Dilip Kumar Hospitalized: ಉಸಿರಾಟ ಸಮಸ್ಯೆಯಿಂದ ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು
ನವದೆಹಲಿ(ಜೂ.06): ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಉಸಿರಾಟ ಸಮಸ್ಯೆಯಿಂದ ಇಂದು ಬೆಳಗ್ಗೆ ಮುಂಬೈನ ಹಿಂದುಜ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ನಟನ ಅಧಿಕೃತ ಟ್ವಿಟರ್ ಖಾತೆಯಿಂದ ಮಾಹಿತಿ ಲಭಿಸಿದೆ. ದಿಲೀಪ್ ಕುಮಾರ್ ಆರೋಗ್ಯದ ಬಗ್ಗೆ ಅವರ ಮ್ಯಾನೇಜರ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
’ಇಂದು ಬೆಳಗ್ಗೆ ದಿಲೀಪ್ ಸಾಹೇಬರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಮುಂಬೈನ ಹಿಂದುಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ.ನಿತಿನ್ ಗೋಖಲೆ ಅವರ ನೇತೃತ್ವದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ದಿಲೀಪ್ ಕುಮಾರ್ ಸಾಹೇಬರು ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ದಿಲೀಪ್ ಕುಮಾರ್ ಅವರಿಗೆ ನುರಿತ ಹಿರಿಯ ವೈದ್ಯರ ತಂಡ, ಹೃದಯ ತಜ್ಞ ಡಾ.ನಿತಿನ್ ಗೋಖಲೆ ಮತ್ತು ಡಾ. ಜಲೀಲ್ ಪಾರ್ಕರ್ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಬಹಳ ಹತ್ತಿರದಿಂದ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಿದ್ದಾರೆ. 98 ವರ್ಷದ ನಟ ದಿಲೀಪ್ ಕುಮಾರ್ ಕಳೆದ ತಿಂಗಳು ತಮ್ಮ ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿ, 2 ದಿನಗಳ ಬಳಿಕ ಡಿಸ್ಚಾರ್ಜ್ ಆಗಿದ್ದರು.
ಕಳೆದ ವರ್ಷ ದಿಲೀಪ್ ಕುಮಾರ್ ಕೊರೋನಾದಿಂದಾಗಿ ತಮ್ಮ ಸಹೋದರರಾದ ಅಸ್ಲಾಂ ಖಾನ್(88) ಮತ್ತು ಇಸಾನ್ ಖಾನ್(90) ಅವರನ್ನು ಕಳೆದುಕೊಂಡಿದ್ದರು.
ದುರಂತ ನಾಯಕ ದಿಲೀಪ್ ಕುಮಾರ್ ಅವರಿಗೆ ಕಳೆದ 2 ದಿನಗಳಿಂದ ಉಸಿರಾಟದ ತೊಂದರೆ ಕಾಣಿಸಿತ್ತು. ಇವರ ಪತ್ನಿ, ನಟಿ ಸೈರಾ ಬಾನು ವೈದ್ಯರನ್ನು ಸಂಪರ್ಕಿಸಿ, ಆಸ್ಪತ್ರೆಗೆ ಸೇರಿಸಿದ್ದರು. ಕೆಲವು ತಪಾಸಣೆ ಹಾಗೂ ಎಕ್ಸ್ರೇ ಮಾಡಿದ ವೈದ್ಯರು ಇನ್ನೂ ಕೆಲ ದಿನ ಆಸ್ಪತ್ರೆಯಲ್ಲೇ ಇರುವಂತೆ ಹೇಳಿದ್ದಾರೆ. ಸದ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಮಾಡುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ತನ್ನ ಗಂಡನ ಆರೋಗ್ಯ ಚೇತರಿಕೆಗಾಗಿ ಸೈರಾ ಬಾನು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ದಿಲೀಪ್ ಕುಮಾರ್ ಮಾತ್ರವಲ್ಲದೇ ಅವರ ಪತ್ನಿ ಸೈರಾ ಬಾನು ಅವರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಸದ್ಯ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
ಕಳೆದ ವರ್ಷ ದೇಶಾದ್ಯಂತ ಲಾಕ್ಡೌನ್ ಹೇರುವ ಮುನ್ನ ದಿಲೀಪ್ ಕುಮಾರ್ ದಂಪತಿಗೆ ಕೊರೋನಾ ಸೋಂಕು ತಗುಲಿತ್ತು. ಹೀಗಾಗಿ ಅವರು ಕೆಲವು ದಿನ ಐಸೋಲೇಷನ್ ಮತ್ತು ಕ್ವಾರಂಟೈನ್ನಲ್ಲಿದ್ದರು.
ದಿಲೀಪ್ ಕುಮಾರ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ನಟನೆಯಿಂದ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವುಗಳಲ್ಲಿ ಕೊಹಿನೂರ್, ಮುಘಲ್-ಇ-ಅಜಾಂ, ಶಕ್ತಿ, ನಯಾ ದೌರ್ ಮತ್ತು ರಾಮ್ ಔರ್ ಶ್ಯಾಮ್ ಪ್ರಮುಖ ಸಿನಿಮಾಗಳಾಗಿವೆ. ಇವರ ಕೊನೆಯ ಚಿತ್ರ 1998ರಲ್ಲಿ ತೆರೆಕಂಡ ಖಿಲಾ.