾದ ವಿಚಾರವಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಶಿವಯೋಗಿ ಕಳಸದ್  ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಇದು ನಮ್ಮ ಗಮನಕ್ಕೆ ಬಂದಿದೆ.  ಆದ್ರೆ ನಮಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಅಧಿಕೃತ ಆದೇಶ ಕೈ ಸೇರಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಕಾನೂನಿನಡಿ ಮುಂದೆ ಹೇಗೆ ಹೋರಾಟ ಮಾಡಬೇಕು ಅನ್ನೋದನ್ನ ತೀರ್ಮಾನ ಮಾಡುತ್ತೇವೆ.  ಟ್ರೇಡ್ ಮಾರ್ಕ್​ಗಳ  ರಿಜಿಸ್ಟಾರ್ ಚೆನ್ನೈನಲ್ಲಿದೆ.  ಈ ಟ್ರೇಡ್ಮಾರ್ಕ್ ವಿವಾದ ಆರೇಳು ವರ್ಷಗಳಿಂದ ನಡೆಯುತ್ತಿತ್ತು.ನಾವು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ ಎಂದಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *