ಜಾರಕಿಹೊಳಿ ಸಿ.ಡಿ ಕೇಸ್‌ಗೆ ಹೊಸ ಟ್ವಿಸ್ಟ್‌: ‘ಎಸ್‌ಐಟಿ’ ರದ್ದು ಕೋರಿ ಹೈಕೋರ್ಟ್‌ ಮೊರೆ ಹೋದ ಸಂತ್ರಸ್ತೆ!

ಹೈಲೈಟ್ಸ್‌:

  • ರಮೇಶ್‌ ಜಾರಕಿಹೊಳಿ ಸಿ.ಡಿ ಕೇಸ್‌ಗೆ ಹೊಸ ಟ್ವಿಸ್ಟ್‌
  • ಎಸ್‌ಐಟಿ ರದ್ದು ಕೋರಿ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ ಸಂತ್ರಸ್ತೆ
  • ಹೈಕೋರ್ಟ್‌ನಿಂದ ಸರಕಾರ, ಗೃಹ ಇಲಾಖೆಗೆ ನೋಟಿಸ್‌ ಜಾರಿ

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. ಇದರಿಂದಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕ ಸದಸ್ಯಪೀಠ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಮತ್ತು ಎಸ್‌ಐಟಿಗೆ ನೋಟಿಸ್‌ ಜಾರಿ ಮಾಡಿದೆ.

ಅರ್ಜಿದಾರರ ಪರ ವಕೀಲರು, ”ಎಸ್‌ಐಟಿ ರಚನೆ ಮಾಡುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವರು 2021ರ ಮಾ.10ರಂದು ಬರೆದ ಪತ್ರ ರದ್ದುಪಡಿಸಬೇಕು. ಮಾ.11ರಂದು ಎಸ್‌ಐಟಿ ರಚಿಸಿದ ಆದೇಶ ರದ್ದುಪಡಿಸಬೇಕು ಮತ್ತು ಎಸ್‌ಐಟಿ ಈವರೆಗೂ ನಡೆಸಿರುವ ತನಿಖೆ ರದ್ದುಗೊಳಿಸಬೇಕು. ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ಹೊಸದಾಗಿ ತನಿಖೆ ನಡೆಸುವುದಕ್ಕೆ ತನಿಖಾ ಸಂಸ್ಥೆ ಅಥವಾ ಹೊಸ ತನಿಖಾ ತಂಡ ನೇಮಿಸಬೇಕು,” ಎಂದು ಕೋರಿದರು.

”ಅತ್ಯಾಚಾರ ಪ್ರಕರಣದಲ್ಲಿ ವೈದ್ಯಕಿಯ ಪರೀಕ್ಷೆ ನಡೆಸುವುದು ಕಡ್ಡಾಯ. ಅದಕ್ಕಾಗಿ ರಕ್ತದ ಮಾದರಿ, ಕೂದಲು, ವೀರ್ಯ, ಗಂಟಲು ದ್ರವ ಮತ್ತು ಉಗುರು ಸೇರಿ ಮುಂತಾದವುಗಳನ್ನು ಪಡೆದು ಡಿಎನ್‌ಎ ಪರೀಕ್ಷೆ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪಿ ರಮೇಶ್‌ ಜಾರಕಿಹೊಳಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದು ಕೇವಲ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಿದ್ದಾರೆ. ಆದರೆ, ನಿಯಮಗಳ ಪ್ರಕಾರ ನಡೆಸಬೇಕಾದ ಕಡ್ಡಾಯ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ,” ಎಂದು ಅರ್ಜಿಯಲ್ಲಿ ದೂರಲಾಗಿದೆ.

”ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಮತ್ತು ಕೋರ್ಟ್‌ ವಿಚಾರಣೆ ಪ್ರಕ್ರಿಯೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಮಹತ್ವದ ಪಾತ್ರ ವಹಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಪ್ರಕರಣದಿಂದ ರಮೇಶ್‌ ಜಾರಕಿಹೊಳಿ ರಕ್ಷಣೆ ಮಾಡುವುದಕ್ಕಾಗಿ ಎಸ್‌ಐಟಿ ಉದ್ದೇಶ ಪೂರ್ವಕವಾಗಿ ಸೂಕ್ತ ತನಿಖೆ ನಡೆಸಿಲ್ಲ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

“ಈಗಾಗಲೇ ತನಿಖೆ ಸಾಕಷ್ಟು ವಿಳಂಬವಾಗಿದೆ. ಪ್ರಕರಣ ದಾಖಲಾಗಿ ಈಗಾಗಲೇ ಎರಡು ತಿಂಗಳು ಕಳೆದಿದೆ. ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿದ್ದಾರೆ. ಆರೋಪಿಗೆ ಗೃಹ ಸಚಿವರೊಂದಿಗೆ ನಿಕಟ ಸಂಪರ್ಕವಿದೆ. ಹೀಗಾಗಿ, ಸರಕಾರ ನೇಮಿಸಿದ ತಂಡದಿಂದ ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ಸಾಧ್ಯವಿಲ್ಲ” ಎಂದು ಸಂತ್ರಸ್ತೆ ದೂರಿದ್ದಾಳೆ.

ನರೇಶ್‌ಗೌಡ, ಶ್ರವಣ್‌ಗೆ ನಿರೀಕ್ಷಣಾ ಜಾಮೀನು

ಇನ್ನೊಂದೆಡೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪ ಪ್ರಕರಣದಲ್ಲಿ ಮಾಜಿ ಪತ್ರಕರ್ತ ನರೇಶ್‌ಗೌಡ ಹಾಗೂ ಶ್ರವಣ್‌ಗೆ ಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ನರೇಶ್‌ ಗೌಡ ಹಾಗೂ ಶ್ರವಣ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 91ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಲಕ್ಷ್ಮೇನಾರಾಯಣ ಭಟ್‌ ಈ ಆದೇಶ ನೀಡಿದ್ದಾರೆ.

ಈ ಇಬ್ಬರ ವಿರುದ್ಧ ಜಾರಕಿಹೊಳಿ ಆಪ್ತ ನಾಗರಾಜ್‌ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಕಳೆದ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಬಂಧಿಸುವ ಸಾಧ್ಯತೆ ಇದ್ದುದರಿಂದ ನರೇಶ್‌ ಗೌಡ ಹಾಗೂ ಶ್ರವಣ್‌ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಎಸ್‌ ಪೊನ್ನಣ್ಣ ವಾದ ಮಂಡಿಸಿ, ”ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ರಮೇಶ್‌ ಜಾರಕಿಹೊಳಿ ಅವರನ್ನು ರಕ್ಷಿಸಲು ಎಸ್‌ಐಟಿ, ಅರ್ಜಿದಾರರು ಹಾಗೂ ಸಂತ್ರಸ್ತೆಯ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಆರೋಪಿಯನ್ನೇ ಅಮಾಯಕ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ,” ಎಂದರು.

”ಎಸ್‌ಐಟಿ ವಿಚಾರಣೆ ವೇಳೆ ರಮೇಶ್‌ ಜಾರಕಿಹೊಳಿ ಸಮ್ಮತಿಯಿಂದಲೇ ಲೈಂಗಿಗೆ ಸಂಪರ್ಕ ನಡೆದಿದ್ದಾಗಿ ಹೇಳಿದ್ದಾರೆ. ಇನ್ನು ಹಣ ಕೊಟ್ಟಿದ್ದರೆ ಯಾರು ಯಾರಿಗೆ ಎಷ್ಟೆಷ್ಟು ಹಣ ಕೊಟ್ಟಿದ್ದಾರೆಂದು ದಾಖಲಿಸಬೇಕಿತ್ತು. ಆದರೆ, ಎಸ್‌ಐಟಿ ಯಾವುದೇ ಸೂಕ್ತ ಆಧಾರವಿಲ್ಲದೆ ಅರ್ಜಿದಾರರ ವಿರುದ್ಧ ಆಕ್ಷೇಪಣೆ ಸಲ್ಲಿಸಿದೆ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ, ಜಾಮೀನು ನೀಡಬೇಕು” ಎಂದು ಕೋರಿದ್ದರು.

ನ್ಯಾಯಾಲಯ ಕೂಡ, “ಪ್ರಕರಣದಲ್ಲಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಪಡೆದಿದ್ದರೆ ಜಾರಕಿಹೊಳಿ ಯಾರು ಯಾರಿಗೆ ಎಷ್ಟೆಷ್ಟು ಹಣ ನೀಡಿದ್ದಾರೆಂದು ಏಕೆ ಉಲ್ಲೇಖಿಸಿಲ್ಲ,” ಎಂದು ಎಸ್‌ಐಟಿ ಪರ ವಕೀಲರನ್ನು ಪ್ರಶ್ನಿಸಿತ್ತು. ಎಸ್‌ಐಟಿ, “ಆರೋಪಿತರು ಯುವತಿಯೊಂದಿಗೆ ಸಂಚು ರೂಪಿಸಿ ಸಿ.ಡಿ ಸೃಷ್ಟಿಸಿ, ಹಣಕ್ಕಾಗಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ,” ಎಂದು ಆರೋಪಿಸಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *