Karnataka Unlock Rules: ಕರ್ನಾಟಕದಲ್ಲಿ ಇಂದಿನಿಂದ ಬಸ್ ಸಂಚಾರ ಆರಂಭ, ಸಬ್ ರಿಜಿಸ್ಟ್ರಾರ್ ಆಫೀಸ್ ಓಪನ್; ಅನ್​ಲಾಕ್​ ನಿಯಮಗಳ ಮಾಹಿತಿ ಇಲ್ಲಿದೆ

ಬೆಂಗಳೂರು (ಜೂನ್ 7): ಕಳೆದೊಂದು ತಿಂಗಳಿಗೂ ಹೆಚ್ಚು ಕಾಲದಿಂದ ಕರ್ನಾಟಕದಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ. ಜೂನ್ 14ರವರೆಗೂ ಲಾಕ್​ಡೌನ್ ಮುಂದುವರೆಯಲಿದೆ. ಆದರೆ, ಇಂದಿನಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಂತ ಹಂತವಾಗಿ ಅನ್​ಲಾಕ್ ಪ್ರಕ್ರಿಯೆ ಶುರುವಾಗಿದೆ. ರಾಜ್ಯಾದ್ಯಂತ ಇಂದಿನಿಂದ ಸಬ್​ ರಿಜಿಸ್ಟ್ರಾರ್​ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದೇ ರೀತಿ ಹಂತ ಹಂತವಾಗಿ ಅನ್​ಲಾಕ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಿದ್ದರೆ ಕರ್ನಾಟಕದಲ್ಲಿ ಯಾವುದಕ್ಕೆಲ್ಲ ಅವಕಾಶವಿದೆ? ಯಾವುದಕ್ಕೆ ಅನುಮತಿಯಿಲ್ಲ? ಯಾವ ವಲಯಗಳಿಗೆ ಅನ್​ಲಾಕ್​ ಘೋಷಿಸಲಾಗಿದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ…

ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿರುವುದರಿಂದ ಇಂದಿನಿಂದ ಅನ್​ಲಾಕ್​ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗುತ್ತಿದೆ. ಒಂದೇ ಸಮಯದಲ್ಲಿ ಎಲ್ಲ ಲಾಕ್​ಡೌನ್ ನಿಯಮಗಳನ್ನೂ ಸಡಿಲಗೊಳಿಸಿದರೆ ಮತ್ತೆ ಕೊರೋನಾ ಕೇಸುಗಳು ತಾರಕಕ್ಕೇರುವ ಅಪಾಯ ಇರುವುದರಿಂದ ಹಂತ ಹಂತವಾಗಿ ಅನ್​ಲಾಕ್ ಮಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆ ವಿಚಾರವಾಗಿ ಇಂದು ಸಂಜೆಯೊಳಗೆ ನಿರ್ಧಾರವಾಗಲಿದೆ. ಕೊರೋನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಅನ್​ಲಾಕ್​ ಪ್ರಕ್ರಿಯೆ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇಂದಿನಿಂದ ರಾಜ್ಯಾದ್ಯಂತ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಇಂದಿನಿಂದ ಕೈಗಾರಿಕೆಗಳಿಗೆ ಲಾಕ್​ಡೌನ್ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಸಬ್​ ರಿಜಿಸ್ಟ್ರಾರ್ ಕಚೇರಿಗಳನ್ನು ತೆರೆಯಲು ಸೂಚನೆ ನೀಡಲಾಗಿದೆ. ಈ ಮೂಲಕ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಕರ್ನಾಟಕದಲ್ಲಿ ಮತ್ತೆ ಚುರುಕು ಪಡೆದಿವೆ. ರಾಜ್ಯದಲ್ಲಿ ಅನ್ ಲಾಕ್ ಜಾರಿ ಬಗ್ಗೆ ಇಂದು ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಲಿದ್ದಾರೆ. ಹಂತ ಹಂತವಾಗಿ ಅನ್ ಲಾಕ್​ಗೆ ಮುಂದಾದ ಕರ್ನಾಟಕ ಸರ್ಕಾರ ಆರ್ಥಿಕ ಚಟುವಟಿಕೆಗಳತ್ತ ಚಿತ್ತ ನೆಟ್ಟಿದೆ. ಹೀಗಾಗಿ, ಇಂದಿನಿಂದ ರಾಜ್ಯಾದ್ಯಂತ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಆಗಲಿದೆ. ಕೋವಿಡ್ ನಿಯಮಾನುಸಾರ ಕಾರ್ಯ ಚಟುವಟಿಕೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ.

ಕೈಗಾರಿಕೆಗಳಿಗೆ ವಿನಾಯಿತಿ ನೀಡಿರುವುದರಿಂದ ದೂರದೂರುಗಳಿಂದ ಕಾರ್ಮಿಕರು ಬೆಂಗಳೂರಿಗೆ ಬರುತ್ತಿದ್ದಾರೆ. ಕ್ಯಾಬ್, ಆಟೋ, ಬೈಕ್ ಸೇರಿದಂತೆ ಸ್ವಂತ‌ ವಾಹನಗಳಲ್ಲಿ ನಗರಕ್ಕೆ ಆಗಮಿಸಿದ್ದಾರೆ. ಇದರಿಂದ ಇಂದು ಬೆಳಗ್ಗೆ ನೆಲಮಂಗಲ ನವಯುಗ ಟೋಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ತುಮಕೂರು, ದಾವಣಗೆರೆ, ಶಿವಮೊಗ್ಗ, ಹಾಸನ, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಜನರು ಬೆಂಗಳೂರಿಗೆ ಬರತೊಡಗಿರುವುದರಿಂದ ತುಮಕೂರು ಬೆಂಗಳೂರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ಶಿವಮೊಗ್ಗ, ಮೈಸೂರು, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇಂದಿನಿಂದ ಕಠಿಣ ಲಾಕ್​ಡೌನ್ ನಿಯಮಗಳನ್ನು ಕೊಂಚ ಸಡಿಲಗೊಳಿಸಲಾಗಿದೆ. ಜೂನ್ 14ರವರೆಗೆ ಸಂಜೆಯವರೆಗೂ ಹೋಟೆಲ್, ರೆಸ್ಟೋರೆಂಟ್​ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಪಾರ್ಸಲ್​ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬಾರ್​ಗಳು, ಚಿತ್ರಮಂದಿರಗಳು, ಶಾಪಿಂಗ್ ಮಾಲ್​ಗಳು, ಧಾರ್ಮಿಕ ಕೇಂದ್ರಗಳು, ಶಾಲಾ-ಕಾಲೇಜುಗಳು, ಜಾತ್ರೆಗಳು, ಸಾರ್ವಜನಿಕ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ.

ಕರ್ನಾಟಕದಲ್ಲಿ ನಿನ್ನೆ ಮತ್ತೆ ಕೊರೋನಾ ಕೇಸುಗಳು ಇಳಿಕೆಯಾಗಿದ್ದು, ಸಾವಿನ ಸಂಖ್ಯೆಯಲ್ಲಿಯೂ ಕೊಂಚ ಇಳಿಕೆಯಾಗಿದೆ. ನಿನ್ನೆ ಕೊರೋನಾ ಪಾಸಿಟಿವಿಟಿ ರೇಟ್ ಶೇ. 7.71 ದಾಖಲಾಗಿದೆ. ಕರ್ನಾಟಕದಲ್ಲಿ ನಿನ್ನೆ 12,209 ಕೊರೊನಾ ಕೇಸ್ ಪತ್ತೆಯಾಗಿವೆ. ಭಾನುವಾರ ಒಂದೇ ದಿನ 320 ಜನ ಕೊರೋನಾಗೆ ಬಲಿಯಾಗಿದ್ದಾರೆ. 25,659 ಮಂದಿ ನಿನ್ನೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ 2,944 ಕೊರೋನಾ ಕೇಸ್ ಪತ್ತೆಯಾಗಿದೆ. 187 ಮಂದಿ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದು, 10,224 ಜನರು ಡಿಸ್ಚಾರ್ಜ್ ಆಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *