ಸಚಿವ ಬಿ ಸಿ ಪಾಟೀಲ್ ಗೆ ಕೊರೋನಾ ಪಾಸಿಟಿವ್
ಕೃಷಿ ಸಚಿವ ಬಿ.ಸಿ ಪಾಟೀಲ್ಗೆ ಕೊರೋನಾ ಮಹಾಮಾರಿ ವಕ್ಕರಿಸಿದೆ. ತಮಗೆ ಪಾಸಿಟಿವ್ ಬಂದಿದೆ ಎಂದು ಸ್ವತಃ ಬಿಸಿ ಪಾಟೀಲ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಮಧ್ಯಾಹ್ನ ಪತ್ನಿ, ಅಳಿಯ ಹಾಗೂ ತಮ್ಮ ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿತ್ತು. ಇದೀಗ ನನಗೂ ಪಾಸಿಟಿವ್ ಬಂದಿದೆ.
ಹೀಗಾಗಿ ಬೆಂಗಳೂರಿನ ನನ್ನ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ. ಕೊಪ್ಪಳ ಜಿಲ್ಲೆಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ನನ್ನ ಜೊತೆ ಆಗಮಿಸಿದ ಐದು ಜನ ಸಿಬ್ಬಂದಿಗೂ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ.
ಅಲ್ಲದೇ ಇತ್ತೀಚೆಗೆ ನನ್ನನ್ನು ಹಿರೇಕೆರೂರು ಹಾಗೂ ಕೊಪ್ಪಳ ಭಾಗದಲ್ಲಿ ಭೇಟಿಯಾದ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರು, ಯಾರಿಗಾದರೂ ಕೋವಿಡ್ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಗಾಗಿ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.