ಆಡಿದ ಮಾತಿನಂತೆ ಧನಸಹಾಯ ಮಾಡಿದ ಯಶ್‌ಗೆ ಕೃತಜ್ಞತೆ ಸಲ್ಲಿಸಿದ ಕಲಾಬಂಧುಗಳು

ಹೈಲೈಟ್ಸ್‌:

  • ನುಡಿದಂತೆ ನಡೆದ ಯಶ್
  • ಕಲಾಬಂಧುಗಳ ಅಕೌಂಟ್‌ಗೆ 5000 ರೂಪಾಯಿ ಜಮೆ ಮಾಡಿದ ಯಶ್
  • ಯಶ್ ದೊಡ್ಡತನಕ್ಕೆ ಧನ್ಯವಾದ ಎಂದ ಕಲಾಬಂಧುಗಳು

ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಿನಿಮಾರಂಗವನ್ನೇ ನಂಬಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ರಾಕಿ ಭಾಯ್

ಯಶ್ ಮನಸ್ಸು ಮಾಡಿದ್ದರು.

”ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆಗೆ ನಿಲ್ಲುವ ಸಮಯವಿದು” ಎಂದು ಹೇಳುತ್ತಾ ಕನ್ನಡ ಚಿತ್ರರಂಗವನ್ನೇ ನಂಬಿರುವ 3000ಕ್ಕೂ ಅಧಿಕ ಕಲಾವಿದರು, ಕಾರ್ಮಿಕರು ಹಾಗೂ ತಂತ್ರಜ್ಞರಿಗೆ ತಲಾ 5000 ರೂಪಾಯಿ ಧನಸಹಾಯ ಮಾಡುವುದಾಗಿ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದರು. ಇದೀಗ ಅದೇ ಕೆಲಸ ನೆರವೇರಿದೆ.

ಆರ್ಥಿಕ ಮುಗ್ಗಟ್ಟಿನಿಂದ ಒದ್ದಾಡುತ್ತಿರುವ ಪೋಷಕ ಕಲಾವಿದರು, ಹಿರಿಯ ನಟ-ನಟಿಯರು, ಕಾರ್ಮಿಕರಿಗೆ ಯಶ್ ನೆರವು ನೀಡಿದ್ದಾರೆ. ಕನ್ನಡ ಸಿನಿ ಕುಟುಂಬದ ಅನೇಕರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ನಟ ಯಶ್ ಕಡೆಯಿಂದ 5000 ರೂಪಾಯಿ ಜಮೆಯಾಗಿದೆ.

ತಮ್ಮ ಸಂಪಾದನೆಯ ಹಣದಿಂದ ಎಲ್ಲರಿಗೂ ಸಹಾಯ ಮಾಡಿರುವ ಯಶ್‌ಗೆ ಕಲಾಬಂಧುಗಳು ಕೃತಜ್ಞತೆ ಸಲ್ಲಿಸಿದ್ದಾರೆ. ನಟ, ಕಲಾ ನಿರ್ದೇಶಕ ಅರುಣ್ ಸಾಗರ್, ನಟಿ ಪ್ರೀತಿ, ಪೋಷಕ ನಟ ಗಣೇಶ್ ರಾವ್ ಕೇಸರ್ಕರ್ ಸೇರಿದಂತೆ ಅನೇಕರು ರಾಕಿಂಗ್ ಸ್ಟಾರ್ ಯಶ್‌ಗೆ ವಿಡಿಯೋ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ನಟ ಅರುಣ್ ಸಾಗರ್
”ಇಡೀ ಜಗತ್ತು ಕೊರೊನಾ ಮಹಾಮಾರಿಯಿಂದ ಒದ್ದಾಡುತ್ತಿದೆ. ನಮ್ಮ ಚಿತ್ರರಂಗದ ಎಲ್ಲರೂ ಕೂಡ ಕಷ್ಟದಲ್ಲಿದ್ದಾರೆ. ನಮ್ಮೆಲ್ಲರನ್ನೂ ನಿಮ್ಮ ಕುಟುಂಬ ಎಂದುಕೊಂಡು ಪ್ರತಿಯೊಬ್ಬರಿಗೂ 5 ಸಾವಿರ ರೂಪಾಯಿ ಕೊಟ್ಟಿದ್ದೀರಾ. ಕಲಾ ನಿರ್ದೇಶಕರ ಸಂಘದ ಅಧ್ಯಕ್ಷನಾಗಿ ನಮ್ಮ ಸದಸ್ಯರ ಪರವಾಗಿ ನಿಮಗೆ ಹೃದಯಪೂರ್ವಕವಾಗಿ ಕೃತಜ್ಞತೆಯನ್ನು ನಾನು ನಿಮಗೆ ಸಲ್ಲಿಸುತ್ತಿದ್ದೇನೆ. ಈ ಸಮಯಕ್ಕೆ ನಿಜವಾಗಿಯೂ ನೀವು ದಾರಿದೀಪವಾಗಿದ್ದೀರಾ” ಎಂದಿದ್ದಾರೆ ನಟ, ಕಲಾ ನಿರ್ದೇಶಕ ಅರುಣ್ ಸಾಗರ್

ನಟಿ ಪ್ರೀತಿ
”ಯಶ್ ಅವರು ನಮ್ಮ ಅಕೌಂಟ್‌ಗೆ ಐದು ಸಾವಿರ ರೂಪಾಯಿಗಳನ್ನು ಕಳುಹಿಸಿದ್ದಾರೆ. ಎಷ್ಟೋ ಜನ ಊಟ-ತಿಂಡಿಗೆಂದು ನಮಗೆ ಸಹಾಯ ಮಾಡುತ್ತಿದ್ದಾರೆ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಯಶ್ ನಮಗೆ ಧನಸಹಾಯ ಮಾಡಿದ್ದಾರೆ. ನಮಗೆಲ್ಲ ತುಂಬಾ ಖುಷಿಯಾಗಿದೆ. ಯಶ್‌ಗೆ ಇನ್ನೂ ಹೆಚ್ಚಿನ ಗೆಲುವು ಸಿಗಲಿ” ಅಂತ ನಟಿ ಪ್ರೀತಿ ಹೇಳಿದ್ದಾರೆ.

ಐ ಲವ್ ಯೂ ಯಶ್ ಸಾರ್
”ಕೊರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಖಾತೆಗೆ ಹಣ ಹಾಕಿ ಯಶ್ ದೊಡ್ಡತನ ಮೆರೆದಿದ್ದಾರೆ. ರಿಯಲಿ ಗ್ರೇಟ್ ಯಶ್ ಸಾರ್. ನಿಮಗೆ ತಾಯಿ ಚಾಮುಂಡೇಶ್ವರಿ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ಇವತ್ತು ಕೊಡುವಂತಹ ಮನಸ್ಸು ಎಲ್ಲರಿಗೂ ಬರಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಒಂದೊಂದು ರೂಪಾಯಿಯೂ ಅಮೂಲ್ಯ. ಅಂಥದ್ರಲ್ಲಿ ಐದು ಸಾವಿರ ರೂಪಾಯಿ ಕೊಟ್ಟಿದ್ದೀರಾ. ಐ ಲವ್ ಯೂ ಯಶ್ ಸಾರ್” ಅಂತ ನಟರೊಬ್ಬರು ಚಿತ್ರರಂಗದವರೊಬ್ಬರು ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.

ಗಣೇಶ್ ರಾವ್ ಕೇಸರ್ಕರ್
”ಸಲಾಂ ರಾಕಿ ಭಾಯ್.. ಸಂಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮ ಕಲಾ ಕುಟುಂಬದ ಪ್ರತಿಯೊಬ್ಬರಿಗೂ ಐದು ಸಾವಿರ ರೂಪಾಯಿ ಕೊಟ್ಟಿದ್ದೀರಾ. ನಮ್ಮ ಕಷ್ಟಕ್ಕೆ ಸ್ಪಂದಿಸಿದ್ದೀರಾ. ನಿಮಗೆ ಧನ್ಯವಾದಗಳು. ಭಗವಂತ ನಿಮಗೆ ಒಳ್ಳೆಯದು ಮಾಡಲಿ ಅಂತ ಪ್ರಾರ್ಥಿಸುತ್ತೇನೆ” ಅಂತ ಪೋಷಕ ನಟ ಗಣೇಶ್ ರಾವ್ ಕೇಸರ್ಕರ್ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *