KSRTC ಬ್ರ್ಯಾಂಡ್ ಕರ್ನಾಟಕದ ಕೈ ತಪ್ಪಿಲ್ಲ; ಕೆಎಸ್ಆರ್ಟಿಸಿ ಟ್ರೇಡ್ಮಾರ್ಕ್ ವಿವಾದದ ಬಗ್ಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ
ಬೆಂಗಳೂರು (ಜೂನ್ 5): ಕೆಎಸ್ಆರ್ಟಿಸಿ ಲೋಗೋವನ್ನು ಕರ್ನಾಟಕ ಸಾರಿಗೆ ಬಳಸುವಂತಿಲ್ಲ, ಅದು ಕೇರಳ ರಾಜ್ಯದ ಪಾಲಾಗಿದೆ ಎಂಬ ಸುದ್ದಿಯನ್ನು ರಾಜ್ಯದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರಾಕರಿಸಿದ್ದಾರೆ. ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಸವದಿ, KSRTC ಬ್ರ್ಯಾಂಡ್ ಕೇರಳದ ಪಾಲಾಗಿಲ್ಲ. ಕೆಎಸ್ಆರ್ಟಿಸಿ ಎಂಬ ಹೆಸರು ಕರ್ನಾಟಕದ ಕೈತಪ್ಪಿದೆ ಎಂಬ ಆತಂಕ ಇಲ್ಲ. KSRTC ಎಂಬ ಹೆಸರನ್ನು ಬಳಸಲು ನಾವು ಸ್ವತಂತ್ರವಾಗಿದ್ದೇವೆ. ಈ ಬಗ್ಗೆ ಕೇರಳ ಸರ್ಕಾರದ ಅನುಮತಿ ನಮಗೆ ಬೇಕಾಗಿಲ್ಲ. ಅಗತ್ಯವಿದ್ದರೆ ನ್ಯಾಯಾಲಯಲ್ಲಿ ಕಾನೂನಾತ್ಮಕ ಹೋರಾಟಗಳನ್ನು ನಡೆಸಲು ನಾವು ಹಿಂದೆ ಬೀಳುವುದಿಲ್ಲ ಎಂದಿದ್ದಾರೆ.
KSRTC ಬ್ರಾಂಡ್ ಕೇರಳದ ಪಾಲಾಗಿದೆ ಎಂಬುದು ಸತ್ಯಕ್ಕೆ ದೂರವಾದದ್ದು. ಸಾರಿಗೆ ಸಂಸ್ಥೆಗೆ ಕೇಂದ್ರ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಎಂಬ ಹೆಸರಿದ್ದರೆ ಅದರಿಂದ ಕೇರಳ ರಾಜ್ಯದ ಕೆಎಸ್ಆರ್ಟಿಸಿ ಸಂಸ್ಥೆಗೆ ನಷ್ಟವೇನಿಲ್ಲ. ಕರ್ನಾಟಕವು ಕೇರಳದ ಸಾರಿಗೆ ಸಂಸ್ಥೆಗಳೊಂದಿಗೆ ಯಾವತ್ತೂ ಪೈಪೋಟಿಗೆ ಇಳಿದಿಲ್ಲ. ಇಂತಹ ವಿಷಯಗಳಲ್ಲಿ ಅನಗತ್ಯವಾಗಿ ವಿವಾದಗಳನ್ನು ಹೆಚ್ಚು ಮಾಡೋದು ಬೇಡ. ಪರಸ್ಪರ ರಾಜ್ಯಗಳಲ್ಲಿ ವಿವಾದಗಳನ್ನು ಬೆಳೆಸುವ ಪರಿಪಾಠಕ್ಕೆ ನಾವೆಲ್ಲರೂ ಅಂತ್ಯ ಹಾಡಬೇಕು. ದೇಶದ ಹಿತದೃಷ್ಟಿಯಿಂದ ರಾಜ್ಯ ರಾಜ್ಯಗಳ ನಡುವಿನ ಬಾಂಧವ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದ ವಿಷಯ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದರು.
ಕರ್ನಾಟಕದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ( ಕರ್ನಾಟಕ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ಕಾರ್ಫೋರೇಷನ್) ಈ ಹೆಸರಿನಲ್ಲಿ ಬಸ್ಗಳು ರಸ್ತೆಗಿಳಿಯುತ್ತಿದ್ದವು. ಅತ್ತ ಕೇರಳದಲ್ಲಿ ಕೇರಳ ಸ್ಟೇಟ್ ರೋಡ್ ಟ್ರಾನ್ಸ್ಪೋರ್ಟ್ ಹೆಸರಿನಲ್ಲಿ ರಸ್ತೆಗಿಳಿಯುತ್ತಿದ್ದ ಕೇರಳ ಸಾರಿಗೆ ಬಸ್ಗಳು ಸಂಚರಿಸುತ್ತಿದ್ದವು. ಎರಡೂ ರಾಜ್ಯದ ಸಾರಿಗೆ ಸಂಸ್ಥೆ ಬಸ್ಗಳು ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ ಬಳಸುತ್ತಿದ್ದವು. 2014ರಲ್ಲಿ ಕೇರಳಕ್ಕೆ ಈ ಟ್ರೇಡ್ ಮಾರ್ಕ್ ಬಳಸದಂತೆ ಕೇರಳಕ್ಕೆ ಕರ್ನಾಟಕ ನೋಟಿಸ್ ಜಾರಿ ಮಾಡಿತ್ತು.
ಕೇರಳ 1965ರಿಂದಲೇ ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ನ್ನು ಬಳಸುತ್ತಿದೆ. ಕರ್ನಾಟಕ ಸರ್ಕಾರ 1973ರಿಂದ ಕೆಎಸ್ಆರ್ಟಿಸಿ ಹೆಸರನ್ನು ಬಳಸುತ್ತಿದೆ. ಹೀಗಾಗಿ ನಾವು ಮೊದಲು ಕೆಎಸ್ಆರ್ಟಿಸಿ ಹೆಸರು ಬಳಸಿರುವುದರಿಂದ ನಮಗೆ ಈ ಟ್ರೇಡ್ ಮಾರ್ಕ್ ಕೊಡಬೇಕೆಂದು ಕೇರಳ ಕಾನೂನು ಹೋರಾಟ ನಡೆಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ಅಧೀನದ ಟ್ರೇಡ್ ಮಾರ್ಕ್ಗಳ ರಿಜಿಸ್ಟರ್ಗೆ ಕೇರಳ ಸರ್ಕಾರ ಅರ್ಜಿ ಸಲ್ಲಿಸಿತ್ತು.
ಈ ಎರಡೂ ರಾಜ್ಯಗಳ ತಿಕ್ಕಾಟದ ಬಗ್ಗೆ ಸುದೀರ್ಘ 8 ವರ್ಷಗಳಿಂದ ನಡೆದಿದ್ದ ಕಾನೂನು ಹೋರಾಟದಲ್ಲಿ ಕೊನೆಗೆ ಅಂತಿಮವಾಗಿ ಕೇರಳಕ್ಕೆ ಜಯ ಸಿಕ್ಕಿತ್ತು. ಕೆಎಸ್ಆರ್ಟಿಸಿ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯ ಆಧಾರದಲ್ಲಿ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಕೇರಳ ಸರ್ಕಾರಕ್ಕೆ ಕೆಎಸ್ಆರ್ಟಿಸಿ ಟ್ರೇಡ್ ಮಾರ್ಕ್ ನೀಡಿತ್ತು. ಆದರೆ, ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಲೋಗೋ ಬಳಸಬಾರದು ಎಂದು ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.